ADVERTISEMENT

ಕೈಕುಲುಕಿ, ನಸು ನಕ್ಕಿದ್ದರು ಎಲಿಜಬೆತ್: ಹೆಡ್ವಿಗ್ ರೆಗೋ

ಬ್ರಿಟನ್‌ನ ರಾಣಿ ಭೇಟಿ ಮಾಡಿದ್ದ ನಗರದ ಹೆಡ್ವಿಗ್ ರೆಗೋ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2022, 18:56 IST
Last Updated 11 ಸೆಪ್ಟೆಂಬರ್ 2022, 18:56 IST
ಹೆಡ್ವಿಗ್ ರೆಗೋ
ಹೆಡ್ವಿಗ್ ರೆಗೋ   

ಬೆಂಗಳೂರು: ‘ಬ್ರಿಟನ್‌ನ ರಾಣಿಯಾಗಿದ್ದ ಎರಡನೇ ಎಲಿಜಬೆತ್ ಅವರನ್ನು ಕಣ್ತುಂಬಿಕೊಳ್ಳುವ ಅವಕಾಶ 1997ರಲ್ಲಿ ಒದಗಿಬಂದಿತ್ತು. ಅವರು ನಸು ನಗುತ್ತಾ, ಕೈಕುಲುಕಿದ ಆ ಕ್ಷಣಗಳು ಇಂದಿಗೂ ಕಣ್ಣಮುಂದೆ ಹಾಗೆಯೇ ಇವೆ. ಆ ದಿನ ನನ್ನ ಜೀವನದ ಅತ್ಯಂತ ಮಹತ್ವದ ದಿನಗಳಲ್ಲಿ ಒಂದಾಗಿದೆ’.

ಇವು ನಗರದಲ್ಲಿ ನೆಲೆಸಿರುವಆಂಗ್ಲೋ ಇಂಡಿಯನ್ ಸಮುದಾಯದಹೆಡ್ವಿಗ್ ರೆಗೋ ಅವರ ಮನದಾಳದ ಮಾತುಗಳು. 1937ರಲ್ಲಿ ಜನಿಸಿದ ಇವರು, ತಮ್ಮ ಸಾಮಾಜಿಕ ಕಾರ್ಯಗಳ ಮೂಲಕ ಗುರುತಿಸಿಕೊಂಡಿದ್ದರು. 1997ರಲ್ಲಿ ನಾಮನಿರ್ದೇಶಿತ ಸದಸ್ಯರಾಗಿ ಲೋಕಸಭೆಗೆ ಪ್ರವೇಶಿಸಿದ್ದರು. ಈ ಅವಧಿಯಲ್ಲಿ ಅವರಿಗೆಕ್ವೀನ್ ಎಲಿಜಬೆತ್ ಭೇಟಿ ಮಾಡುವ ಅವಕಾಶ ದೊರೆತಿತ್ತು. 85 ವರ್ಷದ ಅವರು, ಭೇಟಿಯ ಕ್ಷಣಗಳನ್ನು ‘ಪ್ರಜಾವಾಣಿ’ ಜತೆಗೆ ಹಂಚಿಕೊಂಡರು.

‘ತಳ ಸಮುದಾಯದವರ ಕಲ್ಯಾಣಕ್ಕಾಗಿ ನಾನು ಶ್ರಮಿಸಿದೆ. ಸ್ತನ ಕ್ಯಾನ್ಸರ್ ಜಯಿಸಿದ ನಾನು, ಈ ಕಾಯಿಲೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನೂ ಮಾಡಿದೆ. ಚೆನ್ನೈನಲ್ಲಿ ಸ್ನಾತಕೋತ್ತರ ಪದವಿ ಪಡೆದು, 1977ರಿಂದ 1997ರ ವರೆಗೆ ಬೆಂಗಳೂರಿನ ದಿ ಫ್ರಾಂಕ್ಆಂಥೋನಿ ಪಬ್ಲಿಕ್ ಸ್ಕೂಲ್‌ನಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದೆ. ನನ್ನ ಸಾಮಾಜಿಕ ಕಾರ್ಯಗಳನ್ನು ಗುರುತಿಸಿದ ಅಂದಿನ ಪ್ರಧಾನಿ ಎಚ್‌.ಡಿ. ದೇವೇಗೌಡ, ಲೋಕಸಭೆಗೆ ನಾಮನಿರ್ದೇಶನ ಮಾಡಿದರು. ಇದರಿಂದಾಗಿ ಸಂಸತ್ತು ಪ್ರವೇಶಿಸುವ ಅವಕಾಶ ದೊರೆಯಿತು.ಎಲಿಜಬೆತ್ ಅವರು ಭಾರತಕ್ಕೆ ಭೇಟಿ ನೀಡಿದಾಗ, ಸಂಸತ್ತಿಗೆ ಅತಿಥಿಯಾಗಿ ಬಂದಿದ್ದರು’ ಎಂದರು.

ADVERTISEMENT

‘ಬ್ಯಾಂಕ್ವೆಟ್ ಹಾಲ್‌ನಲ್ಲಿ ಅವರ ಎದುರಿಗೆ ಕುಳಿತುಕೊಂಡಿದ್ದೆ. ಅವರನ್ನು ನೋಡುತ್ತಿದ್ದರೆ ನಮ್ಮನ್ನೇ ನಾವು ಮರೆಯುತ್ತೇವೆ. ಅವರು ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಇದ್ದಷ್ಟು ಹೊತ್ತು ಅವರ ಚಲನವಲನವನ್ನೇ ಗಮನಿಸುತ್ತಿದ್ದೆವು. ಆ ವೇಳೆ ಅವರು ಎಲ್ಲ ಸಂಸದರಿಗೆ ಶುಭಹಾರೈಸಿದರು. ಅವರ ಜತೆಗೆ ವೈಯಕ್ತಿಕವಾಗಿ ಮಾತುಕತೆ ನಡೆಸಬೇಕು ಅಂದುಕೊಂಡೆ. ಆದರೆ, ಅವರಿಗೆ ಸಮಯಾವಕಾಶ ಇಲ್ಲದಿದ್ದರಿಂದ ಸಾಧ್ಯವಾಗಲಿಲ್ಲ’ ಎಂದು ನೆನಪಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.