ADVERTISEMENT

ಕನ್ನಡ ಕುಸಿಯುತ್ತಿರುವ ಕಾಲಘಟ್ಟದಲ್ಲಿದ್ದೇವೆ: ಪುರಷೋತ್ತಮ ಬಿಳಿಮಲೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2025, 19:08 IST
Last Updated 13 ಅಕ್ಟೋಬರ್ 2025, 19:08 IST
ಪುರುಷೋತ್ತಮ ಬಿಳಿಮಲೆ 
ಪುರುಷೋತ್ತಮ ಬಿಳಿಮಲೆ    

ಬೆಂಗಳೂರು: ‘ನಾವಿಂದು ಕನ್ನಡ ಕುಸಿಯುತ್ತಿರುವ ಕಾಲಘಟ್ಟದಲ್ಲಿದ್ದೇವೆ. ಇಂತಹ ಸಂದರ್ಭದಲ್ಲಿ ಹಳೆಗನ್ನಡವನ್ನು ವಿದ್ಯಾರ್ಥಿಗಳಿಗೆ ಓದಿಸುವುದಾದರೂ ಹೇಗೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರಷೋತ್ತಮ ಬಿಳಿಮಲೆ ಪ್ರಶ್ನಿಸಿದರು.

ಜೈನ ಮಿಲನ್, ಬೆಂಗಳೂರು ಸೆಂಟ್ರೆಲ್ ಹಾಗೂ ಜಯನಗರದ ಶ್ರೀಚಕ್ರೇಶ್ವರಿ ಮಹಿಳಾ ಸಮಾಜ ಜಂಟಿಯಾಗಿ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜೈನ ಸಾಹಿತ್ಯ ಸಿರಿ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು. 

‘ಕರ್ನಾಟಕದಲ್ಲಿದ್ದ ಬೌದ್ಧ ಧರ್ಮ ಸಂಸ್ಕೃತದೆಡೆ ಹೊರಳುವ ಕಾಲಕ್ಕೆ, ಜೈನ ಧರ್ಮವು ಜನಭಾಷೆಯನ್ನು ತನ್ನ ಧರ್ಮ ಪ್ರಚಾರಕ್ಕೆ ಬಳಸಿಕೊಂಡು ಕನ್ನಡ ಸಾಹಿತ್ಯಕ್ಕೂ ಮಹತ್ತರವಾದ ಕೊಡುಗೆ ನೀಡಿತು. ಕವಿರಾಜಮಾರ್ಗಕಾರ ಹೇಳುವ ‘ಕಸವರಮೆಂಬುದು ನೆರೆ ಸೈರಿಸಲಾರ್ಪೆಡೆ ಪರವಿಚಾರಮುಮಂ, ಧರ್ಮಮುಮಂ’ ಎಂಬುದು, ಪಂಪನ ‘ಮನುಷ್ಯ ಜಾತಿ ತಾನೊಂದೆ ವಲಂ’ ಎಂಬ ಮಾತುಗಳು ಈಗ ಅತ್ಯಂತ ಅಗತ್ಯವಾಗಿದೆ’ ಎಂದರು.

ADVERTISEMENT

ವಿಶೇಷ ಉಪನ್ಯಾಸ ನೀಡಿದ ಸಾಹಿತಿ ಹಂಪ ನಾಗರಾಜಯ್ಯ, ‘ಕನ್ನಡದ ಜತೆಗೆ ತಮಿಳು ಹಾಗೂ ತೆಲುಗಿನ ಮೊಟ್ಟ ಮೊದಲ ಲೇಖಕರೂ ಜೈನರು. ಮರೆಯಾಗುತ್ತಿರುವ ಕನ್ನಡ ಸಾಹಿತ್ಯವನ್ನು ಮುಂದಿನ ತಲೆಮಾರಿಗೆ ದಾಟಿಸುವ ಬಹುದೊಡ್ಡ ಜವಾಬ್ದಾರಿ ನಮ್ಮೆಲ್ಲರದ್ದು’ ಎಂದು ಹೇಳಿದರು.

ಪ್ರಸ್ತಾವಿಕ ಮಾತನಾಡಿದ ಲೇಖಕಿ ಪದ್ಮಿನಿ ನಾಗರಾಜು, ‘ಕನ್ನಡ ಸಾಹಿತ್ಯದ ಅರಿವನ್ನು ಜನಸಾಮಾನ್ಯರಿಗೆ ತಲುಪಿಸಲು ಪ್ರತಿ ತಿಂಗಳು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದರು.

ಭಾರತೀಯ ಜೈನ ಮಿಲನ್‌ನ ರಾಷ್ಟ್ರೀಯ ಕಾರ್ಯಾಧ್ಯಕ್ಷ ಡಿ.ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್‌, ನಾಗಶ್ರೀ ಮುಪ್ಪಾನೆ ಹಾಗೂ ಮಮತಾ ಕಾಂತರಾಜ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.