
ಬೆಂಗಳೂರು: ಮ್ಯಾನ್ಮಾರ್ ನಿರಾಶ್ರಿತರೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದಡಿ ರಾಷ್ಟ್ರ ರಕ್ಷಣಾ ಪಡೆಯ ಮುಖಂಡ ಪುನೀತ್ ಕೆರೆಹಳ್ಳಿ ಹಾಗೂ ಸಹಚರರ ವಿರುದ್ಧ ಸಿ.ಕೆ.ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುನೀತ್ ಕೆರೆಹಳ್ಳಿ ಮತ್ತು ಸಹಚರರಿಂದ ಹಲ್ಲೆಗೆ ಒಳಗಾಗಿರುವ ಜಹಂಗೀರ್ ಆಲಂ ಎಂಬುವರು ದೂರು ನೀಡಿದ್ದಾರೆ.
ಜಹಂಗೀರ್ ಆಲಂ, ಪತ್ನಿ ಮತ್ತು ಮಕ್ಕಳೊಂದಿಗೆ ಹಲವು ವರ್ಷಗಳಿಂದ ಕಗ್ಗಲಿಪುರದಲ್ಲಿ ನೆಲಸಿದ್ದಾರೆ. ಅವರಿಗೆ ವಿಶ್ವಸಂಸ್ಥೆಯ ನಿರಾಶ್ರಿತರ ಏಜೆನ್ಸಿಯು (ಯುಎನ್‍ಎಚ್‍ಸಿಆರ್) ನಿರಾಶ್ರಿತರ ಗುರುತಿನ ಚೀಟಿ ನೀಡಿದೆ. ಜಹಂಗೀರ್ ಆಲಂ ಅವರು ಚಿಂದಿ ಆಯುವ ಕೆಲಸ ಮಾಡುತ್ತಾರೆ. ಅವರು ನಾಯಂಡಹಳ್ಳಿ, ಬನಶಂಕರಿ, ಚನ್ನಮ್ಮನಕೆರೆ ಅಚ್ಚುಕಟ್ಟು ಭಾಗದಲ್ಲಿ ಚಿಂದಿ ಆಯುತ್ತಾರೆ ಎಂದು ಪೊಲೀಸರು ಹೇಳಿದರು.
‘ಡಿ.3ರಂದು ರಾತ್ರಿ ಚನ್ನಮ್ಮನಕೆರೆ ಅಚ್ಚುಕಟ್ಟು ಭಾಗದಲ್ಲಿ ಚಿಂದಿ ಆಯುತ್ತಿದ್ದಾಗ ಪುನೀತ್ ಕೆರೆಹಳ್ಳಿ ಮತ್ತು ಸಹಚರರು ಅಲ್ಲಿಗೆ ಬಂದು ಜಹಂಗೀರ್ ಆಲಂ ಅವರನ್ನು ನಿಂದಿಸಿದ್ದಾರೆ. ಬಾಂಗ್ಲಾ ನುಸುಳುಕೋರ ಎಂದು ಭಾವಿಸಿ ಜಹಂಗೀರ್ ಅವರನ್ನು ಎಳೆದಾಡಿ, ಹಲ್ಲೆ ನಡೆಸಿದ್ದರು’ ಎಂದು ಪೊಲೀಸರು ಹೇಳಿದರು.
ವಿಚಾರಣೆಗೆ ಬರುವಂತೆ ಆರೋಪಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.