ಕಾರ್ಯಕ್ರಮದಲ್ಲಿ ಎಂ.ಎಸ್. ಆಶಾದೇವಿ, ಹಂಪ ನಾಗರಾಜಯ್ಯ, ಪುರುಷೋತ್ತಮ ಬಿಳಿಮಲೆ, ಜೋಗಿ ಮತ್ತು ನಾಗತಿಹಳ್ಳಿ ಚಂದ್ರಶೇಖರ್ ಉಪಸ್ಥಿತರಿದ್ದರು
ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಜನಪ್ರಿಯ ಸಂಸ್ಕೃತಿಯನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು ಎಂಬುದನ್ನು ಕನ್ನಡ ವಿಮರ್ಶೆ ತಿಳಿಸದ ಕಾರಣ, ನಾಗತಿಹಳ್ಳಿ ಚಂದ್ರಶೇಖರ ಅವರನ್ನು ಸಾಹಿತ್ಯಲೋಕ ಸರಿಯಾಗಿ ಗುರುತಿಸಿಲ್ಲ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಹೇಳಿದರು.
ವೀರಲೋಕ ಮತ್ತು ಅಭಿವ್ಯಕ್ತಿ ಸಂಸ್ಥೆ ಜಂಟಿಯಾಗಿ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ನಾಗತಿಹಳ್ಳಿ ಚಂದ್ರಶೇಖರ ಅಕ್ಷರ ಮೀಮಾಂಸೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಜನಪ್ರಿಯ ಸಂಸ್ಕೃತಿ ನೋಡುವ ಬಗ್ಗೆ ನಮಗೆ ಇನ್ನೂ ಸ್ಪಷ್ಟತೆ ಇಲ್ಲ. ಅದನ್ನು ಅರ್ಥಮಾಡಿಕೊಳ್ಳದೆ ವಿಮರ್ಶೆ ಬೆಳೆಸಿದ್ದು ನವ್ಯದವರು. ಅವರು ಜನಪ್ರಿಯ ಸಂಸ್ಕೃತಿಯನ್ನು ಕಳಪೆಯೆಂದು ಹೇಳಿಕೊಂಡು ಬಂದರು. ಕೆ.ಎಸ್.ನರಸಿಂಹಸ್ವಾಮಿ ಅವರನ್ನೂ ತಮಾಷೆ ಮಾಡಿದ್ದರು. ಜನಪ್ರಿಯ ಸಂಸ್ಕೃತಿಗೆ ನರಸಿಂಹಸ್ವಾಮಿ ಅವರ ಕೊಡುಗೆ ದೊಡ್ಡದು. ಅವರ ಜತೆಗೆ ನಾಗತಿಹಳ್ಳಿಯಂತಹವರು ಸಾಮಾಜಿಕ ಚಿಂತನಾ ಕ್ರಮವನ್ನು ದೊಡ್ಡಮಟ್ಟದಲ್ಲಿ ರೂಪಿಸಿದ್ದಾರೆ’ ಎಂದರು.
ಕನ್ನಡಪ್ರಭ ಪುರವಣಿ ಸಂಪಾದಕ ಜೋಗಿ (ಗಿರೀಶ್ ರಾವ್ ಹತ್ವಾರ್), ‘ನಾಗತಿಹಳ್ಳಿ ಚಂದ್ರಶೇಖರ ಅವರು ಪ್ರತಿಯೊಂದು ಕಥೆಯನ್ನು ಆಕರ್ಷಕ ಮತ್ತು ರೋಚಕವಾಗಿ ಬರೆಯುತ್ತಾರೆ. ಗ್ರಾಮೀಣ ಪ್ರದೇಶದ ಕೀಳರಿಮೆ ಮೀರಿ, ಸಾಧಿಸಲು ಸಾಧ್ಯ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ’ ಎಂದು ಶ್ಲಾಘಿಸಿದರು.
ವೀರಲೋಕ ಪುಸ್ತಕ ಪ್ರಕಾಶನದ ವೀರಕಪುತ್ರ ಶ್ರೀನಿವಾಸ್, ‘ಕನ್ನಡ ಸಾಹಿತ್ಯ ಲೋಕದಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಅವರಿಗೆ ಸಿಗಬೇಕಾದ ಮನ್ನಣೆ ಸಿಗದೆ ಇರುವುದು ಬೇಸರದ ಸಂಗತಿ. ಅವರ ಸಿನಿಮಾಗಳು ನಾವು ಕಾಣದ ಲೋಕವನ್ನು ಕಟ್ಟಿಕೊಟ್ಟಿವೆ’ ಎಂದು ತಿಳಿಸಿದರು.
ವಿಮರ್ಶಕಿ ಎಂ.ಎಸ್. ಆಶಾದೇವಿ, ಸಾಹಿತಿ ಹಂಪ ನಾಗರಾಜಯ್ಯ, ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.