ಬೆಂಗಳೂರು: ಸುಬ್ರಮಣ್ಯಪುರ ಠಾಣೆಯ ಪಿಎಸ್‌ಐ ಬೈರಪ್ಪ ಹಾಗೂ ಕೆಂಗೇರಿ ಪೊಲೀಸ್ ಠಾಣೆಯ ಪಿಎಸ್‌ಐ ಮುರಳಿ ಮೋಹನ್ ಅವರನ್ನು ಅಮಾನತು ಮಾಡಿ ನಗರ ಪೊಲೀಸ್ ಕಮಿಷನರ್ ಆದೇಶಿಸಿದ್ದಾರೆ.
ಲಂಚ ಕೇಳಿದ ಆರೋಪದಡಿ ಬೈರಪ್ಪ ಹಾಗೂ ಮುರಳಿ ಮೋಹನ್ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಲೋಕಾಯುಕ್ತ ವರದಿ ಆಧರಿಸಿ ಇಬ್ಬರು ಪಿಎಸ್‌ಐಗಳನ್ನು ಅಮಾನತು ಮಾಡಲಾಗಿದೆ ಎಂದು ಪೊಲೀಸರು ಪೊಲೀಸರು.
ಪ್ರಶಾಂತ್ ನಗರದ ನಿವಾಸಿ ಶಿವಕುಮಾರ್ ಎಂಬುವರು ನೀಡಿದ ದೂರು ಆಧರಿಸಿ ಇಬ್ಬರು ಪಿಎಸ್‌ಐಗಳ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ಕುರಿತು ಲೋಕಾಯುಕ್ತ ಕಚೇರಿಯಿಂದ ನಗರ ಪೊಲೀಸ್ ಕಮಿಷನರ್‌ಗೆ ಪತ್ರ ಬರೆದು ಮಾಹಿತಿ ಕೋರಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಶಿವಕುಮಾರ್ ಅವರು ರಿಯಲ್ ಎಸ್ಟೇಟ್ ಕೆಲಸ ಮಾಡುತ್ತಿದ್ದಾರೆ. ಇವರ ಸಂಬಂಧಿ ಪುಟ್ಟಸ್ವಾಮಿ ಅವರಿಗೆ ಸೇರಿದ ನಿವೇಶನದ ಸುತ್ತ ನಿರ್ಮಿಸಿದ್ದ ಕಾಂಪೌಂಡ್ ಅನ್ನು ಕೆಲವು ವ್ಯಕ್ತಿಗಳು ತೆರವು ಮಾಡಿ ಅತಿಕ್ರಮಣಕ್ಕೆ ಮುಂದಾಗಿದ್ದರು. ಆ ಪ್ರಕರಣದಲ್ಲಿ ಇಬ್ಬರು ಅಧಿಕಾರಿಗಳು ಲಂಚ ಕೇಳಿದ್ದರು ಎಂಬ ಆರೋಪವಿದೆ.
‘ನಿವೇಶನವನ್ನು ಸುಪರ್ದಿಗೆ ಕೊಡಿಸಲು ಇಬ್ಬರು ಅಧಿಕಾರಿಗಳು ₹ 10 ಲಕ್ಷ ಕೇಳಿದ್ದರು ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತದಲ್ಲಿ ತನಿಖೆ ನಡೆಯುತ್ತಿದೆ. ಇಲಾಖೆ ವಿಚಾರಣೆ ಕಾಯ್ದಿರಿಸಿ ಅಮಾನತು ಮಾಡಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.