ADVERTISEMENT

ರೈಲ್ವೆ ಯೋಜನೆಗಳು ಶೀಘ್ರ ಪೂರ್ಣ: ಸಚಿವ ವಿ.ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 20 ಜುಲೈ 2024, 15:51 IST
Last Updated 20 ಜುಲೈ 2024, 15:51 IST
ಜನ್ಮದಿನದ ಅಂಗವಾಗಿ ಅಭಿಮಾನಿಗಳು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಚಿವ ವಿ.ಸೋಮಣ್ಣ ಮಾತನಾಡಿದರು 
ಜನ್ಮದಿನದ ಅಂಗವಾಗಿ ಅಭಿಮಾನಿಗಳು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಚಿವ ವಿ.ಸೋಮಣ್ಣ ಮಾತನಾಡಿದರು    

ಬೆಂಗಳೂರು: ‘ರಾಜ್ಯದ ರೈಲ್ವೆ ಯೋಜನೆಗಳು ಶೀಘ್ರಗತಿಯಲ್ಲಿ ಪೂರ್ಣಗೊಳಿಸಲಾಗುವುದು. ಜಲಶಕ್ತಿ ಯೋಜನೆಗಳಿಗೆ ಹೊಸ ಕಾಯಕಲ್ಪ ನೀಡಲಾಗುವುದು’ ಎಂದು ಕೇಂದ್ರ ಜಲಶಕ್ತಿ, ರೈಲ್ವೆ ಖಾತೆಯ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.

ಗೋವಿಂದರಾಜನಗರ ವಿಧಾನಸಭೆ ಕ್ಷೇತ್ರದ ಮಂಡಲ ಬಿಜೆಪಿಯಿಂದ ಹಮ್ಮಿಕೊಂಡಿದ್ದ ವಿ. ಸೋಮಣ್ಣ ಅವರ ಜನ್ಮದಿನಾಚರಣೆ, ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ ಮತ್ತು ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು–ಹಂಪಲು ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವಿ. ಸೋಮಣ್ಣ ಎಂಬ ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ ಬೆಳೆಸಿದ ನಾಡಿನ ಜನರು ಮತ್ತು ಬಿಜೆಪಿ ಮುಖಂಡರು, ಕಾರ್ಯಕರ್ತರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಶಿವಕುಮಾರ ಸ್ವಾಮೀಜಿ ಹಾಗೂ ಬಾಲಗಂಗಾಧರನಾಥ ಸ್ವಾಮೀಜಿ ಆಶೀರ್ವಾದ ಹಾಗೂ ಒಡನಾಟದಿಂದ ಕಳೆದ 45 ವರ್ಷಗಳಲ್ಲಿ ಜನಸೇವೆ ಮಾಡಲು ಸಾಧ್ಯವಾಗಿದೆ’ ಎಂದರು. 

ADVERTISEMENT

‘ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಜನರ ಪ್ರೀತಿ, ವಿಶ್ವಾಸದ ಬಲದಿಂದ 1.75 ಲಕ್ಷ ಮತಗಳ ಅಂತರದಿಂದ ಜಯಗಳಿಸಿದ್ದೇನೆ. ತುಮಕೂರು ನಗರವನ್ನು ಹೈಟೆಕ್‌ ಮಾದರಿ ಕ್ಷೇತ್ರವನ್ನಾಗಿ ಮಾಡಲಾಗುವುದು. ಬಿನ್ನಿಪೇಟೆ, ವಿಜಯನಗರ, ಗೋವಿಂದರಾಜನಗರ ಮತ್ತು ತುಮಕೂರು ಕ್ಷೇತ್ರಗಳು ನನ್ನ ಹೃದಯದಲ್ಲಿ ಇವೆ’ ಎಂದು ಹೇಳಿದರು. 

ವಿ.ಸೋಮಣ್ಣ ಅವರು ಆದಿಚುಂಚಗಿರಿ ಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ, ಸೌಮ್ಯನಾಥ ಸ್ವಾಮೀಜಿ ಅವರ ಆಶೀರ್ವಾದ ಪಡೆದರು.

ಶಾಸಕ ಸಿ.ಕೆ. ರಾಮಮೂರ್ತಿ, ಬಿಜೆಪಿ ಯುವ ಮುಖಂಡ ಡಾ. ಅರುಣ್ ಸೋಮಣ್ಣ, ಆಡಳಿತ ಪಕ್ಷದ ಮಾಜಿ ನಾಯಕ ರವೀಂದ್ರ, ಮಂಡಲ ಅಧ್ಯಕ್ಷ ವಿಶ್ವನಾಥಗೌಡ, ಬಿಬಿಎಂಪಿ ಮಾಜಿ ಸದಸ್ಯರಾದ ಮೋಹನ್ ಕುಮಾರ್, ಬಾಬಿ ವೆಂಕಟೇಶ್, ದಾಸೇಗೌಡ, ಸಿ.ಎಂ.ರಾಜಪ್ಪ, ಕನಕಪುರ ರಾಜಣ್ಣ, ಕ್ರಾಂತಿರಾಜು, ಬಿಜೆಪಿ ಮುಖಂಡರಾದ ವೇಣುಗೌಡ, ಶ್ರೀಧರ್, ಡೊಡ್ಡವೀರಯ್ಯ, ರಮೇಶ್, ಮಹಿಳಾ ಘಟಕದ ಅಧ್ಯಕ್ಷೆ ರತ್ಮಮ್ಮ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.