ADVERTISEMENT

ಬ್ಯಾಂಕ್ ಅವ್ಯವಹಾರ; ಅಧ್ಯಕ್ಷ, ನಿರ್ದೇಶಕರು ಸಿಸಿಬಿ ಕಸ್ಟಡಿಗೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2020, 21:23 IST
Last Updated 13 ಅಕ್ಟೋಬರ್ 2020, 21:23 IST

ಬೆಂಗಳೂರು: ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಹಾಗೂ ಗುರು ಸಾರ್ವಭೌಮ ಸೌಹಾರ್ದ ಕ್ರೆಡಿಟ್ ಕೋ- ಆಪರೇಟಿವ್ ಲಿಮಿಟೆಡ್‌ನ ಠೇವಣಿದಾರರ ಹಣ ದುರ್ಬಳಕೆ ಹಾಗೂ ಅವ್ಯವಹಾರ ಪ್ರಕರಣದಡಿ ಬಂಧಿಸಲಾಗಿರುವ ಬ್ಯಾಂಕ್ ಅಧ್ಯಕ್ಷ ಕೆ. ರಾಮಕೃಷ್ಣ ಸೇರಿ 9 ಮಂದಿಯನ್ನು ವಿಚಾರಣೆಗಾಗಿ ಸಿಸಿಬಿ ಕಸ್ಟಡಿಗೆ ಒಪ್ಪಿಸಲಾಗಿದೆ.

ಪ್ರಕರಣದ ಬಗ್ಗೆ ಸಿಐಡಿ ತನಿಖೆ ಆರಂಭಿಸುತ್ತಿದ್ದಂತೆ ಆರೋಪಿಗಳು ಹೊರ ರಾಜ್ಯಕ್ಕೆ ಹೋಗಿ ತಲೆಮರೆಸಿಕೊಂಡಿದ್ದರು. ಮಾಹಿತಿ ಕಲೆಹಾಕಿದ್ದ ಸಿಐಡಿಯ ವಿಶೇಷ ತಂಡ, ಆರೋಪಿಗಳನ್ನು ಬಂಧಿಸಿ ಸೋಮವಾರ ನಗರಕ್ಕೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಿತು.

‘ಬ್ಯಾಂಕ್ ಅವ್ಯವಹಾರದಲ್ಲಿ ಅಧ್ಯಕ್ಷ ರಾಮಕೃಷ್ಣ ಪ್ರಮುಖ ಆರೋಪಿ. ಆತನ ಜೊತೆಗೆ ನಿರ್ದೆಶಕರು ಸಹ ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿ, ಎಲ್ಲರನ್ನೂ ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ನೀಡಬೇಕು’ ಎಂದು ಸಿಐಡಿ ಅಧಿಕಾರಿಗಳು ನ್ಯಾಯಾಲಯವನ್ನು ಕೋರಿದ್ದರು. ಅವರ ಮನವಿ ಪುರಸ್ಕರಿಸಿದ ನ್ಯಾಯಾಲಯ, ನಾಲ್ಕು ದಿನಗಳವರೆಗೆ ಆರೋಪಿಗಳನ್ನು ಸಿಐಡಿ ಕಸ್ಟಡಿಗೆ ನೀಡಿದೆ.

ADVERTISEMENT

ಆರೋಪಿಗಳ ಮುಖಾಮುಖಿ ವಿಚಾರಣೆ: ಅವ್ಯವಹಾರ ಸಂಬಂಧ ಸಾಕಷ್ಟು ದಾಖಲೆಗಳನ್ನು ಸಂಗ್ರಹಿಸಿರುವ ಸಿಐಡಿ ಅಧಿಕಾರಿಗಳು, ಕಸ್ಟಡಿಗೆ ಪಡೆದಿರುವ ಆರೋಪಿಗಳನ್ನು ಮಂಗಳವಾರ ಮುಖಾಮುಖಿಯಾಗಿಸಿ ವಿಚಾರಣೆ ನಡೆಸಿದರು.

‘ರಾಮಕೃಷ್ಣ, ಅವರ ಮಗ ಕೆ.ಆರ್. ವೇಣುಗೋಪಾಲ್, ಬ್ಯಾಂಕ್ ನಿರ್ದೇಶಕರಾದ ಜಗನ್ನಾಥ್ ಹೆಗಡೆ, ಲಕ್ಷ್ಮಿನಾರಾಯಣಾಚಾರ್ಯ, ಗಣೇಶ್ ಭಟ್, ಅಚ್ಚಣ್ಣ, ದ್ವಾರಕನಾಥ್, ಇನಾಂದಾರ್ ಹಾಗೂ ರಮೇಶ್‌ ಎಂಬುವರನ್ನು ಬಂಧಿಸಲಾಗಿದೆ. ಎಲ್ಲರನ್ನೂ ವಿಚಾರಣೆಗೆ ಒಳಪಡಿಸಿ, ಅವ್ಯವಹಾರದ ಹಣ ಎಲ್ಲಿದೆ ಎಂಬ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ’ ಎಂದು ಸಿಐಡಿ ಮೂಲಗಳು ಹೇಳಿವೆ.

ಪ್ರತಿಭಟನೆ ಮುಂದುವರಿಕೆ; ‘ಬ್ಯಾಂಕ್‌ ಅವ್ಯವಹಾರ ಪ್ರಕರಣ ಆರೋಪಿಗಳನ್ನು ಬಂಧಿಸಿ, ತಮ್ಮ ಹಣ ವಾಪಸು ಕೊಡಿಸಬೇಕು’ ಎಂದು ಆಗ್ರಹಿಸಿ ಬ್ಯಾಂಕ್‌ ಎದುರು ಗ್ರಾಹಕರು ನಡೆಸುತ್ತಿರುವ ಪ್ರತಿಭಟನೆ ಮುಂದುವರಿದಿದೆ.

‘ಹಿರಿಯ ನಾಗರಿಕರು, ನಿವೃತ್ತ ನೌಕರರು ಹಾಗೂ ಉದ್ಯೋಗಸ್ಥರು ಬ್ಯಾಂಕ್‌ನಲ್ಲಿ ಹಣ ಹೂಡಿಕೆ ಮಾಡಿದ್ದರು. ಇದೀಗ ಅವರೆಲ್ಲರೂ ಕಂಗಾಲಾಗಿದ್ದು, ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ. ಅವ್ಯವಹಾರ ವಿರುದ್ಧ ತಿಂಗಳಿನಿಂದ ಪ್ರತಿಭಟನೆ ನಡೆಸಲಾಗುತ್ತಿದೆ’ ಎಂದು ಪ್ರತಿಭಟನಕಾರರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.