ADVERTISEMENT

ಕಳ್ಳಸಾಗಣೆ: ಬೆಂಗಳೂರಿನಲ್ಲಿ ಏಳು ಮಕ್ಕಳ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2021, 16:50 IST
Last Updated 23 ಫೆಬ್ರುವರಿ 2021, 16:50 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ಬೇರೆ ರಾಜ್ಯಗಳಿಂದ ಕಳ್ಳಸಾಗಣೆಯಾಗಿದ್ದ 7 ಮಕ್ಕಳನ್ನು ಬೆಂಗಳೂರು ರೈಲ್ವೆ ವಿಭಾಗದ ‘ನನ್ನೆ ಫರಿಸ್ತೇ’ ತಂಡ ರಕ್ಷಣೆ ಮಾಡಿದೆ.

ರಾಜಸ್ಥಾನದ ಬಿಲ್ವಾರದಿಂದ ಅಪಹರಿಸಲ್ಪಟ್ಟಿದ್ದ 14 ವರ್ಷದ ಬಾಲಕಿಯನ್ನು ಯಲಹಂಕ ರೈಲ್ವೆ ನಿಲ್ದಾಣದಲ್ಲಿ ಫೆ.19ರಂದು ರಕ್ಷಿಸಲಾಗಿದೆ. ಅಪಹರಿಸಿದ ತಂಡವನ್ನು ಬಂಧಿಸಲಾಗಿದೆ. ಆರೋಪಿಗಳನ್ನು ವಶಕ್ಕೆ ಪಡೆಯಲು ರಾಜಸ್ಥಾನ ಪೊಲೀಸರಿಗೆ ತಿಳಿಸಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಬಾಲ ಕಾರ್ಮಿಕ ಪದ್ಧತಿಗೆ ದೂಡಲ್ಪಟ್ಟಿದ್ದ ಬಿಹಾರದ ನಾಲ್ಕು ಮಕ್ಕಳು ಫೆ.19ರಂದು ತಪ್ಪಿಸಿಕೊಂಡು ಬಂದು ಕೆಎಸ್‌ಆರ್‌ ರೈಲು ನಿಲ್ದಾಣದಲ್ಲಿದ್ದರು. ಅವರ ಜೊತೆಗೆ ಕಳ್ಳಸಾಗಣೆ ಮಾಡಲು ಬಳಕೆಯಾಗಿದ್ದ ತ್ರಿಪುರದ ಮತ್ತೊಬ್ಬ ಬಾಲಕನ್ನೂ ರಕ್ಷಿಸಲಾಗಿದೆ ಎಂದು ವಿವರಿಸಿದೆ.

ADVERTISEMENT

ಮತ್ತೊಬ್ಬ ಬಾಲಕನನ್ನು ಮದ್ದೂರಿನಲ್ಲಿ ಮರದ ಉದ್ಯಮದಲ್ಲಿ ಕೆಲಸಕ್ಕೆ ದೂಡಲಾಗಿತ್ತು. ಆತ ಕೂಡ ಫೆ.22ರಂದು ತಪ್ಪಿಸಿಕೊಂಡು ಬಂದು ಕೆಎಸ್‌ಆರ್ ರೈಲು ನಿಲ್ದಾಣದಲ್ಲಿದ್ದಾಗ ವಶಕ್ಕೆ ಪಡೆಯಲಾಗಿದೆ. ಎಲ್ಲ ಏಳು ಮಕ್ಕಳನ್ನು ನಿಗದಿಪಡಿಸಿದ ಎನ್‌ಜಿಒಗೆ ಒಪ್ಪಿಸಲಾಗಿದೆ ಎಂದು ಹೇಳಿದೆ.

2017ರಿಂದ ಈವರೆಗೆ ಕಳ್ಳ ಸಾಗಣೆಯಾಗುತ್ತಿದ್ದ 2,927 ಮಕ್ಕಳನ್ನು ನೈರುತ್ಯ ರೈಲ್ವೆಯ ವಿವಿಧ ನಿಲ್ದಾಣಗಳಲ್ಲಿ ರಕ್ಷಿಸಲಾಗಿದೆ ಎಂದೂ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.