ADVERTISEMENT

ಸಾರ್ವಜನಿಕ ಪ್ರದೇಶ: ಧೂಮಪಾನಕ್ಕೆ ಕಡಿವಾಣ ಹಾಕಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2021, 17:02 IST
Last Updated 3 ಫೆಬ್ರುವರಿ 2021, 17:02 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ‘ಪರೋಕ್ಷ ಧೂಮಪಾನದಿಂದಲೂ ಶ್ವಾಸಕೋಶ ಕ್ಯಾನ್ಸರ್‌ಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಸಾರ್ವಜನಿಕ ಸ್ಥಳವನ್ನು ಶೇ 100ರಷ್ಟು ತಂಬಾಕು ಹೊಗೆರಹಿತ ಪ್ರದೇಶವನ್ನಾಗಿಸಬೇಕು’ ಎಂದು ಸಾರ್ವಜನಿಕ ಆರೋಗ್ಯ ತಜ್ಞರು ಒತ್ತಾಯಿಸಿದ್ದಾರೆ.

ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಆರ್) ಹಾಗೂ ಇಲ್ಲಿನ ರಾಷ್ಟ್ರೀಯ ರೋಗ ಮಾಹಿತಿ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರವು ಬಿಡುಗಡೆ ಮಾಡಿರುವ ರಾಷ್ಟ್ರೀಯ ಕ್ಯಾನ್ಸರ್ ನೋಂದಣಿ ಕಾರ್ಯಕ್ರಮದ ವರದಿ ಪ್ರಕಾರ 2025ರ ವೇಳೆಗೆ ದೇಶದಲ್ಲಿ ಕ್ಯಾನ್ಸರ್ ಪ್ರಕರಣಗಳು 15.7 ಲಕ್ಷಕ್ಕೆ ಏರಿಕೆಯಾಗಲಿವೆ. ಈಗ ಆ ಸಂಖ್ಯೆ 13.9 ಲಕ್ಷದಷ್ಟಿದೆ. ಹೋಟೆಲ್, ಬಾರ್ ಸೇರಿದಂತೆ ಮುಂತಾದ ಸಾರ್ವಜನಿಕ ಪ್ರದೇಶಗಳಲ್ಲಿ ಗೊತ್ತುಪಡಿಸಿದ ಧೂಮಪಾನ ಪ್ರದೇಶವನ್ನು ತೆರವುಗೊಳಿಸಬೇಕು. ಇದರಿಂದ ಪರೋಕ್ಷ ಧೂಮಪಾನ ಪ್ರಕರಣಗಳನ್ನು ತಡೆಯಬಹುದು ಎಂದು ತಜ್ಞರು ತಿಳಿಸಿದ್ದಾರೆ.

‘ಹೋಟೆಲ್‌ ಸೇರಿದಂತೆ ವಿವಿಧ ಸಾರ್ವಜನಿಕ ಪ್ರದೇಶದಲ್ಲಿ ಧೂಮಪಾನಕ್ಕೆ ಅವಕಾಶ ನೀಡಿರುವುದರಿಂದ ಪರೋಕ್ಷ ಧೂಮಪಾನಕ್ಕೆ ಒಳಗಾಗುವವರ ಸಂಖ್ಯೆ ಹೆಚ್ಚುತ್ತಿದೆ. ನಗರದ ರೆಸ್ಟೋರೆಂಟ್‌ಗಳಲ್ಲಿ ಸುಮಾರು 3 ಲಕ್ಷ ಮಂದಿ ಕೆಲಸ ಮಾಡುತ್ತಿದ್ದಾರೆ. ಮಕ್ಕಳು, ಮಹಿಳೆಯರು ಮತ್ತು ವೃದ್ಧರು ಪರೋಕ್ಷ ಧೂಮಪಾನದಿಂದ ಹೆಚ್ಚಿನ ಸಮಸ್ಯೆ ಎದುರಿಸುತ್ತಿದ್ದಾರೆ. ಹಾಗಾಗಿ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಮಾಡಿ, ಧೂಮಪಾನಕ್ಕೆ ಕಡಿವಾಣ ಹಾಕಬೇಕು’ ಎಂದು ತಂಬಾಕುಮುಕ್ತ ಕರ್ನಾಟಕದ ಕಾರ್ಯದರ್ಶಿ ಎಸ್.ಜೆ. ಚಂದರ್ ಒತ್ತಾಯಿಸಿದ್ದಾರೆ.

ADVERTISEMENT

ನಿಯಮ ಉಲ್ಲಂಘನೆ: ‘ತಂಬಾಕು ಸಂಬಂಧಿತ ಕಾಯಿಲೆಗಳ ಚಿಕಿತ್ಸೆಗೆ ದೇಶದಲ್ಲಿ ವರ್ಷಕ್ಕೆ ₹1.82 ಲಕ್ಷ ಕೋಟಿ ವ್ಯಯವಾಗುತ್ತಿದೆ. ಪರೋಕ್ಷ ಧೂಮಪಾನವೂ ನೇರ ಧೂಮಪಾನಕ್ಕೆ ಸಮಾನವಾಗಿದೆ. ಇದರಿಂದ ಶ್ವಾಸಕೋಶದ ಕ್ಯಾನ್ಸರ್ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಧೂಮಪಾನಕ್ಕೆ ಗೊತ್ತುಪಡಿಸಿದ ಸ್ಥಳಗಳಲ್ಲಿ ಪಾಲಿಸಬೇಕಾದ ನಿಯಮಗಳನ್ನು ಬಹುತೇಕ ಹೋಟೆಲ್‌ ಹಾಗೂ ರೆಸ್ಟೋರೆಂಟ್‌ಗಳು ಗಾಳಿಗೆ ತೂರುತ್ತಿವೆ’ ಎಂದು ರಾಜ್ಯ ಸರ್ಕಾರದ ತಂಬಾಕು ನಿಯಂತ್ರಣ ಉನ್ನತಮಟ್ಟದ ಸಮಿತಿಯ ಸದಸ್ಯ ಡಾ. ವಿಶಾಲ್ ರಾವ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.