ADVERTISEMENT

ಸರ್ಕಾರದಿಂದ ಪುಸ್ತಕೋದ್ಯಮ ಕಡೆಗಣನೆ: ಹೋರಾಟಕ್ಕೆ ಮುದ್ರಕರ ಒಕ್ಕೂಟ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2025, 14:37 IST
Last Updated 22 ನವೆಂಬರ್ 2025, 14:37 IST
<div class="paragraphs"><p>ಪುಸ್ತಕೋದ್ಯಮ</p></div>

ಪುಸ್ತಕೋದ್ಯಮ

   

ಬೆಂಗಳೂರು: ‘ಪುಸ್ತಕಗಳನ್ನು ಖರೀದಿಸಿ ಗ್ರಂಥಾಲಯಗಳಿಗೆ ಪೂರೈಸುವ ಏಕಗವಾಕ್ಷಿ ಸೇರಿ ವಿವಿಧ ಯೋಜನೆಗಳನ್ನು ಸ್ಥಗಿತಗೊಳಿಸುವ ಮೂಲಕ ರಾಜ್ಯ ಸರ್ಕಾರ ಪುಸ್ತಕೋದ್ಯಮವನ್ನು ಕಡೆಗಣಿಸುತ್ತಿದೆ’ ಎಂದು ಕರ್ನಾಟಕ ರಾಜ್ಯ ಪ್ರಕಾಶಕರ, ಲೇಖಕರ ಮತ್ತು ಮುದ್ರಕರ ಒಕ್ಕೂಟದ ಪ್ರತಿನಿಧಿಗಳು ಅಸಮಾಧಾನ ವ್ಯಕ್ತಪಡಿಸಿದರು.

ಶನಿವಾರ ನಡೆದ ಒಕ್ಕೂಟದ ಸಭೆಯಲ್ಲಿ ಸರ್ಕಾರದ ನಡೆ ಖಂಡಿಸಿದ ಪ್ರತಿನಿಧಿಗಳು, ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ಧರಣಿ–ಪ್ರತಿಭಟನೆಯ ಮೂಲಕ ಹೋರಾಟ ತೀವ್ರಗೊಳಿಸಲು ನಿರ್ಧರಿಸಿದರು.  

ADVERTISEMENT

ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ, ‘ಸಾರ್ವಜನಿಕ ಗ್ರಂಥಾಲಯ ಇಲಾಖೆ ಸಚಿವರ ದಿವ್ಯ ನಿರ್ಲಕ್ಷ್ಯದಿಂದ ಪುಸ್ತಕೋದ್ಯಮ ಸೊರಗುತ್ತಿದೆ. ಎಲ್ಲರೂ ಒಟ್ಟಾಗಿ ಹೋರಾಟ ನಡೆಸಬೇಕಿದೆ’ ಎಂದರು.

ಕರ್ನಾಟಕ ಬರಹಗಾರ ಮತ್ತು ಪ್ರಕಾಶಕರ ಸಂಘದ ಅಧ್ಯಕ್ಷ ನಿಡಸಾಲೆ ಪುಟ್ಟಸ್ವಾಮಯ್ಯ, ‘ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಪ್ರಕಾಶಕರು, ಲೇಖಕರು ಮತ್ತು ಮುದ್ರಕರನ್ನು ಕಡೆಗಣಿಸುತ್ತಿದೆ. ಇಲಾಖೆಯ ಆಯುಕ್ತರು ಮೈಮರೆತು ಕಾರ್ಯನಿರ್ವಹಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಆಯುಕ್ತರ ಕಚೇರಿ ಮತ್ತು ಇಲಾಖೆ ಸಚಿವರ ಮನೆಯ ಮುಂಭಾಗ ರಾಜ್ಯದ ಸಾಹಿತಿಗಳು, ಪ್ರಕಾಶಕರು ಮತ್ತು ಮುದ್ರಕರು ಒಟ್ಟಾಗಿ ಧರಣಿ ನಡೆಸುತ್ತೇವೆ. ಅದಕ್ಕೂ ಬಗ್ಗದಿದ್ದರೆ ಪ್ರತಿಯೊಂದು ಜಿಲ್ಲಾ ಕೇಂದ್ರದಲ್ಲಿಯೂ ಪ್ರತಿಭಟನೆ ನಡಿಸಿ, ಹೋರಾಟವನ್ನು ತೀವ್ರಗೊಳಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಪತ್ರಕರ್ತೆ ಹಾಗೂ ಪ್ರಕಾಶಕಿ ಆರ್. ಪೂರ್ಣಿಮಾ, ‘ಈ ಹೋರಾಟ ಬಹಳ ಹಿಂದೆಯೇ ಆಗಬೇಕಿತ್ತು. ಈಗಲಾದರೂ ದೊಡ್ಡಮಟ್ಟದಲ್ಲಿ ಹೋರಾಟ ನಡೆಸದಿದ್ದರೆ ಉಳಿಗಾಲವಿಲ್ಲ’ ಎಂದು ಅಭಿಪ್ರಾಯಪಟ್ಟರು. 

ಬೆಲೆ ಹೆಚ್ಚಿಸಿಲ್ಲ: ಪ್ರಕಾಶಕ ಲೋಕಪ್ಪ, ‘ಸರ್ಕಾರವು ಕಾಲಕ್ಕೆ ತಕ್ಕಂತೆ ಪುಸ್ತಕಗಳ ಪುಟವಾರು ಬೆಲೆಯನ್ನು ಹೆಚ್ಚಿಸಿಲ್ಲ. ಇದರಿಂದ ಪುಸ್ತಕೋದ್ಯಮವು ಸಂಕಷ್ಟದ ದಿನಗಳನ್ನು ಎದುರಿಸುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು. 

ಸೃಷ್ಟಿ ನಾಗೇಶ್, ‘ಸ್ವಯಂ ಉದ್ಯೋಗ ಮಾಡುವಂತೆ ಯುವಜನರಿಗೆ ಸರ್ಕಾರ ಪ್ರೇರೇಪಿಸುತ್ತಿದೆ. ಆದರೆ, ಗ್ರಂಥಾಲಯ ಇಲಾಖೆಯ ಆಮೆ ವೇಗದ ಕಾರ್ಯವೈಖರಿಯು ಯುವ ಪ್ರಕಾಶಕರ ಹಾಗೂ ಬರಹಗಾರರ ಉತ್ಸಾಹವನ್ನು ಕುಂಠಿತಗೊಳಿಸಿದೆ. ಇಲಾಖೆಯಲ್ಲಿ ಪ್ರಕಾಶಕರನ್ನು ಪ್ರೋತ್ಸಾಹಿಸಲು ಸರ್ಕಾರ ಹಿಂದೆ ಜಾರಿಗೆ ತಂದಿದ್ದ ಯೋಜನೆಗಳು ಹಳ್ಳ ಹಿಡಿದಿವೆ’ ಎಂದರು. 

ಪುಸ್ತಕೋದ್ಯಮದ ಪ್ರಮುಖರಾದ ದಾಮಿನಿ ಸತೀಶ್, ಅಭಿನವ ರವಿಕುಮಾರ್, ವಸುಧೇಂದ್ರ, ಚಂದ್ರಕೀರ್ತಿ, ಪ್ರವೀಣ್ ಜಗಾಟ, ಬಸವರಾಜ ಕೊನೆಕ್, ಬಿ.ಕೆ. ಸುರೇಶ್, ರಾಜೇಂದ್ರ ಪ್ರಸಾದ್, ವಿಶಾಲಾಕ್ಷಿ ಶರ್ಮ, ಅವಿರತ ಹರೀಶ್, ಸ್ವ್ಯಾನ್ ಕೃಷ್ಣಮೂರ್ತಿ, ಸಿರಿವರ ರವೀಂದ್ರನಾಥ್, ರಘುವೀರ್, ಕೃಷ್ಣ ಚೆಂಗಡಿ ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.