ADVERTISEMENT

ದಾಬಸ್ ಪೇಟೆ | ಮಳೆ ಕೊರತೆ: ಬಾಡುತ್ತಿದೆ ರಾಗಿ ಬೆಳೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2024, 20:58 IST
Last Updated 16 ಸೆಪ್ಟೆಂಬರ್ 2024, 20:58 IST
ಮಳೆ ಇಲ್ಲದೆ ಬಾಡಿರುವ ರಾಗಿ ಹೊಲ
ಮಳೆ ಇಲ್ಲದೆ ಬಾಡಿರುವ ರಾಗಿ ಹೊಲ   

ದಾಬಸ್ ಪೇಟೆ: ಸೋಂಪುರ ಹೋಬಳಿಯಲ್ಲಿ ಮುಂಗಾರು ಆರಂಭದಲ್ಲಿ ಅತೀ ಮಳೆಯಿಂದಾಗಿ ಹೊಲ ಉಳುಮೆ ಮಾಡಲಾಗದೇ, ಬಿತ್ತನೆ ತಡವಾಯಿತು. ಈಗ ಮಳೆ ಕೊರತೆಯ ಕಾರಣದಿಂದ ರಾಗಿ ಬೆಳೆ(ಪೈರು) ಬಾಡಲು ಆರಂಭಿಸಿದೆ. ಒಂದು ವಾರದಲ್ಲಿ ಮಳೆ ಬರದೇ ಹೋದರೆ ಬೆಳೆ ಪೂರ್ಣ ಒಣಗಲಿದೆ. ಇದು ರೈತರನ್ನು ಆತಂಕಕ್ಕೀಡು ಮಾಡಿದೆ.

ರಾಗಿ ಹೋಬಳಿಯ ಪ್ರಮುಖ ಬೆಳೆ. ಈ ಭಾಗದಲ್ಲಿ ನಡೆಯುತ್ತಿರುವ ಕೈಗಾರೀಕರಣ, ಗೋದಾಮು ಹಾಗೂ ಬಡಾವಣೆಗಳ ನಿರ್ಮಾಣದ ನಡುವೆಯೂ ಅನೇಕ ರೈತರು ಇರುವ ಜಮೀನಿನಲ್ಲೇ ಮಳೆಯಾಶ್ರಿತದಲ್ಲಿ ರಾಗಿ ಜೊತೆ ಜೊತೆಗೆ ತೊಗರಿ, ಅವರೆ, ಅಲಸಂದೆ, ಸಾಸಿವೆ ಇತರ ಸಣ್ಣಪುಟ್ಟ ಬೆಳೆಗಳನ್ನು ಮಿಶ್ರಬೆಳೆಯಾಗಿ  ಬೆಳೆಯುತ್ತಾರೆ.

ಆದರೆ, ಈ ಬಾರಿ ಮಳೆ ಕಣ್ಣಾ ಮುಚ್ಚಾಲೆ ಆಡುತ್ತಿದ್ದು, ಬೆಳೆಗಳು ಬಾಡುತ್ತಿವೆ. ಮಳೆ ಕೊರತೆಯಿಂದಾಗಿ ರೈತರು ರಾಗಿ ಬೆಳೆಗೆ ಮೇಲು ಗೊಬ್ಬರ (ರಾಸಾಯನಿಕ) ಹಾಕಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಪೈರುಗಳು ಸೊರಗುತ್ತಿವೆ.

ADVERTISEMENT

‘ರಾಗಿ ಪೈರು ಬೆಳೆಯುವ ಹಾಗೂ ತೆನೆ ಬಿಡುವ ಸಮಯದಲ್ಲಿ ಮಳೆ ಇಲ್ಲದೆ, ಭೂಮಿಯಲ್ಲಿ ತೇವಾಂಶವೂ ಇಲ್ಲದೆ ತೊಂದರೆಯಾಗಿದೆ’ ಎಂದು ನೊಂದು ನುಡಿದರು ರೈತ ಆನಂದ್.

₹20 ಸಾವಿರಕ್ಕೂ ಹೆಚ್ಚು ಹಣ ಖರ್ಚು ಮಾಡಿ ಎರಡು ಎಕರೆಗೆ ರಾಗಿ ಬಿತ್ತನೆ ಮಾಡಿದ್ದೇನೆ. ಸರಿಯಾದ ಸಮಯಕ್ಕೆ ಮಳೆ ಕೈಕೊಟ್ಟಿದೆ. ಇದರಿಂದ ಮೇವು ಕಡಿಮೆಯಾಗುತ್ತದೆ. ರಾಗಿ ಇಳುವರಿಯೂ ಕುಸಿಯುತ್ತದೆ’ ಎಂದರು ರೈತ ಗಂಗಯ್ಯ ಆತಂಕ ವ್ಯಕ್ತಪಡಿಸಿದರು.

ಮಳೆ ಇಲ್ಲದೆ ಬಾಡಿರುವ ರಾಗಿ ಹೊಲ 1
ಮಳೆ ಇಲ್ಲದೆ ಬಾಡಿರುವ ರಾಗಿ ಹೊಲ 2

Highlights - * ತೇವಾಂಶವಿಲ್ಲದೇ ಸೊರಗುತ್ತಿವೆ ಪೈರುಗಳು * ಮೇಲುಗೊಬ್ಬರ ಹಾಕಲೂ ಸಾಧ್ಯವಿಲ್ಲ * ಮಳೆ ಬರದಿದ್ದರೆ, ಪೂರ್ಣ ಬೆಳೆ ನಾಶ

Quote - ಮುಂಗಾರಿನಲ್ಲಿ ಉತ್ತಮ ಮಳೆಯಾಯಿತು. ಹಿಂಗಾರು ಆರಂಭಕ್ಕೆ ಮುನ್ನವೇ ಮಳೆ ಕೈ ಕೊಟ್ಟಿದೆ. ಇಳುವರಿ ಕುಂಠಿತವಾಗಲಿದೆ. ಮೇವು ಕಡಿಮೆಯಾಗಲಿದೆ – ರೈತ ಶಿವಕುಮಾರ್ ಸೋಂಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.