
ಬೆಂಗಳೂರು: ‘ಜನರನ್ನು ಕೊಳ್ಳೆ ಹೊಡೆಯುವುದನ್ನು ಸಾರ್ವಜನಿಕ ಸೇವೆ ಎಂದು ಕರೆಯುತ್ತಾರೆಯೇ? ಬಿಎಂಆರ್‌ಸಿಎಲ್ ಲೂಟಿ ಮಾಡುವ ಸಂಸ್ಥೆ. ಅಲ್ಲಿನ ಅಧಿಕಾರಿಗಳು ಸುಳ್ಳುಬುರುಕರು. ಅವರನ್ನು ನಿಯಂತ್ರಿಸುವವರೇ ಇಲ್ಲದಂತಾಗಿದೆ...’
ನಮ್ಮ ಮೆಟ್ರೊ ಪ್ರಯಾಣದರ ಹೆಚ್ಚಳದ ಬಳಿಕ ಬೆಂಗಳೂರು ಮೆಟ್ರೊ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ವಿರುದ್ಧ ಜನರು ವ್ಯಕ್ತಪಡಿಸಿದ ಆಕ್ರೋಶವಿದು. ಒಂದು ವರ್ಷದ ಹಿಂದೆ ದರವನ್ನು ವಿಪರೀತ ಏರಿಕೆ ಮಾಡಿದ್ದ ಬಿಎಂಆರ್‌ಸಿಎಲ್ ಈಗ ಮತ್ತೆ ಪ್ರಯಾಣ ದರ ಹೆಚ್ಚಳ ಮಾಡಿರುವುದಕ್ಕೆ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಿದ್ದಾರೆ.
‘ನಾಚಿಕೆ, ಮಾನ ಮರ್ಯಾದೆ ಇಲ್ಲದ ಕಿತ್ತೋಗಿರೊ ಸಂಸ್ಥೆ. ಜನರ ಹಣ ಲೂಟಿ ಮಾಡೋ ಸಂಸ್ಥೆ’ ಎಂದು ಪ್ರಯಾಣಿಕರೊಬ್ಬರು ಜಾಲತಾಣದಲ್ಲಿ ಜರಿದಿದ್ದಾರೆ. ‘ನಿಜವಾಗ್ಲೂ ದರಿದ್ರ ಸರ್ಕಾರಗಳು. ಮೆಟ್ರೊ ಟ್ರಿಪ್‌ಗಳು ಕೂಡ ಹೆಚ್ಚಾಗಿಲ್ಲ. ನಿಂತುಕೊಳ್ಳೋದಕ್ಕೂ ಜಾಗ ಇಲ್ಲ. ಸಿಬ್ಬಂದಿ ದರ್ಪ ಅತಿಯಾಗಿದೆ. ಇಷ್ಟೆಲ್ಲ ಆದರೂ ದರ ಮಾತ್ರ ಹೆಚ್ಚು ಮಾಡಲಾಗುತ್ತಿದೆ. ಉಚಿತ ಪ್ರಯಾಣಕ್ಕೆ ಅವಕಾಶ ಕೊಡಿ ಎಂದು ಜನರು ಕೇಳುತ್ತಿಲ್ಲ. ಹಾಗಂತ ಲೂಟಿ ಮಾಡ್ತೀರಾ?’ ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ.
‘ಬೆಂಗಳೂರಿನ ಜನರು ಕೆಲಸಕ್ಕೆ ರಜೆ ತೆಗೆದುಕೊಂಡು, ನಗರದ ಪ್ರತಿಯೊಂದು ಮೆಟ್ರೊ ನಿಲ್ದಾಣದ ಸುತ್ತಲೂ ಒಟ್ಟುಗೂಡಿ ಪ್ರವೇಶದ್ವಾರವನ್ನು ತಡೆದು ಕುಳಿತುಕೊಳ್ಳಬೇಕು. ಬೇಡಿಕೆಗೆ ಒಪ್ಪುವವರೆಗೆ ಹೊರಡಬಾರದು. ಬೆಂಗಳೂರಿಗರೇ ಮೆಟ್ರೊ ನಿಲ್ದಾಣಕ್ಕೆ ಬನ್ನಿ’ ಎಂದು ನಾಗರಿಕರೊಬ್ಬರು ಕರೆ ನೀಡಿದ್ದಾರೆ.
‘ದಟ್ಟಣೆ ಅವಧಿಯಲ್ಲಿಯೂ 10 ನಿಮಿಷಕ್ಕೊಂದು ರೈಲು ಓಡಿಸುತ್ತೀರಾ, ಮೆಜೆಸ್ಟಿಕ್‌ನಲ್ಲಿ ಎಲ್ಲ ರೈಲುಗಳು ತುಂಬಿರುವುದರಿಂದ ರೈಲು ಹತ್ತಲು ಕನಿಷ್ಠ 30 ನಿಮಿಷ ಕಾಯಬೇಕಿದೆ. ಕೋಚ್ ಒಳಗೆ ಜನರನ್ನು ಕುರಿಗಳಂತೆ ತುಂಬಲಾಗುತ್ತಿದೆ. ಇಂಥ ದಯನೀಯ ಸೇವೆಗೆ ದರ ಏರಿಕೆಯೆಂಬ ಬರೆ ಬೇರೆ’ ಎಂದು ಪ್ರಯಾಣಿಕರು ಕಿಡಿ ಕಾರಿದ್ದಾರೆ.
‘ದಿನಕ್ಕೆ ಸರಾಸರಿ 10 ಲಕ್ಷ ಜನರು ಪ್ರಯಾಣಿಸುತ್ತಾರೆ. ಟಿಕೆಟ್ ದರ ಸರಾಸರಿ ₹70 ಇದೆ. ಅಂದರೆ ದಿನಕ್ಕೆ ₹ 7 ಕೋಟಿ ಸಂಗ್ರಹವಾಗುತ್ತದೆ. ಇದು ಸಾಕಾಗುವುದಿಲ್ಲವೇ’ ಎಂದು ಅಂಕಿ ಅಂಶವನ್ನು ಮುಂದಿಟ್ಟು ಪ್ರಶ್ನಿಸಿದ್ದಾರೆ.
ಈ ಏರಿಕೆಯು ಒಂದು ರೂಪಾಯಿ ಚಿಲ್ಲರೆ ಸಮಸ್ಯೆ ತಂದಿಟ್ಟಿದೆ ಎಂದು ಒಬ್ಬರು ತಿಳಿಸಿದ್ದರೆ, ‘ಪ್ರಯಾಣಿಕರು ಚಿಲ್ಲರೆಗಾಗಿ ಪರದಾಡಲಿ ಎಂದು ಈ ರೀತಿ ದರ ಏರಿಕೆ ಮಾಡಿರಬಹುದು’ ಎಂದು ಮತ್ತೊಬ್ಬರು ವ್ಯಂಗ್ಯವಾಡಿದ್ದಾರೆ.
ಪ್ರಯಾಣಿಕರು ಏನಂತಾರೆ?
ಜನರು ಅತ್ತ ದರಿ ಇತ್ತ ಪುಲಿ ಎಂಬಂತಹ ಪರಿಸ್ಥಿತಿಯಲ್ಲಿದ್ದಾರೆ ಎಂಬುದು ಸರ್ಕಾರಕ್ಕೆ ಮತ್ತು ನಮ್ಮ ಮೆಟ್ರೊಗೆ ತಿಳಿದಿದೆ. ಜನರು ದುಬಾರಿ ದರ ಪಾವತಿಸಬೇಕು ಇಲ್ಲವೇ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಳ್ಳಬೇಕು. ಜನರ ಅಸಹಾಯಕತೆಯನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ.– ಜಿ. ಶಶಿಕುಮಾರ್, ಬೆಂಗಳೂರು ಉಳಿಸಿ ಸಮಿತಿ ಸಂಚಾಲಕ
ಈಗಾಗಲೇ ಸಾಮಾನ್ಯ ಜನರ ಕೈಗೆಟುಕದಂತಾಗಿರುವ ನಮ್ಮ ಮೆಟ್ರೊ ದರ ಮತ್ತಷ್ಟು ದುಬಾರಿಯಾಗಲಿದೆ. ದರ ನಿಗದಿ ಸಮಿತಿ ಶಿಫಾರಸು ಮಾಡಿದೆ ಎಂಬ ಕಾರಣಕ್ಕೆ ಕಡ್ಡಾಯವಾಗಿ ದರ ಏರಿಕೆ ಮಾಡಬೇಕು ಎಂದು ಬಿಎಂಆರ್‌ಸಿಎಲ್ ಅಂದುಕೊಂಡಿದೆ. ಹಾಗಾದರೆ ಅದೇ ದರ ನಿಗದಿ ಸಮಿತಿ ಕಳೆದ ವರ್ಷ ಶೇ 51.55 ಏರಿಕೆ ಮಾಡಿ ಎಂದು ಶಿಫಾರಸು ಮಾಡಿದ್ದಾಗ ಶೇ 100ರಷ್ಟು ಯಾಕೆ ಮಾಡಿತು? ಪ್ರಯಾಣಿಕರ ವಿರೋಧ ಬಂದ ಮೇಲೆ ಶೇ 71.5ಕ್ಕೆ ಯಾಕೆ ಇಳಿಸಿತು?– ಶ್ರೀಯಾ, ಮೆಟ್ರೊ ಪ್ರಯಾಣಿಕರು
ಕಳೆದ ವರ್ಷ ಜನರ ವಿರೋಧದ ನಡುವೆಯೂ ಶೇ 100 ದರ ಹೆಚ್ಚಿಸುವ ಮೂಲಕ ಬಿಎಂಆರ್‌ಸಿಎಲ್ ಜನವಿರೋಧಿ ಎಂಬುದನ್ನು ಸಾಬೀತು ಮಾಡಿತ್ತು. ಈಗ ಮತ್ತೆ ಶೇ 5ರಷ್ಟು ಹೆಚ್ಚಳ ಮಾಡಿರುವುದು ನಾಚಿಕೆಗೇಡಿನ ವರ್ತನೆಯಾಗಿದೆ. ಮೆಟ್ರೊ ಪ್ರಯಾಣಿಕರು ಈ ದರ ಹೆಚ್ಚಳವನ್ನು ಒಪ್ಪುವುದಿಲ್ಲ.– ರಾಜೇಶ್ ಭಟ್, ಬೆಂಗಳೂರು ಮೆಟ್ರೊ ಪ್ರಯಾಣಿಕರ ಸಂಘಟನೆ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.