ADVERTISEMENT

ಗುಡುಗು–ಸಿಡಿಲಿನ ಆರ್ಭಟ: ಚುನಾವಣಾ ಕಾವಿಗೆ ತಂಪೆರೆದ ಮಳೆ

ಹೊಳೆಯ ಸ್ವರೂಪ ತಾಳಿದ ರಸ್ತೆಗಳು; ಧರೆಗುರುಳಿದ 20 ಮರಗಳು

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2019, 20:15 IST
Last Updated 17 ಏಪ್ರಿಲ್ 2019, 20:15 IST
ನಗರದಲ್ಲಿ ಬುಧವಾರ ಸಂಜೆ ಸುರಿದ ಮಳೆಯಲ್ಲಿ ಬಾಲಕರಿಬ್ಬರು ಸೈಕಲ್‌ ಸವಾರಿಯಲ್ಲಿ ತೊಡಗಿದ್ದರು –ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್ ಪಿ.ಎಸ್.
ನಗರದಲ್ಲಿ ಬುಧವಾರ ಸಂಜೆ ಸುರಿದ ಮಳೆಯಲ್ಲಿ ಬಾಲಕರಿಬ್ಬರು ಸೈಕಲ್‌ ಸವಾರಿಯಲ್ಲಿ ತೊಡಗಿದ್ದರು –ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್ ಪಿ.ಎಸ್.   

ಬೆಂಗಳೂರು: ಚುನಾವಣಾ ಚಟುವಟಿಕೆಗಳಿಂದಾಗಿ ಕಳೆದ ಎರಡು ತಿಂಗಳಿನಿಂದ ಕಾವೇರಿಸಿಕೊಂಡಿದ್ದ ನಗರದಲ್ಲಿ ಮತದಾನದ ಮುನ್ನಾ ದಿನವಾದ ಬುಧವಾರ ಸುರಿದ ಮಳೆ ತಂಪೆರೆಯಿತು. ಆದರೆ, ಮಳೆ ಗಾಳಿಗೆ 20ಕ್ಕೂ ಹೆಚ್ಚು ಮರಗಳು ಧರೆಗುರುಳಿದ್ದಲ್ಲದೆ, ಒಂದು ಜೀವವನ್ನೂ ಬಲಿ ಪಡೆದಿದ್ದರಿಂದ ತಾಪಮಾನ ತಗ್ಗಿದ ಸಂಭ್ರಮ ಕುಗ್ಗುವಂತಾಯಿತು.

ನಗರದ ಪೂರ್ವ ಭಾಗದಲ್ಲೇ ಮಳೆಯ ಆರ್ಭಟ ಹೆಚ್ಚಾಗಿತ್ತು. ಗುಡುಗು ಸಹಿತ ಆಲಿಕಲ್ಲು ಮಳೆ ಸುರಿಯಿತು. ಮನೆಯ ಅಂಗಳದಲ್ಲಿ ಬಿದ್ದ ಆಲಿಕಲ್ಲು ಆಯ್ದುಕೊಳ್ಳಲು ಜನ ಪೈಪೋಟಿ ನಡೆಸಿದರು. ಮುಂಗಾರು ಪೂರ್ವ ಮಳೆಯಿಂದ ವಾಹನ ಸವಾರರು ಹಾಗೂ ತಗ್ಗು ಪ್ರದೇಶದ ನಿವಾಸಿಗಳು ಸಂಕಷ್ಟ ಅನುಭವಿಸಿದರು. ಚುನಾವಣೆ ಸಿದ್ಧತೆಗೂ ಮಳೆಯಿಂದ ಅಡಚಣೆ ಉಂಟಾಯಿತು.

ನಾಗವಾರದ ಬಳಿ ಹೊರವರ್ತುಲ ರಸ್ತೆಯಲ್ಲಿ ಮಳೆ ನೀರು ಹೊಳೆಯಂತೆ ಹರಿಯಿತು –ಪ್ರಜಾವಾಣಿ ಚಿತ್ರ: ಜನಾರ್ದನ ಬಿ.ಕೆ.​

ಮಧ್ಯಾಹ್ನ ನಗರದಲ್ಲಿ ಮೋಡ ಕವಿದ ವಾತಾವರಣ ಇತ್ತು. ತಾಪಮಾನವೂ ಹೆಚ್ಚಾಗಿತ್ತು. ಸಂಜೆ ಧಾರಾಕಾರ ಮಳೆ ಸುರಿಯಿತು. ಗಾಳಿ ಸಹಿತ ಸುರಿದ ಮಳೆ ಮರಗಳೂ ಬುಡಮೇಲು ಆಗುವಂತೆ ಮಾಡಿತು. ನಾಗವಾರದ ಬಳಿ ಹೊರವರ್ತುಲ ರಸ್ತೆಯಂತೂ ಮಳೆನೀರಿನ ಪ್ರವಾಹದಿಂದ ನದಿಯಂತಾಗಿತ್ತು.

ADVERTISEMENT

ಬಾಣಸವಾಡಿ, ಕಮ್ಮನಹಳ್ಳಿ, ರಾಮಮೂರ್ತಿನಗರ, ಎಚ್‌ಬಿಆರ್‌ ಬಡಾವಣೆ, ಆರ್.ಟಿ.ನಗರ, ಪುಲಕೇಶಿನಗರ ಕಾಚರಕನಹಳ್ಳಿ ಲುಂಬಿನಿ ಗಾರ್ಡನ್‌ಗಳಲ್ಲಿ ಮಳೆಯ ಆರ್ಭಟ ಜೋರಾಗಿದ್ದರಿಂದ ರಸ್ತೆಗಳ ಮೇಲೆ ಮಳೆ ನೀರಿನ ಹೊಳೆ ಹರಿಯಿತು. ದಟ್ಟಣೆ ಉಂಟಾಗಿಸವಾರರು ಪರದಾಡಬೇಕಾಯಿತು.

ಮೊಣಕಾಲುದ್ದ ನಿಂತ ನೀರಿನಲ್ಲಿ ವಾಹನಗಳನ್ನು ತಳ್ಳಿಕೊಂಡು ಹೋಗಲು ಸವಾರರು ಪ್ರಯತ್ನಿಸುತ್ತಿದ್ದರು. ಕೆಲ ಸವಾರರು ತಮ್ಮ ವಾಹನಗಳನ್ನು ನೀರಿನಲ್ಲಿಯೇ ಬಿಟ್ಟು ರಸ್ತೆ ಬದಿಯ ಅಂಗಡಿ ಹಾಗೂ ಮನೆಗಳ ಮುಂದೆ ಆಶ್ರಯ ಪಡೆದರು.

ಆನಂದನಗರ, ಎಂಎಲ್‌ಎ ಬಡಾವಣೆ, ಗುಡ್ಡದಹಳ್ಳಿ, ಕಮ್ಮನಹಳ್ಳಿ, ಚಿನ್ನಸ್ವಾಮಿ ಕ್ರೀಡಾಂಗಣ, ಆರ್‌.ಟಿ.ನಗರ, ಬನ್ನೇರುಘಟ್ಟ ರಸ್ತೆ, ಶಾಂಪುರ ಮುಖ್ಯರಸ್ತೆ, ಗಂಗಾನಗರ, ಲುಂಬಿನಿ ಗಾರ್ಡನ್‌, ಜಯನಗರ, ಕೆ.ಆರ್‌.ಪುರ, ನೃಪತುಂಗರಸ್ತೆ ಹಾಗೂ ಜಯಮಹಲ್‌ ಬಳಿ ಮರಗಳು ಬುಡಮೇಲಾದವು. ರಸ್ತೆಗೆ ಅಡ್ಡಲಾಗಿ ಮರಗಳು ಬಿದ್ದಿದ್ದರಿಂದ ವಾಹನ ದಟ್ಟಣೆ ಉಂಟಾಗಿ, ಸವಾರರು ಪರದಾಡಿದರು.

ಮೊದಲ ಮಳೆ – ನಗರದ ಗರುಡಾ ಮಾಲ್ ಮುಂಭಾಗದ ರಸ್ತೆಯಲ್ಲಿ ಸುರಿಯುತ್ತಿರುವ ವರ್ಷದ ಮೊದಲ ಮಳೆಯಲ್ಲಿ ಜನರ ಚಟುವಟಿಕೆ –ಪ್ರಜಾವಾಣಿ ಚಿತ್ರ / ಸತೀಶ್ ಬಡಿಗೇರ

ರಸ್ತೆಗೆ ಬಂದ ಚರಂಡಿ ನೀರು
ನಗರದ ಕಾಚರಕನಹಳ್ಳಿ, ಆರ್‌.ಟಿ.ನಗರ ಸೇರಿದಂತೆ ವಿವಿಧ ಭಾಗಗಳಲ್ಲಿ ಚರಂಡಿಗಳು ತುಂಬಿದ್ದರಿಂದ ಕೊಳಚೆ ನೀರು ಮಳೆ ನೀರಿನ ಜೊತೆ ಸೇರಿ ರಸ್ತೆಯ ಮೇಲೆ ಹರಿಯಿತು.

ಹೆಬ್ಬಾಳದ ಆನಂದನಗರ ಹಾಗೂ ಎಂ.ಎಸ್‌.ರಾಮಯ್ಯ ಆಸ್ಪತ್ರೆಯ ಮುಂದೆ ವಿದ್ಯುತ್‌ ಕಂಬಗಳು ನೆಲಕ್ಕುರಳಿದವು. ತಕ್ಷಣ ವಿದ್ಯುತ್‌ ಕಡಿತಗೊಳಿಸಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಆದರೆ, ವಾಹನ ದಟ್ಟಣೆಯಿಂದ ರಸ್ತೆ ಗಿಜಿಗುಟ್ಟಿತು.

ಮನೆಗಳಿಗೆ ನುಗ್ಗಿದ ನೀರು
ಮಳೆಯಿಂದ ಎಚ್‌ಬಿಆರ್ ಬಡಾವಣೆ ಹಾಗೂ ನಾಗರಬಾವಿಯಅಂಬೇಡ್ಕರ್‌ ಕಾಲೇಜು ಬಳಿ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿತು. ಕೆಲವು ಅಪಾರ್ಟ್‌ಮೆಂಟ್‌ಗಳ ನೆಲ ಮಹಡಿಯಲ್ಲಿನ ವಾಹನ ನಿಲುಗಡೆ ಜಾಗದಲ್ಲಿ ನೀರು ನಿಂತು ಬೈಕ್‌ ಹಾಗೂ ಕಾರುಗಳು ಮುಳುಗುವಂತಾಯಿತು. ಅಲ್ಲಿಯ ನಿವಾಸಿಗಳು ನೀರನ್ನು ಹೊರಹಾಕಲು ಪರದಾಡಿದರು.

ಸುರಿಯುತ್ತಿದ್ದ ಮಳೆಯಲ್ಲೇ ಚುನಾವಣಾ ಸಿಬ್ಬಂದಿ ಸಲಕರಣೆಗಳೊಂದಿಗೆ ಮತಗಟ್ಟೆ ಕಡೆಗೆ ಹೊರಟರು –ಪ್ರಜಾವಾಣಿ ಚಿತ್ರ: ಬಿ.ಎಚ್‌. ಶಿವಕುಮಾರ್‌

ಇನ್ನೂ ಮೂರುದಿನ ಮಳೆ ಸಾಧ್ಯತೆ
‘ಮಧ್ಯೆ ಮಹಾರಾಷ್ಟ್ರದಿಂದ ಕನ್ಯಾಕುಮಾರಿಯವರೆಗೆ ಟ್ರಫ್‌ (ಮೋಡಗಳ ಸಾಲು) ಚಾಚಿಕೊಂಡಿದೆ. ಅದು ರಾಜ್ಯದಲ್ಲೂ ಹಾದು ಹೋಗಿರುವುದರಿಂದ ಮುಂದಿನ ಎರಡು ಮೂರು ದಿನ ರಾಜ್ಯದದಕ್ಷಿಣ ಒಳನಾಡಿನಲ್ಲಿ ಮಳೆಯಾಗುವ ಸಾಧ್ಯತೆ ಇದೆ’ ಎಂದುರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕಶ್ರೀನಿವಾಸ್ ರೆಡ್ಡಿ ತಿಳಿಸಿದರು.

ನಗರದಲ್ಲಿ ಸುರಿದ ಮಳೆ ವಿವರ

ಪ್ರದೇಶ

ಮಳೆಯ ಪ್ರಮಾಣ(ಮಿ.ಮೀಗಳಲ್ಲಿ)

ಬಾಣಸವಾಡಿ

132

ಕಮ್ಮನಹಳ್ಳಿ

68

ರಾಮಮೂರ್ತಿನಗರ

102

ಕೆ.ಆರ್.ಪುರ

60

ನಾಗೇನಹಳ್ಳಿ

62

ಕುಶಾಲ್‌ ನಗರ

138

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.