ADVERTISEMENT

ಎಸ್ಸೆಸ್ಸೆಲ್ಸಿ ಮಂಡಳಿಯಲ್ಲಿ ಪಿಯು ವಿಲೀನ

ಈ ಶೈಕ್ಷಣಿಕ ವರ್ಷಾಂತ್ಯಕ್ಕೆ ಅಂತಿಮಗೊಳ್ಳಲಿದೆ ರೂಪುರೇಷೆ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2019, 20:15 IST
Last Updated 30 ಆಗಸ್ಟ್ 2019, 20:15 IST
ನೂತನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌
ನೂತನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌    

ಬೆಂಗಳೂರು: ಪಿಯು ಮಂಡಳಿಯನ್ನು ಎಸ್ಸೆಸ್ಸೆಲ್ಸಿ ಮಂಡಳಿಯಲ್ಲಿ ವಿಲೀನಗೊಳಿಸುವ ಪ್ರಕ್ರಿಯೆಈ ಡಿಸೆಂಬರ್‌ ವೇಳೆಗೆ ಕೊನೆಗೊಳ್ಳಲಿದ್ದು, 2020ರ ಪರೀಕ್ಷೆಗಳನ್ನು ಒಂದೇ ಮಂಡಳಿ ನಡೆಸಲಿದೆ.

ಬಹು ಕಾಲದ ಈ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ನೂತನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವಎಸ್‌.ಸುರೇಶ್‌ ಕುಮಾರ್‌ ಆಸಕ್ತಿ ತೋರಿಸಿದ್ದು, ಶುಕ್ರವಾರ ನಡೆದ ಶಿಕ್ಷಣ ಅಧಿಕಾರಿಗಳ ಸಭೆಯಲ್ಲೂ ಇದರ ಬಗ್ಗೆ ಚರ್ಚೆ ನಡೆದಿದೆ.

ಸಭೆಯಲ್ಲಿ ಪಾಲ್ಗೊಂಡಿದ್ದ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಈ ಬಗ್ಗೆ ಮಾಹಿತಿ ನೀಡಿ, ಕರ್ನಾಟಕ ಮಾಧ್ಯಮಿಕ ಶಾಲಾ ಪರೀಕ್ಷಾ ಮಂಡಳಿಯೇ (ಕೆಎಸ್‌ಇಇಬಿ) ಎಸ್ಸೆಸ್ಸೆಲ್ಸಿ ಮತ್ತು ಪಿಯು ಪರೀಕ್ಷೆಗಳನ್ನು ನಡೆಸಲಿದೆ ಎಂದರು.

ADVERTISEMENT

ಸಭೆಯ ಬಳಿಕ ಸಚಿವ ಸುರೇಶ್‌ ಕುಮಾರ್‌ ಮಾತನಾಡಿ, ಸಭೆಯಲ್ಲಿ ಎರಡೂ ಮಂಡಳಿಗಳನ್ನು ವಿಲೀನಗೊಳಿಸುವ ಪ್ರಸ್ತಾವದ ಬಗ್ಗೆ ಚರ್ಚೆ ನಡೆದಿದೆ. ನಾವು ಇದರ ಬಗ್ಗೆ ಶೀಘ್ರ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದರು.

ಎರಡೂ ಮಂಡಳಿಗಳನ್ನು ವಿಲೀನಗೊಳಿಸುವ ಸಲುವಾಗಿ ಈಗಾಗಲೇ ₹ 50 ಕೋಟಿಯನ್ನು ತೆಗೆದಿರಿಸಲಾಗಿದ್ದು, ಎರಡೂ ಇಲಾಖೆಗಳಿಗೆ ಇದರಿಂದ ಹಣ ಉಳಿತಾಯವಾಗಲಿದೆ.

ಕೆಎಸ್‌ಇಇಬಿಯನ್ನು ಈಗಾಗಲೇ ಡಿಜಿಟಲೀಕರಣಗೊಳಿಸಲಾಗಿದೆ. ಪಿಯು ಪರೀಕ್ಷೆ ನಡೆಸಲು ತನಗೆ ಹೆಚ್ಚುವರಿ ಮಾನವ ಸಂಪನ್ಮೂಲದ ಅಗತ್ಯ ಇಲ್ಲ ಎಂದು ಮಂಡಳಿಯ ಅಧಿಕಾರಿಗಳು ಹೇಳಿದ್ದಾರೆ.

ಪ್ರತಿ ವರ್ಷ 8.5 ಲಕ್ಷ ಅಭ್ಯರ್ಥಿಗಳು ಎಸ್ಸೆಸ್ಸೆಲ್ಸಿ ಹಾಗೂ 6 ಲಕ್ಷ ಅಭ್ಯರ್ಥಿಗಳು ಪಿಯು ಪರೀಕ್ಷೆ ಬರೆಯುತ್ತಾರೆ.

ಅಂಕಿ ಅಂಶ

₹ 34 ಕೋಟಿ -ಪಿಯು ಪರೀಕ್ಷೆಗೆ ತಗಲುವ ವೆಚ್ಚ

6 ಲಕ್ಷ - ಪಿಯು ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು

56,000 - ಪಿಯು ಮೌಲ್ಯಮಾಪನಕ್ಕೆ ಅಗತ್ಯವಾದ ಉಪನ್ಯಾಸಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.