ADVERTISEMENT

ಕೃತಕ ಹೂವು ತ್ಯಜಿಸಿ, ನೈಸರ್ಗಿಕ ಹೂವು ಬಳಸಲು ಮನವಿ

ಲಾಲ್‌ಬಾಗ್‌ನಲ್ಲೊಂದು ವಿಶೇಷ ಜನಜಾಗೃತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 1 ಜನವರಿ 2024, 0:18 IST
Last Updated 1 ಜನವರಿ 2024, 0:18 IST
ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ಶಾಲಿನಿ ರಜನೀಶ್‌, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಕಾರ್ಯದರ್ಶಿ ಶಾಮಲಾ ಇಕ್ಬಾಲ್‌ ಮತ್ತು ಅಧಿಕಾರಿಗಳು ನೈಸರ್ಗಿಕ ಪುಷ್ಪಗಳ ಉತ್ತೇಜನ ಕಾರ್ಯಕ್ರಮದಲ್ಲಿ ಹೂವುಗಳ ಬಗ್ಗೆ ಮಾಹಿತಿ ಪಡೆದರು.
ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ಶಾಲಿನಿ ರಜನೀಶ್‌, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಕಾರ್ಯದರ್ಶಿ ಶಾಮಲಾ ಇಕ್ಬಾಲ್‌ ಮತ್ತು ಅಧಿಕಾರಿಗಳು ನೈಸರ್ಗಿಕ ಪುಷ್ಪಗಳ ಉತ್ತೇಜನ ಕಾರ್ಯಕ್ರಮದಲ್ಲಿ ಹೂವುಗಳ ಬಗ್ಗೆ ಮಾಹಿತಿ ಪಡೆದರು.   

ಬೆಂಗಳೂರು: ಕೃತಕ ಹೂವುಗಳ ಬಳಕೆಯಿಂದ ಪರಿಸರದ ಮೇಲಾಗುವ ಪರಿಣಾಮ, ಪುಷ್ಪ ಕೃಷಿಕರಿಗೆ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಜನ ಜಾಗೃತಿ ಮೂಡಿಸಲು ಭಾನುವಾರ ಲಾಲ್‌ಬಾಗ್‌ನಲ್ಲಿ ವಿನೂತನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ತೋಟಗಾರಿಕೆ ಇಲಾಖೆ, ಹೆಬ್ಬಾಳದ ಅಂತರರಾಷ್ಟ್ರೀಯ ಪುಷ್ಪ ಹರಾಜು ನಿಗಮ, ಜಿ.ಎಫ್‌.ಸಿ.ಐ. ಅಗ್ರಿ ಪ್ಲಾಸ್ಟ್, ರಾಜ್ಯದ ಹೂ ಬೆಳೆಗಾರರು ಹಾಗೂ ಖರೀದಾರರ ಸಹಯೋಗದಲ್ಲಿ ಲಾಲ್‌ಬಾಗ್‌ನ ಬೋನ್ಸಾಯ್‌ ಪಾರ್ಕ್‌ನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ರಾಜ್ಯದ ರೈತರು ಬೆಳೆದಿರುವ ವಿವಿಧ ತಳಿಗಳ ಹೂವಿನ ಬೆಳೆಗಳನ್ನು ಸಾಂಕೇತಿಕವಾಗಿ ಪ್ರದರ್ಶನ ಹಾಗೂ ಮಾರಾಟಕ್ಕೆ ಇಡಲಾಗಿತ್ತು.

ADVERTISEMENT

ಮುಂಜಾನೆ ಲಾಲ್‌ಬಾಗ್‌ಗೆ ಬಂದ ನಡಿಗೆದಾರರಿಗೆ ಹೂ ಬೆಳೆಗಾರರ ಪರವಾಗಿ ಒಂದು ಗುಲಾಬಿ ಹೂವನ್ನು ಉಚಿತವಾಗಿ ನೀಡಿ, ‘ನಿಮ್ಮ ಕಾರ್ಯಕ್ರಮಗಳಲ್ಲಿ ನೈಸರ್ಗಿಕ ಹೂವುಗಳನ್ನೇ ಬಳಸಿ ಹಾಗೂ ಕೃತಕ ಹೂಗಳನ್ನು ತ್ಯಜಿಸಿ‘ ಎಂದು ಮನವರಿಕೆ ಮಾಡಿಕೊಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ಶಾಲಿನಿ ರಜನೀಶ್‌, ‘ಕೃತಕ ಹೂವುಗಳನ್ನು ಬಿಟ್ಟು ಹೆಚ್ಚಿನ ಪ್ರಮಾಣದಲ್ಲಿ ನೈಸರ್ಗಿಕ ಹೂವುಗಳನ್ನು ಬಳಸಬೇಕು. ಪ್ಲಾಸ್ಟಿಕ್‌ ಹಾಗೂ ಸಿಂಥೆಟಿಕ್‌ ಹೂವುಗಳ ಬಳಕೆಯಿಂದ ಪರಿಸರದ ಮೇಲೆ ಆಗುವ ದಷ್ಪರಿಣಾಮ ಉಂಟಾಗುತ್ತದೆ’ ಎಂದು ವಿವರಿಸಿದರು.

‘ಪ್ರತಿವರ್ಷ ಹಬ್ಬ, ಮದುವೆ ಹಾಗೂ ಇನ್ನಿತರೆ ಸಮಾರಂಭಗಳಲ್ಲಿ ಕೃತಕ ಹೂಗಳ ಬಳಕೆ ಹೆಚ್ಚಾಗುತ್ತಿದೆ. ಇದರಿಂದ ನೈಸರ್ಗಿಕ ಹೂವು ಗಳನ್ನು ಕೊಳ್ಳುವರಿಲ್ಲದಂತಾಗಿದೆ. ಇದೇ ರೀತಿಯ ಬಳಕೆ ಹೆಚ್ಚಾದಲ್ಲಿ ನೈಸರ್ಗಿಕ ಹೂವುಗಳ ಬಳಕೆ ಕಡಿಮೆಯಾಗುತ್ತದೆ. ಬೆಳೆಗಾರರು ಸಂಕಷ್ಟಕ್ಕೆ ಸಿಲುಕುತ್ತಾರೆ. ಹೊಸ ವರ್ಷದ ಈ ಶುಭ ಸಂದರ್ಭದಲ್ಲಿ ಸಾರ್ವಜನಿಕರು ನೈಸರ್ಗಿಕ ಹೂವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಲು ಮುಂದಾಗಬೇಕು‘ ಎಂದು ದಕ್ಷಿಣ ಭಾರತ ಹೂ ಬೆಳೆಗಾರರ ಸಂಘದ ಅಧ್ಯಕ್ಷ ಟಿ.ಎಂ. ಅರವಿಂದ್‌ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಕಾರ್ಯದರ್ಶಿ ಶಾಮಲಾ ಇಕ್ಬಾಲ್‌, ಲಾಲ್‌ಬಾಗ್ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ಕುಸುಮ ಹಾಗೂ ಐ ಫ್ಯಾಬ್‌ ವ್ಯವಸ್ಥಾಪಕ ನಿರ್ದೇಶಕ ವಿಶ್ವನಾಥ್ ಮುನಿಯಪ್ಪ, ದಕ್ಷಿಣ ಭಾರತ ಹೂ ಬೆಳೆಗಾರರ ಸಂಘದ ಅಧ್ಯಕ್ಷ ಟಿ.ಎಂ. ಅರವಿಂದ್‌, ನಿರ್ದೇಶಕ ಶ್ರೀಕಾಂತ್  ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.