ADVERTISEMENT

ರಾಯಚೂರು ವಿದ್ಯಾರ್ಥಿನಿಯದ್ದು ಕೊಲೆಯಲ್ಲ, ಆತ್ಮಹತ್ಯೆ

ಲೈಂಗಿಕ ದೌರ್ಜನ್ಯ ನಡೆದಿಲ್ಲ: ಸಿಐಡಿ ಪೊಲೀಸರ ಕೈಸೇರಿದ ಮರಣೋತ್ತರ ಪರೀಕ್ಷೆ ವರದಿ

​ಪ್ರಜಾವಾಣಿ ವಾರ್ತೆ
Published 10 ಮೇ 2019, 19:31 IST
Last Updated 10 ಮೇ 2019, 19:31 IST
   

ಬೆಂಗಳೂರು: ರಾಜ್ಯದಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ರಾಯಚೂರು ವಿದ್ಯಾರ್ಥಿನಿ ಸಾವಿನ ಪ್ರಕರಣ ಸಂಬಂಧ ಮರಣೋತ್ತರ ಪರೀಕ್ಷೆಯ ವರದಿ ಸಿಐಡಿ ಅಧಿಕಾರಿಗಳ ಕೈಸೇರಿದ್ದು, ‘ವಿದ್ಯಾರ್ಥಿನಿಯದ್ದು ಆತ್ಮಹತ್ಯೆ. ಆಕೆ ಮೇಲೆ ಲೈಂಗಿಕ ದೌರ್ಜನ್ಯ ನಡೆದಿಲ್ಲ’ ಎಂದು ವೈದ್ಯರು ದೃಢಪಡಿಸಿದ್ದಾರೆ.

‘ಕುತ್ತಿಗೆ ಭಾಗದಲ್ಲಿ ರಕ್ತ ಹೆಪ್ಪುಗಟ್ಟಿದ ಗುರುತು ಇದೆ. ಅದು ನೇಣಿನ ಕುಣಿಕೆ ಕೊರೆದಿರುವುದರಿಂದ ಆಗಿರುವ ಗಾಯ. ದೇಹದ ಬೇರೆ ಯಾವುದೇ ಭಾಗದಲ್ಲೂ ಗಾಯದ ಗುರುತುಗಳಿಲ್ಲ. ಲೈಂಗಿಕ ದೌರ್ಜನ್ಯದ ಕುರುಹೂ ಇಲ್ಲ’ ಎಂದು ವರದಿಯಲ್ಲಿ ಹೇಳಿರುವುದಾಗಿ ಸಿಐಡಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳಲ್ಲಿ ಸಾಮಾನ್ಯವಾಗಿ 2 ದಿನಗಳಲ್ಲೇ ದೇಹ ಕೊಳೆತು ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಹೀಗಿರುವಾಗ, ವಿದ್ಯಾರ್ಥಿನಿಯ ಶವ ಪತ್ತೆಯಾಗಿದ್ದು 3 ದಿನಗಳ ನಂತರ. ಬಿರು ಬಿಸಿಲಿರುವ ಕಾರಣ ಶವ ಪೂರ್ತಿ ಕೊಳೆತಿತ್ತು. ದೇಹ ಕಪ್ಪು ಬಣ್ಣಕ್ಕೆ ತಿರುಗಿದ್ದನ್ನು ನೋಡಿದ್ದ ಕೆಲವರು, ‘ಯಾರೋ ಕೊಂದು ಶವ ಸುಟ್ಟಿದ್ದಾರೆ’ ಎಂದು ಸಂಶಯ ವ್ಯಕ್ತಪಡಿಸಿದ್ದರು. ಆ ಮೂರು ದಿನಗಳಲ್ಲಿ ಯಾರಾದರೂ ಬಂದು ಹೋಗಿದ್ದರು ಎಂಬುದಕ್ಕೆ ಹೆಜ್ಜೆ ಗುರುತಿನ ಕುರುಹೂ ಅಲ್ಲಿರಲಿಲ್ಲ’ ಎಂದು ಆ ಅಧಿಕಾರಿ ವಿವರಿಸಿದರು.

ADVERTISEMENT

ಏ.13ರಂದು ಮನೆಯಿಂದ ಆಚೆ ಬಂದಿದ್ದ ವಿದ್ಯಾರ್ಥಿನಿ, ಅದೇ ದಿನ ನೇಣಿಗೆ ಶರಣಾಗಿದ್ದಳು. ಮಗಳು ಕಾಣೆಯಾದ ಸಂಬಂಧ ಪೋಷಕರು ಅಂದೇ ಠಾಣೆಗೆ ದೂರು ಕೊಟ್ಟಿದ್ದರು. ದೂರಿನ ಅನ್ವಯ ಕೊಲೆ (302) ಹಾಗೂ ಅತ್ಯಾಚಾರ (376) ಆರೋಪಗಳಡಿ ಎಫ್‌ಐಆರ್ ದಾಖಲಾಗಿತ್ತು. ಆ ನಂತರ ಶುರುವಾದ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದ್ದರಿಂದ ತನಿಖೆಯನ್ನು ಸಿಐಡಿಗೆ ವರ್ಗಾಯಿಸಿ ಸರ್ಕಾರ ಆದೇಶಿಸಿತ್ತು.

ಹಲ್ಲೆ ನಡೆಸಿದ್ದ ಆರೋಪಿ: ‘ವಿದ್ಯಾರ್ಥಿನಿ ಹಾಗೂ ಸುದರ್ಶನ್ ನಡುವೆ ಸ್ನೇಹವಿತ್ತು. ಹಲವು ವರ್ಷಗಳಿಂದ ಗೊತ್ತಿರುವವನು ಎಂಬ ಕಾರಣಕ್ಕೆ ಆಕೆ ಸಲುಗೆಯಿಂದಲೇ ಮಾತನಾಡಿಸುತ್ತಿದ್ದಳು. ಅದನ್ನೇ ತಪ್ಪಾಗಿ ಭಾವಿಸಿಕೊಂಡ ಆತ, ತನ್ನನ್ನು ಪ್ರೀತಿಸುವಂತೆ ದುಂಬಾಲು ಬಿದ್ದಿದ್ದ. ಅದಕ್ಕೆ ಒಪ್ಪದಿದ್ದಾಗ 2–3 ಬಾರಿ ಗಲಾಟೆಯನ್ನೂ ಮಾಡಿದ್ದ. ಗೆಳೆಯನ ಈ ನಡವಳಿಯಿಂದ ಬೇಸರಗೊಂಡ ವಿದ್ಯಾರ್ಥಿನಿ, ಆತನನ್ನು ಶಾಶ್ವತವಾಗಿ ದೂರ ಇಡಲು ನಿರ್ಧರಿಸಿದ್ದಳು. ಆಗ ಮತ್ತಷ್ಟು ಆಕ್ರೋಶಗೊಂಡಿದ್ದ ಸುದರ್ಶನ್, ಒಮ್ಮೆ ಕಾಲೇಜಿನಲ್ಲೇ ಆಕೆ ಮೇಲೆ ಹಲ್ಲೆ ನಡೆಸಿದ್ದ’ ಎಂದು ಪೊಲೀಸರು ಮಾಹಿತಿ ನೀಡಿದರು.

‘ಏ.13ರ ಬೆಳಿಗ್ಗೆ (ಆತ್ಮಹತ್ಯೆ ದಿನ) ವಿದ್ಯಾರ್ಥಿನಿ ಮನೆಯಿಂದ ಹೊರಗೆ ಬಂದಿದ್ದಾಗಲೂ ರಸ್ತೆಯಲ್ಲಿ ಎದುರಾಗಿದ್ದ ಸುದರ್ಶನ್, ಪ್ರೀತಿ ವಿಚಾರವಾಗಿ ಜಗಳವಾಡಿದ್ದ. ಆನಂತರ ಆಕೆ ಪೋಷಕರ ಸಂಪರ್ಕಕ್ಕೂ ಸಿಗದೆ ಹೋಗಿದ್ದಳು. ಈ ಅಂಶಗಳನ್ನು ಗಮನಿಸಿದರೆ ಗೆಳೆಯನ ವರ್ತನೆಯಿಂದ ಬೇಸರಗೊಂಡು ಸಾಯುವ ನಿರ್ಧಾರ ತೆಗೆದುಕೊಂಡಿರುವ ಸಾಧ್ಯತೆ ಇದೆ. ಆದರೆ, ಶೈಕ್ಷಣಿಕ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬರೆದಿಟ್ಟಿರುವ ಪತ್ರವೂ ಸಿಕ್ಕಿದೆ. ಆ ಪತ್ರವನ್ನೂ ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದೇವೆ’ ಎಂದೂ ಅಧಿಕಾರಿಗಳು ಹೇಳಿದರು.

‘ಮೊದಲೇ ಗೊತ್ತಿತ್ತು, ಅದಕ್ಕೇ ಶವ ಸುಡಲಿಲ್ಲ’

‘ವಿಜಯಪುರದ ವಿದ್ಯಾರ್ಥಿನಿ ಕೊಲೆ ಪ್ರಕರಣದಲ್ಲೂ ಸಿಐಡಿ ನ್ಯಾಯಯುತವಾಗಿ ತನಿಖೆ ಮಾಡಲಿಲ್ಲ. ಈಗ ತನಿಖೆಯನ್ನು ತ್ವರಿತವಾಗಿ ಮುಗಿಸಲು ಈ ‍ಪ್ರಕರಣವನ್ನೂ ಆತ್ಮಹತ್ಯೆ ಎಂದು ಬಿಂಬಿಸಲು ಹೊರಟಿದ್ದಾರೆ’ ಎಂದು ವಿಶ್ವಕರ್ಮ ಸಮಾಜದ ಮುಖಂಡ ಮಾರುತಿ ಬಡಿಗೇರ ಆರೋಪಿಸಿದರು.

‘ಪ್ರಜಾವಾಣಿ’ ಜತೆ ಮಾತನಾಡಿದ ಅವರು, ‘ಪೊಲೀಸರು ಅಂತಿಮವಾಗಿ ಇದೇ ನಿರ್ಧಾರಕ್ಕೆ ಬರುತ್ತಾರೆ ಎಂಬುದು ಮೊದಲೇ ಗೊತ್ತಿತ್ತು. ಹೀಗಾಗಿ, ನಾವು ವಿದ್ಯಾರ್ಥಿನಿಯ ಶವವನ್ನು ಸುಡದೆ ಸ್ಮಶಾನದಲ್ಲಿ ಹೂತಿದ್ದೇವೆ. ಪ್ರಕರಣವನ್ನು ಸಿಬಿಐಗೆ ಒಪ್ಪಿಸಲಿ. ಅವರು ಇನ್ನೊಮ್ಮೆ ಶವ ಪರೀಕ್ಷೆ ಮಾಡಿಸಲಿ. ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.