ADVERTISEMENT

ಮೂರು ವರ್ಷಗಳಲ್ಲಿ ರೈಲ್ವೆ ಲೆವೆಲ್‌ ಕ್ರಾಸಿಂಗ್‌ ಇರಲ್ಲ: ವಿ. ಸೋಮಣ್ಣ

ರಾಮೋಹಳ್ಳಿಯಲ್ಲಿ ಕೇಂದ್ರದ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಮಾಹಿತಿ

​ಪ್ರಜಾವಾಣಿ ವಾರ್ತೆ
Published 13 ಜುಲೈ 2025, 14:29 IST
Last Updated 13 ಜುಲೈ 2025, 14:29 IST
ರಾಮೋಹಳ್ಳಿಯಲ್ಲಿ ನಿರ್ಮಾಣಗೊಳ್ಳಲಿರುವ ರೈಲ್ವೆ ಕೆಳ ಸೇತುವೆಗೆ ವಿ. ಸೋಮಣ್ಣ, ಶೋಭಾ ಕರಂದ್ಲಾಜೆ ಭಾನುವಾರ ಶಂಕುಸ್ಥಾಪನೆ ನೆರವೇರಿಸಿದರು
ರಾಮೋಹಳ್ಳಿಯಲ್ಲಿ ನಿರ್ಮಾಣಗೊಳ್ಳಲಿರುವ ರೈಲ್ವೆ ಕೆಳ ಸೇತುವೆಗೆ ವಿ. ಸೋಮಣ್ಣ, ಶೋಭಾ ಕರಂದ್ಲಾಜೆ ಭಾನುವಾರ ಶಂಕುಸ್ಥಾಪನೆ ನೆರವೇರಿಸಿದರು   

ಬೆಂಗಳೂರು: ನಗರದಿಂದ 100 ಕಿ.ಮೀ. ವ್ಯಾಪ್ತಿಯಲ್ಲಿ ಇನ್ನು ಮೂರು ವರ್ಷಗಳಲ್ಲಿ ರೈಲ್ವೆ ಲೆವೆಲ್‌ ಕ್ರಾಸಿಂಗ್‌ ಇರುವುದಿಲ್ಲ. ಲೆವೆಲ್ ಕ್ರಾಸಿಂಗ್‌ ಇರುವ ಕಡೆಗಳಲ್ಲಿ ರೈಲ್ವೆ ಕೆಳ ಸೇತುವೆ (ಆರ್‌ಯುಬಿ) ಅಥವಾ ಮೇಲ್ಸೇತುವೆ (ಆರ್‌ಒಬಿ) ನಿರ್ಮಿಸಲಾಗುವುದು ಎಂದು ಕೇಂದ್ರದ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.

ಭಾನುವಾರ ಚಲ್ಲಘಟ್ಟದಲ್ಲಿ ರೈಲ್ವೆ ಕೆಳ ಸೇತುವೆಯನ್ನು ಉದ್ಘಾಟಿಸಿ, ರಾಮೋಹಳ್ಳಿಯಲ್ಲಿ ನಿರ್ಮಾಣಗೊಳ್ಳಲಿರುವ ಕೆಳ ಸೇತುವೆಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. 

‘ಒಂದೂವರೆ ತಿಂಗಳ ಒಳಗಾಗಿ 100 ಕಿ.ಮೀ. ವ್ಯಾಪ್ತಿಯ ಎಲ್ಲ ಲೆವೆಲ್‌ ಕ್ರಾಸಿಂಗ್‌ ಗೇಟ್‌ಗಳ ಸಮೀಕ್ಷೆ ನಡೆಸಿ ವರದಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಲೆವೆಲ್‌ ಕ್ರಾಸಿಂಗ್‌ ಗೇಟ್‌ ಮುಕ್ತ ಹಳಿಯೇ ನಮ್ಮ ಉದ್ದೇಶವಾಗಿದೆ. ಆಗ ರೈಲು ಬರುವ ಸಮಯದಲ್ಲಿ ವಾಹನಗಳು ಸಾಲುಗಟ್ಟಿ ನಿಂತು ಕಾಯುವುದು ತಪ್ಪಲಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

ಬೆಂಗಳೂರು ನಗರದ ಅಭಿವೃದ್ಧಿಗೆ ರೈಲ್ವೆ ಇಲಾಖೆ ಅನೇಕ ಯೋಜನೆಗಳ ಮೂಲಕ ಕೊಡುಗೆ ನೀಡುತ್ತಿದೆ. ₹1,300 ಕೋಟಿ ಅಂದಾಜು ವೆಚ್ಚದಲ್ಲಿ ಕೆಎಸ್‌ಆರ್‌ ರೈಲು ನಿಲ್ದಾಣ ಮೇಲ್ದರ್ಜೆಗೇರಿಸಲಾಗುವುದು. ಕಂಟೋನ್ಮೆಂಟ್‌ ರೈಲು ನಿಲ್ದಾಣವನ್ನು ₹484 ಕೋಟಿ ವೆಚ್ಚದಲ್ಲಿ ನವೀಕರಣ ಮಾಡಲಾಗುತ್ತಿದೆ. ಯಶವಂತಪುರ ರೈಲು ನಿಲ್ದಾಣವನ್ನು ₹377.86 ಕೋಟಿ ವೆಚ್ಚದಲ್ಲಿ ನವೀಕರಿಸಲಾಗುತ್ತಿದೆ. ತುಮಕೂರು–ಬೆಂಗಳೂರು ರೈಲು ಮಾರ್ಗದಲ್ಲಿ ನಾಲ್ಕು ಪಥ ನಿರ್ಮಿಸಲಾಗುತ್ತಿದೆ. ಉಪನಗರ ರೈಲು ಯೋಜನೆಗೆ ವೇಗ ನೀಡಲಾಗುತ್ತಿದೆ ಎಂದು ವಿವರಿಸಿದರು.

ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ‘ಈ ಭಾಗದ ದಶಕಗಳ ಬೇಡಿಕೆಯಾದ ಚಲ್ಲಘಟ್ಟ ಕೇಳ ಸೇತುವೆಯನ್ನು ₹5.52 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ₹7.74 ಕೋಟಿ ವೆಚ್ಚದಲ್ಲಿ ರಾಮೋಹಳ್ಳಿ ರೈಲ್ವೆ ಕೆಳ ಸೇತುವೆ ಕಾಮಗಾರಿಗೆ ಶಂಕುಸ್ಥಾಪನೆ ಮಾಡಲಾಗಿದೆ. ಇದರಿಂದ ಸುರಕ್ಷಿತ ಮತ್ತು ತಡೆರಹಿತ ಸಂಚಾರಕ್ಕೆ ಅನುಕೂಲವಾಗಲಿದೆ’ ಎಂದು ತಿಳಿಸಿದರು.

ವಿಧಾನ ಪರಿಷತ್‌ ಸದಸ್ಯ ಟಿ.ಎನ್‌. ಜವರಾಯಿಗೌಡ, ನೈಋತ್ಯ ರೈಲ್ವೆ ಬೆಂಗಳೂರು ವಿಭಾಗೀಯ ವ್ಯವಸ್ಥಾಪಕ ಅಶುತೋಷ್ ಕುಮಾರ್ ಸಿಂಗ್ ಉ‍‍ಪಸ್ಥಿತರಿದ್ದರು.

ವಾಹನದಟ್ಟಣೆಗೆ ಪರಿಹಾರ:

ಆರ್‌.ಆರ್‌. ಎಂಜಿನಿಯರಿಂಗ್‌ ಕಾಲೇಜು ಕಡೆಯಿಂದ ರಾಮೋಹಳ್ಳಿ ಕಡೆಗೆ ಹೋಗುವ ಮಾರ್ಗದಲ್ಲಿ ಬೆಳಿಗ್ಗೆ ಮತ್ತು ಸಂಜೆಯ ಹೊತ್ತು ಸಂಚರಿಸುವ ರೈಲುಗಳ ಸಂಖ್ಯೆಯೂ ಹೆಚ್ಚು ಇದೇ ಸಮಯದಲ್ಲಿ ವಾಹನದಟ್ಟಣೆಯೂ ಹೆಚ್ಚು. ಇದರಿಂದಾಗಿ ರೈಲು ಸಂಚರಿಸುವ ಸಮಯದಲ್ಲಿ ಎರಡೂ ಕಡೆಗಳಲ್ಲಿ ಅರ್ಧ ಕಿಲೋಮೀಟರ್‌ವರೆಗೆ ವಾಹನಗಳು ಸಾಲುಗಟ್ಟಿ ನಿಲ್ಲುತ್ತಿದ್ದವು. ಮೈಸೂರು ರಸ್ತೆಯಲ್ಲಿ ಮಾರಿಗೋಲ್ಡ್‌ ಸ್ಕೂಲ್‌ ಕಡೆಯಿಂದ ಅರ್ಚಕರ ಬಡಾವಣೆ ಕೆಂಪೇಗೌಡ ಬಡಾವಣೆ ಭೀಮನಕೊಪ್ಪ ಮತ್ತಿತರ ಪ್ರದೇಶಗಳಿಗೆ ಹೋಗುವಾಗಲೂ ಇದೇ ಸ್ಥಿತಿಯಾಗಿತ್ತು. ಈಗ ಚಲ್ಲಘಟ್ಟ ಬಳಿ ಆರ್‌ಯುಬಿ ನಿರ್ಮಾಣವಾಗಿ ಚಾಲನೆ ದೊರೆತಿರುವುದರಿಂದ ವಾಹನಗಳು ಸಾಲುಗಟ್ಟಿ ನಿಲ್ಲುವುದು ತಪ್ಪಿದೆ. ಅಲ್ಲದೇ ರಾಮೋಹಳ್ಳಿಯಲ್ಲಿ ಕೂಡ ವಾಹನಗಳು ನಿಲ್ಲುವ ಬದಲು ಎರಡು ಕಿ.ಮೀ. ದೂರದಲ್ಲಿರುವ ಚಲ್ಲಘಟ್ಟ ಕೆಳಸೇತುವೆಯ ಮೂಲಕವೇ ಸಂಚರಿಸಲು ಅವಕಾಶ ಇರುವುದರಿಂದ ಅಲ್ಲಿಯೂ ದಟ್ಟಣೆ ತಪ್ಪಲಿದೆ. ರಾಮೋಹಳ್ಳಿಯಲ್ಲಿ ಆರ್‌ಯುಬಿ ನಿರ್ಮಿಸಲು ಶಂಕಸ್ಥಾಪನೆಯಾಗಿದ್ದು ಬೇಗ ಕಾಮಗಾರಿ ಪೂರ್ಣಗೊಳಿಸಿದರೆ ವಾಹನಗಳು ಸಾಲುಗಟ್ಟಿ ನಿಲ್ಲುವ ಪ್ರಮೇಯವೇ ಇರುವುದಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.