ADVERTISEMENT

ಎಚ್‌ಎಸ್‌ಆರ್‌ ಬಡಾವಣೆ: 10, 11ಕ್ಕೆ ‘ಪುಸ್ತಕ ಸಂತೆ’

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2024, 18:16 IST
Last Updated 7 ಫೆಬ್ರುವರಿ 2024, 18:16 IST
   

ಬೆಂಗಳೂರು: ಎಚ್‌ಎಸ್‌ಆರ್‌ ಬಡಾವಣೆಯ ಸ್ವಾಭಿಮಾನ ಉದ್ಯಾನದಲ್ಲಿ ಫೆ.10 ಹಾಗೂ 11ರಂದು ‘ಪುಸ್ತಕ ಸಂತೆ’ ಹಮ್ಮಿಕೊಳ್ಳಲಾಗಿದೆ.  

ರಾಜ್ಯದ ಹಿರಿಯ ಹಾಗೂ ಕಿರಿಯ ಪ್ರಕಾಶನ ಸಂಸ್ಥೆಗಳು ಒಗ್ಗೂಡಿ ವೀರಲೋಕ ಪ್ರತಿಷ್ಠಾನದ ನೇತೃತ್ವದಲ್ಲಿ ಇದೇ ಮೊದಲ ಬಾರಿ ಬೆಂಗಳೂರಿನಲ್ಲಿ ಪುಸ್ತಕ ಸಂತೆ ಹಮ್ಮಿಕೊಂಡಿವೆ. ಪುಸ್ತಕೋದ್ಯಮ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಇದೊಂದು ವಿನೂತನ ಹೆಜ್ಜೆ. ಎರಡು ದಿನಗಳು ನಡೆಯುವ ಸಂತೆಯಲ್ಲಿ 20 ಸಾವಿರಕ್ಕೂ ಹೆಚ್ಚು ಪುಸ್ತಕ ಪ್ರೇಮಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. 

ಸಾಹಿತ್ಯ ಸಮ್ಮೇಳನ, ಕಲಾಕ್ಷೇತ್ರಗಳಲ್ಲಿ ಹಿಂದಿನಿಂದಲೂ ಪ್ರದರ್ಶನ–ಮಾರಾಟ ನಡೆಯುತ್ತಾ ಬಂದಿವೆ. ಸಂತೆ ಸ್ವರೂಪ ನೀಡಿರುವುದು ಇದೇ ಮೊದಲು. ಜನರು ತಮ್ಮ ಆಸಕ್ತಿಯ, ಜನಪ್ರಿಯ ಲೇಖಕರ ಪುಸ್ತಕಗಳನ್ನು ಕೊಂಡು ಓದುತ್ತಾರೆ. ಆದರೆ, ಹೊಸ ಲೇಖಕರ ಕುರಿತು ಹೆಚ್ಚಿನ ಮಾಹಿತಿ ಇರುವುದಿಲ್ಲ. ಹೊಸ ತಲೆಮಾರಿನ ಬರಹಗಾರರ ಪುಸ್ತಕಗಳನ್ನೂ ಓದುಗರಿಗೆ ಪರಿಚಯಿಸಬೇಕಿದೆ. ಪುಸ್ತಕೋದ್ಯಮದ ಪ್ರಸ್ತುತ ಸ್ಥಿತಿಗಳ ಕುರಿತೂ ಮನವರಿಕೆ ಮಾಡಿಸುವ ಅಗತ್ಯವಿದೆ. ಈ ಎಲ್ಲ ಕಾರಣಗಳಿಗಾಗಿ ಪುಸ್ತಕ ಸಂತೆ ಹಮ್ಮಿಕೊಳ್ಳಲಾಗಿದೆ ಎಂದರು.

ADVERTISEMENT

ವೀರಲೋಕ ಪ್ರತಿಷ್ಠಾನದ ಪ್ರಕಾಶಕ ಶ್ರೀನಿವಾಸ ಮಾತನಾಡಿ, ‘ಫೆ.10ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತೆಗೆ ಚಾಲನೆ ನೀಡುವರು. ಇನ್ನೂರಕ್ಕೂ ಹೆಚ್ಚು ಸಾಹಿತಿಗಳು ಭಾಗವಹಿಸುವರು. ಶಾಲಾ–ಕಾಲೇಜು ವಿದ್ಯಾರ್ಥಿಗಳಿಗೆ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ನೂರಕ್ಕೂ ಹೆಚ್ಚು ಪುಸ್ತಕ ಮಳಿಗೆಗಳ ಜತೆಗೆ, ಆಹಾರ ಸಂತೆ, ಸಂಗೀತ ಕಾರ್ಯಕ್ರಮಗಳೂ ಇರಲಿವೆ’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ರೋಟರಿ ಅಧ್ಯಕ್ಷ ರಾಜೀವ್‌ ಥ್ಯಾಕಟ್‌, ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಷ ಪ್ರಕಾಶ್‌ ಕಂಬತ್ತಳ್ಳಿ, ಪ್ರಕಾಶಕರು ಮತ್ತು ಬರಹಗಾರರ ಸಂಘದ ಅಧ್ಯಕ್ಷ ನಿಡಸಾಲೆ ಪುಟ್ಟಸ್ವಾಮಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿವೃತ್ತ ಅಧಿಕಾರಿ ಬಿ.ಎನ್‌.ಪರೆಡ್ಡಿ, ವಿದ್ಯಾರ್ಥಿ ಮುಖಂಡ ಅನಿಲ್‌ ಕುಮಾರ್ ರೆಡ್ಡಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.