ADVERTISEMENT

ನಮ್ಮನ್ನಾಳುವವರಿಗೆ ಕನ್ನಡ ಉಳಿಸುವ ಕಾಳಜಿಯಿಲ್ಲ: ಪ್ರೊ.ದೊಡ್ಡರಂಗೇಗೌಡ ಬೇಸರ

ರಾಜರಾಜೇಶ್ವರಿನಗರ ಕ್ಷೇತ್ರದ ಕನ್ನಡ ಸಾಹಿತ್ಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2021, 21:50 IST
Last Updated 21 ಫೆಬ್ರುವರಿ 2021, 21:50 IST
ಡಾ. ದೊಡ್ಡ ರಂಗೇಗೌಡ
ಡಾ. ದೊಡ್ಡ ರಂಗೇಗೌಡ   

ರಾಜರಾಜೇಶ್ವರಿ ನಗರ: ‘ಸಪ್ತಸಾಗರದ ಆಚೆಗೆ ಹೋಗಿ ಉದ್ಯೋಗ ಕಂಡುಕೊಂಡು ಕನ್ನಡ ಉಳಿಸುವ ಕೆಲಸವನ್ನು ಅಲ್ಲಿನ ಕನ್ನಡಿಗರು ಮಾಡುತ್ತಿದ್ದಾರೆ. ಆದರೆ ನಮ್ಮನ್ನಾಳುವ ರಾಜಕಾರಣಿಗಳು, ಅಧಿಕಾರಿಗಳು ಮಾತ್ರ ಕನ್ನಡ ಭಾಷೆ–ಸಂಸ್ಕೃತಿ ಉಳಿಸುವ ಕೆಲಸ ಮಾಡದೆ ಪ್ರಚಾರಕ್ಕೆ ಸೀಮಿತರಾಗಿದ್ದಾರೆ’ ಎಂದು ಅಖಿಲ ಭಾರತ 86ನೇ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಡಾ. ದೊಡ್ಡ ರಂಗೇಗೌಡ ಬೇಸರ ವ್ಯಕ್ತಪಡಿಸಿದರು.

ರಾಜರಾಜೇಶ್ವರಿ ನಗರದಲ್ಲಿ ಭಾನುವಾರ ರಾಜರಾಜೇಶರಿನಗರ ವಿಧಾನಸಭಾ ಕ್ಷೇತ್ರದ ಎರಡನೇ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ‘ವಿಶ್ವಕ್ಕೆ ಜ್ಞಾನವನ್ನು ಧಾರೆಯೆರೆದ ದೇಶ ನಮ್ಮದು. ನಮ್ಮಲ್ಲಿ ಮೌಲ್ಯಯುತ ಪಂಡಿತರು, ಸಂಶೋಧಕರಿದ್ದು ಪ್ರಾಚೀನ ಕಾಲದಿಂದಲೂ ವಿಶ್ವದ ಗಮನ ಸೆಳೆಯುವಲ್ಲಿ ಭಾರತೀಯರು ಯಶಸ್ವಿಯಾಗಿದ್ದಾರೆ’ ಎಂದರು.

ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಪ್ರೊ. ನಾರಾಯಣ ಘಟ್ಟ, ‘ರಾಜಕಾರಣಿಗಳು ಸರ್ಕಾರಿ ಶಾಲೆಗಳನ್ನು ಮುಚ್ಚಿಸುವ ಉದ್ದೇಶದಿಂದಲೇ ಅವುಗಳಿಗೆ ಮೂಲಸೌಕರ್ಯವನ್ನು ಒದಗಿಸುತ್ತಿಲ್ಲ. ಆ ಮೂಲಕ ಇಂಗ್ಲಿಷ್ ಶಾಲೆಗಳ ಪರವಾಗಿ ನಿಂತು ಕನ್ನಡಕ್ಕೆ ದ್ರೋಹವೆಸಗುವ ಕೆಲಸ ಮಾಡುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಶಾಸಕ ಮುನಿರತ್ನ, ‘ರಾಜರಾಜೇಶ್ವರಿನಗರದ ಎಲ್ಲಾ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಬದ್ಧನಾಗಿದ್ದೇನೆ’ ಎಂದರು.

ಕಸಾಪ ರಾಜರಾಜೇಶ್ವರಿ ನಗರದ ಘಟಕದ ಅಧ್ಯಕ್ಷ ಕೆ.ಎನ್.ನಾಗೇಂದ್ರಕುಮಾರ್, ಜಿಲ್ಲಾ ಕಸಾಪ ಅಧ್ಯಕ್ಷ ಮಾಯಣ್ಣ, ಚಿತ್ರ ಕಲಾವಿದ ಚಿ.ಸು.ಕೃಷ್ಣಾಶೆಟ್ಟಿ, ವಿಧಾನಪರಿಷತ್ ಸದಸ್ಯ ಅ.ದೇವೆಗೌಡ, ವಿಮರ್ಶಕ ಕರಿಗೌಡ ಬೀಚನಹಳ್ಳಿ, ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಮಾತನಾಡಿದರು.

ವಿಮರ್ಶಕ ಡಾ.ಬೈರಮಂಗಲ ರಾಮೇಗೌಡ ಅವರು ರಾಷ್ಟ್ರಧ್ವಜವನ್ನು ಹಾಗೂ ಸಾಹಿತಿ ಗೊ.ರು. ಚನ್ನಬಸಪ್ಪ ಅವರು ನಾಡಧ್ವಜ, ಜಿಲ್ಲಾ ಕಸಾಪ ಅಧ್ಯಕ್ಷ ಮಾಯಣ್ಣ ಅವರು ಪರಿಷತ್ತಿನ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಿವೃತ್ತ ಐಎಎಸ್ ಅಧಿಕಾರಿ ಟಿ.ತಿಮ್ಮೇಗೌಡ ಅವರು ಬಾಲಕೃಷ್ಣ ಬಯಲು ರಂಗಮಂದಿರದ ಬಳಿ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಚಾಲನೆ ನೀಡಿದರು.ಮೆರವಣಿಗೆಯಲ್ಲಿ ರಾಜರಾಜೇಶ್ವರಿ ಶಾಲೆಯ ಮಕ್ಕಳು, ಮಹಿಳಾ ಮಂಡಳಿ ಸದಸ್ಯರು ಕುಣಿದು ಕುಪ್ಪಳಿಸುತ್ತಾ ಸಾಗಿ ಬಂದರು. ವಿವಿಧ ಜನಪದ ಕಲಾತಂಡಗಳ ಪ್ರದರ್ಶನ ಆಕರ್ಷಕವಾಗಿತ್ತು.

ಕವಿಗೋಷ್ಠಿಯಲ್ಲಿ ಮುದಲ್ ವಿಜಯ್, ಮಂಜು ಪಾಂಡವಪುರ, ರಘು ಬೆಟ್ಟಹಳ್ಳಿ, ಆದಿವಾಲ ಗಂಗಮ್ಮ ಮತ್ತಿತರರು ಭಾಗವಹಿಸಿದ ಗೋಷ್ಠಿಯ ಅಧ್ಯಕ್ಷತೆಯನ್ನು ಪ್ರೊ. ಎಲ್.ಎನ್.ಮುಕುಂದರಾಜ್ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.