ADVERTISEMENT

ದ್ವಿತೀಯ ಪಿಯು ಪರೀಕ್ಷೆ: ಪ್ರಶ್ನೆಪತ್ರಿಕೆ ಸೋರಿಕೆ?

ಇಬ್ಬರು ಡಿಡಿಪಿಯು ಪ್ರಭಾರ ರದ್ದು

​ಪ್ರಜಾವಾಣಿ ವಾರ್ತೆ
Published 24 ಜನವರಿ 2020, 23:26 IST
Last Updated 24 ಜನವರಿ 2020, 23:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು:ಪದವಿಪೂರ್ವ ಶಿಕ್ಷಣ‌ ಇಲಾಖೆ ನಡೆಸುವ ದ್ವಿತೀಯ ಪಿ.ಯು ಪೂರ್ವಸಿದ್ಧತಾ ಪರೀಕ್ಷೆ ಪ್ರಶ್ನೆಪತ್ರಿಕೆಗಳುಸೋರಿಕೆ ಆಗಿರುವ ಕುರಿತು ವದಂತಿಗಳಿವೆ. ಆದರೆ, ಸರ್ಕಾರ ಇದನ್ನು ಅಲ್ಲಗಳೆದಿದೆ.

ಯಾವುದೇ ಸೋರಿಕೆ ಆಗಿಲ್ಲ ಎಂದು ಹೇಳಿದರೂ, ಬೆಂಗಳೂರು ಉತ್ತರ ಜಿಲ್ಲಾ ಪ್ರಭಾರ ಉಪನಿರ್ದೇಶಕ ವಿ.ರಾಜಶೇಖರ ಮತ್ತು ಬೆಂಗಳೂರು ದಕ್ಷಿಣ ಜಿಲ್ಲಾ ಪ್ರಭಾರ ಉಪನಿರ್ದೇಶಕ ಬಿ.ಎಂ.ರಾಜಕುಮಾರ ಅವರ ಪ್ರಭಾರ ಹೊಣೆಗಾರಿಕೆಯನ್ನು ಹಿಂಪಡೆಯಲಾಗಿದೆ. ಇವರ ಸ್ಥಾನಗಳಿಗೆ ಪ್ರಭಾರ ನೆಲೆಯಲ್ಲಿ ಕ್ರಮವಾಗಿ ಸಿ.ಎಲ್‌.ಶೈಲಜಾ ಮತ್ತು ಎಚ್‌.ವಿ.ಉಷಾದೇವಿ ಅವರನ್ನು ನಿಯುಕ್ತಿಗೊಳಿಸಲಾಗಿದೆ.

‘ಯಾವುದೇ ಪ್ರಶ್ನೆ ಪತ್ರಿಕೆಯೂ ಸೋರಿಕೆ ಆಗಿಲ್ಲ. ಅನುಮತಿಯಿಲ್ಲದೆ ಕೆಲವು ಉಪನ್ಯಾಸಕರ ಸಂಘಗಳು ತಮ್ಮ ವ್ಯಾಪ್ತಿಯ ಕಾಲೇಜುಗಳಲ್ಲಿ ಅನಧಿಕೃತವಾಗಿ ಪೂರ್ವಸಿದ್ಧತಾ ಪರೀಕ್ಷೆಗಳನ್ನು ನಡೆಸುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದ್ದು, ಇಂತಹ ಪ್ರಶ್ನೆ‌ಪತ್ರಿಕೆಗಳು ಸೋರಿಕೆ ಆಗಿರುವ ಸಾಧ್ಯತೆ ಇರುತ್ತದೆ. ಹೀಗೆ ಪರೀಕ್ಷೆಯನ್ನು ಅನಧಿಕೃತವಾಗಿ‌ ನಡೆಸಲು ಅನುಮತಿ ನೀಡಿರಬಹುದಾದ ಅಧಿಕಾರಿಗಳ ವಿರುದ್ಧ ಕೂಡಲೇ ಶಿಸ್ತುಕ್ರಮಕ್ಕೆ ಮುಂದಾಗಬೇಕು’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್ ಕುಮಾರ್ ಸೂಚನೆ ನೀಡಿದ್ದರು. ಅದರಂತೆ ಇಬ್ಬರಿಗೂ ನೋಟಿಸ್‌ ಜಾರಿಗೊಳಿಸಿ, ಬಳಿಕ ಅವರ ಪ್ರಭಾರವನ್ನು ಹಿಂದಕ್ಕೆ ಪಡೆಯಲಾಗಿದೆ.

ADVERTISEMENT

ರಾಯಚೂರಿನಲ್ಲೂ ಸೋರಿಕೆ?: ಶುಕ್ರವಾರ ಇಂಗ್ಲಿಷ್‌ ಪರೀಕ್ಷೆ ನಡೆದಿದ್ದು, ರಾಯಚೂರು ಜಿಲ್ಲೆಯಲ್ಲಿ ವಾಟ್ಸ್‌ಆ್ಯಪ್‌ ಗುಂಪುಗಳಲ್ಲಿ ಗುರುವಾರವೇ ಈ ಪ್ರಶ್ನೆಪತ್ರಿಕೆ ಹರಿದಾಡಿತ್ತು. ಅದನ್ನೇ ಪರೀಕ್ಷೆಗೂ ನೀಡಲಾಗಿದೆ ಎಂದು ಹಲವು ವಿದ್ಯಾರ್ಥಿಗಳು ದೂರಿದ್ದಾರೆ.

ಸಲಹೆ: ಪೂರ್ವತಯಾರಿ ಪರೀಕ್ಷೆಯನ್ನು ಇಲಾಖೆಯೇ ನಿರ್ದಿಷ್ಟ ದಿನಾಂಕಗಳಂದು ನಡೆಸುವುದು ಸರಿ, ಆದರೆ ಪ್ರಶ್ನೆಪತ್ರಿಕೆಯನ್ನು ಮಾತ್ರ ಜಿಲ್ಲಾ ಮಟ್ಟಕ್ಕೆ ಪ್ರತ್ಯೇಕವಾಗಿ ನೀಡುವ ವ್ಯವಸ್ಥೆ ಮಾಡಬೇಕು ಎಂದು ಕೆಲವು ಉಪನ್ಯಾಸಕರು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.