ADVERTISEMENT

K ರಘುನಾಥ್‌ ಸಾವಿನ ಕೇಸ್: ಆದಿಕೇಶವುಲು ಮಕ್ಕಳು, DySP SY ಮೋಹನ್ ಸಿಬಿಐನಿಂದ ಬಂಧನ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2025, 15:56 IST
Last Updated 22 ಡಿಸೆಂಬರ್ 2025, 15:56 IST
ಸಿಬಿಐ – ‌ಪಿಟಿಐ ಚಿತ್ರ
ಸಿಬಿಐ – ‌ಪಿಟಿಐ ಚಿತ್ರ   

ಬೆಂಗಳೂರು: ಉದ್ಯಮಿ ಡಿ.ಕೆ. ಆದಿಕೇಶವುಲು ಪುತ್ರ ಡಿ.ಎ ಶ್ರೀನಿವಾಸ್, ಪುತ್ರಿ ಡಿ.ಎ.ಕಲ್ಪಜಾ, ಡಿವೈಎಸ್‌ಪಿ ಎಸ್‌.ವೈ.ಮೋಹನ್ ಅವರನ್ನು ಕೆ.ರಘುನಾಥ್‌ ಅವರ ಅನುಮಾನಾಸ್ಪದ ಸಾವು ಹಾಗೂ ನಕಲಿ ದಾಖಲೆ ಸೃಷ್ಟಿ ಆರೋಪದ ಪ್ರಕರಣದಲ್ಲಿ ಸಿಬಿಐ ಪೊಲೀಸರು ಬಂಧಿಸಿದ್ದಾರೆ.

ಎಸ್.ವೈ. ಮೋಹನ್ ಅವರು ಸದ್ಯ ರಾಜ್ಯ ಮಾನವ ಹಕ್ಕುಗಳ ಆಯೋಗದಲ್ಲಿದ್ದರು. ಮೂವರು ಆರೋಪಿಗಳ ವೈದ್ಯಕೀಯ ಪರೀಕ್ಷೆ ಪೂರ್ಣಗೊಂಡ ಬಳಿಕ ನ್ಯಾಯಾಧೀಶರ ಎದುರು ಹಾಜರುಪಡಿಸುವುದಾಗಿ ತನಿಖಾ ಸಂಸ್ಥೆ ತಿಳಿಸಿದೆ.

ವಂಚನೆ, ನಕಲಿ ದಾಖಲೆ ಸೃಷ್ಟಿ, ಛಾಪಾಕಾಗದ ಹಾಗೂ ಮೊಹರುಗಳ ನಕಲು, ಸಾಕ್ಷ್ಯನಾಶ ಹಾಗೂ ನಕಲಿ ಸಾಕ್ಷ್ಯ ಸೃಷ್ಟಿ ಕುರಿತ ಪ್ರಕರಣಗಳಿಗೆ ಸಂಬಂಧಿಸಿ ಸಿಬಿಐ ತನಿಖೆ ನಡೆಸಿದೆ.

ADVERTISEMENT

ನಕಲಿ ದಾಖಲೆ ಹಾಗೂ ಕೆ.ರಘುನಾಥ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್‌ ಆದೇಶದ ಅನ್ವಯ ಸಿಬಿಐ ಪ್ರಕರಣ ದಾಖಲಿಸಿಕೊಂಡಿತ್ತು. ಈ ಹಿಂದೆ ಇದೇ ಪ್ರಕರಣವನ್ನು ಕರ್ನಾಟಕದ ಪೊಲೀಸರು ತನಿಖೆ ನಡೆಸಿದ್ದರು. ಹೈಕೋರ್ಟ್‌ನ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿತ್ತು.

ರಘುನಾಥ್ ಅವರು ಆದಿಕೇಶವುಲು ಅವರ ಆಪ್ತರಾಗಿದ್ದರು. 2019ರ ಮೇ 4ರಂದು ರಘುನಾಥ್ ನೇಣುಬಿಗಿದ ಸ್ಥಿತಿಯಲ್ಲಿ ಆದಿಕೇಶವುಲು ಅವರಿಗೆ ಸೇರಿದ ಅತಿಥಿ ಗೃಹದಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ವೈದೇಹಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಇದು ಆತ್ಮಹತ್ಯೆ ಎಂದು ಪ್ರಕರಣ ಮುಕ್ತಾಯಗೊಳಿಸಲಾಗಿತ್ತು. ಆದರೆ, 2020ರ ಫೆ.15ರಂದು ರಘುನಾಥ್ ಪತ್ನಿ ಇದು ಕೊಲೆ ಎಂದು ಶಂಕಿಸಿ ದೂರು ನೀಡಲು ಮುಂದಾಗಿದ್ದರು. ದೂರು ಸ್ವೀಕರಿಸದಿದ್ದಾಗ ಖಾಸಗಿ ದೂರು ಸಲ್ಲಿಸಿದ್ದರು. ರಘುನಾಥ್ 2016ರಲ್ಲಿ ಪತ್ನಿ ಮಂಜುಳಾ ಹೆಸರಿಗೆ ವಿಲ್ ಬರೆದಿದ್ದರು.

‘ರಘುನಾಥ್ ಅವರು ಮೃತಪಟ್ಟ ನಂತರ ಡಿ.ಎ ಶ್ರೀನಿವಾಸ್ ಅವರು, ನಕಲಿ ಛಾಪಾ ಕಾಗದ ಬಳಸಿದ್ದರು. ಬಳಿಕ ರಘುನಾಥ್ ಹೆಸರಿನಲ್ಲಿ ನಕಲಿ ವಿಲ್ ತಯಾರಿಸಿ ಅವರ ಬಳಿ ಇರುವ ಆಸ್ತಿ ತಮಗೆ ಸೇರಬೇಕು ಎಂದು ಪ್ರತಿಪಾದಿಸಿದ್ದರು. ವಿಲ್ ನೋಂದಣಿ ಮಾಡಿ ಆಸ್ತಿ ವಶಕ್ಕೆ ಮುಂದಾಗಿದ್ದರು’ ಎಂದು ಆರೋಪಿಸಲಾಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.