ADVERTISEMENT

ಪಿಎಸ್‌ಐ ನೇಮಕಾತಿ | ಶೇ 30 ಮೀಸಲಾತಿ ಕಲ್ಪಿಸಲು ಒತ್ತಾಯ: ಸರ್ಕಾರಕ್ಕೆ ಪತ್ರ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2024, 15:57 IST
Last Updated 9 ಡಿಸೆಂಬರ್ 2024, 15:57 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ‘ಪೊಲೀಸ್‌ ಸಬ್‌ಇನ್‌ಸ್ಪೆಕ್ಟರ್‌ (ಪಿ.ಎಸ್‌.ಐ) ಹುದ್ದೆಗಳ ನೇಮಕಾತಿಯಲ್ಲಿ ಸೇವಾನಿರತ ಅಭ್ಯರ್ಥಿಗಳಿಗೆ ಈಗಿರುವ ಶೇ 10ರಷ್ಟು ಮೀಸಲಾತಿ ಪ್ರಮಾಣವನ್ನು ಶೇ 30ಕ್ಕೆ ಏರಿಸಬೇಕು’ ಎಂದು ರಾಜ್ಯದ ವಿವಿಧ ಪೊಲೀಸ್ ಠಾಣೆಗಳ ಸಿಬ್ಬಂದಿ ಮನವಿ ಮಾಡಿದ್ದಾರೆ.

ಈ ಸಂಬಂಧ ಸೇವಾನಿರತ ಪಿಎಸ್‌ಐ ಹುದ್ದೆ ಆಕಾಂಕ್ಷಿಗಳು ಮುಖ್ಯಮಂತ್ರಿ, ಗೃಹ ಸಚಿವರು ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿದ್ದು, ಇದೇ ವೇಳೆ ಮೀಸಲಾತಿ ಪ್ರಮಾಣ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದೂ ಕೋರಲಾಗಿದೆ.

‘ಮಲ್ಲಿಕಾರ್ಜುನ ಖರ್ಗೆ ಅವರು ಗೃಹಸಚಿವರಾಗಿದ್ದ ಅವಧಿಯಲ್ಲಿ ಸೇವಾನಿರತ ಅಭ್ಯರ್ಥಿಗಳಿಗಾಗಿಯೇ ಪ್ರತ್ಯೇಕ ಪಿಎಸ್‌ಐ ನೇಮಕಾತಿಯ ಅಧಿಸೂಚನೆ ಹೊರಡಿಸಿದ್ದರು. ಅದರಂತೆ 2001-02 ಹಾಗೂ 2002-03ರಲ್ಲಿ 300ಕ್ಕೂ ಹೆಚ್ಚು ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಆ ನಂತರ ಇದುವರೆಗೂ ಅಂತಹ ಪ್ರತ್ಯೇಕ ನೇಮಕಾತಿ ಅಧಿಸೂಚನೆ ನಡೆದಿಲ್ಲ’ ಎಂದು ಪತ್ರದಲ್ಲಿ ಬರೆಯಲಾಗಿದೆ. 

‘ಕರ್ನಾಟಕ ಹೊರತುಪಡಿಸಿ ಬೇರೆ ರಾಜ್ಯಗಳಲ್ಲಿ ಸೇವಾನಿರತ ಅಭ್ಯರ್ಥಿಗಳ ಮೀಸಲಾತಿ ಶೇ 20ರಿಂದ ಶೇ 30ರಷ್ಟು ಇದೆ. ಅದನ್ನು ರಾಜ್ಯದಲ್ಲೂ ಜಾರಿ ಮಾಡಿದರೆ ಕಳೆದ ಕೆಲವು ವರ್ಷಗಳಿಂದ ಇಲಾಖೆಯಲ್ಲಿ ಕಾನ್‌ಸ್ಟೆಬಲ್‌ ಆಗಿ ಕರ್ತವ್ಯ ನಿರ್ವಹಿಸುತ್ತಿರುವವರಿಗೆ ಅವಕಾಶ ಲಭಿಸಿದಂತೆ ಆಗಲಿದೆ’ ಎಂದು ಹೇಳಿದ್ದಾರೆ.

‘ಸೇವಾನಿರತ ವಯಸ್ಸಿನ ಮಿತಿಯನ್ನು 40ರಿಂದ 45 ವರ್ಷಕ್ಕೆ ಹೆಚ್ಚಿಸಬೇಕು. 402 ಪಿಎಸ್‌ಐ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಅದರಲ್ಲಿ ಸೇವಾನಿರತ ಅಭ್ಯರ್ಥಿಗಳಿಗೆ ಕೇವಲ 40 ಹುದ್ದೆಗಳಿವೆ. ಅದನ್ನು 80ಕ್ಕೆ ಹೆಚ್ಚಿಸಬೇಕು’ ಎಂದೂ ಒತ್ತಾಯಿಸಿದ್ದಾರೆ.

‘2010ರಲ್ಲಿ ಸೇವಾನಿರತ ಅಭ್ಯರ್ಥಿಗಳಿಗೆ ಶೇ 30ರಷ್ಟು ಹುದ್ದೆಗಳನ್ನು ಮೀಸಲಿಡಲಾಗುವುದೆಂದು ಅಂದಿನ ಗೃಹ ಸಚಿವರು ಭರವಸೆ ನೀಡಿದ್ದರು. ಅದು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ’ ಎಂದು ಸೇವಾನಿರತ ಪಿಎಸ್‌ಐ ಹುದ್ದೆಗಳ ಆಕಾಂಕ್ಷಿಗಳು ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.