ADVERTISEMENT

ರಾಜ್ಯದ ವಿವಿಧೆಡೆ ಉತ್ತಮ ಮಳೆ | ಗಾಳಿಗೆ ಉರುಳಿದ ಪಪ್ಪಾಯ, ಬಾಳೆಗಿಡ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2020, 19:59 IST
Last Updated 26 ಏಪ್ರಿಲ್ 2020, 19:59 IST
ಪಾಂಡವಪುರ ತಾಲ್ಲೂಕಿನ ಮಾರ್ಮಳ್ಳಿ ಗ್ರಾಮದ ರೈತ ಪುಟ್ಟೇಗೌಡ ಅವರ ತೋಟದಲ್ಲಿದ್ದ ಬಾಳೆ ಬೆಳೆ ನಾಶವಾಗಿದೆ
ಪಾಂಡವಪುರ ತಾಲ್ಲೂಕಿನ ಮಾರ್ಮಳ್ಳಿ ಗ್ರಾಮದ ರೈತ ಪುಟ್ಟೇಗೌಡ ಅವರ ತೋಟದಲ್ಲಿದ್ದ ಬಾಳೆ ಬೆಳೆ ನಾಶವಾಗಿದೆ   

ಬೆಂಗಳೂರು: ಮಲೆನಾಡು, ಕರಾವಳಿ ಭಾಗದ ಜಿಲ್ಲೆಗಳಲ್ಲಿ ಭಾನುವಾರ ಹಾಗೂ ಮೈಸೂರು ಭಾಗದ ಜಿಲ್ಲೆಗಳಲ್ಲಿ ಶನಿವಾರ ರಾತ್ರಿ ಉತ್ತಮ ಮಳೆಯಾಗಿದೆ.

ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕು ಮಾರ್ಮಳ್ಳಿಯಲ್ಲಿ ಮಳೆಗೆ ಬಾಳೆ, ಪಪ್ಪಾಯ ಗಿಡಗಳು ಉರುಳಿವೆ.ಮಾರ್ಮಳ್ಳಿಯಲ್ಲಿ ಎಂ.ಕೆ.ಪುಟ್ಟೇಗೌಡ, ಎಂ.ಕೆ.ದೇವರಾಜು, ಲಕ್ಷ್ಮಿದೇವಿ ಅವರ ಜಮೀನಿನಲ್ಲಿದ್ದ ಬಾಳೆ, ಪಪ್ಪಾಯಿ ಬೆಳೆ ನಾಶವಾಗಿವೆ.

ಕೊಡಗು ಜಿಲ್ಲೆಯ ಮಡಿಕೇರಿ, ನಾಪೋಕ್ಲು ಸೇರಿ ವಿವಿಧೆಡೆ ಭಾನುವಾರ ಗುಡುಗು ಸಹಿತ ಮಳೆಯಾಗಿದೆ. ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕು ಹಾಗೂ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನಲ್ಲಿ ಶನಿವಾರ ರಾತ್ರಿ ಮಳೆಯಾಗಿದೆ. ಹಳೇಬೀಡು ಬಳಿ ಕರಿಕಟ್ಟೆಹಳ್ಳಿಯಲ್ಲಿ 12 ಪಾಲಿಹೌಸ್‌ಗಳು ಗಾಳಿಗೆ ನೆಲಕಚ್ಚಿವೆ.

ADVERTISEMENT

ಮಲೆನಾಡು, ಕರಾವಳಿಯಲ್ಲಿ ಮಳೆ: ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಪ್ರದೇಶ ಹಾಗೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಕೆಲವೆಡೆ ಭಾನುವಾರ ಸಂಜೆ ಮಳೆಯಾಗಿದೆ.

ಮೂಡಿಗೆರೆ ತಾಲ್ಲೂಕಿನಲ್ಲಿ ಆಲಿಕಲ್ಲು ಸಹಿತ ಮಳೆ ಸುರಿಯಿತು. ತತ್ಕೊಳ ರಸ್ತೆಯ ಅರಣ್ಯ ಪ್ರದೇಶ ಮತ್ತು ರಾಷ್ಟ್ರೀಯ ಹೆದ್ದಾರಿ 234ರ ಮುದ್ರೆಮನೆ ಬಳಿ ರಸ್ತೆ ಬದಿಯಲ್ಲಿ ಮರ ಬಿದ್ದು ಸಂಚಾರ ವ್ಯತ್ಯಯವಾಗಿತ್ತು.

ಮಂಗಳೂರು ನಗರ, ಧರ್ಮಸ್ಥಳ ಸೇರಿ ಹಲವೆಡೆ ಜಡಿ ಮಳೆಯಾಗಿದೆ.

ದಕ್ಷಿಣ ಒಳನಾಡಿನಲ್ಲಿ ಇಂದು ಮಳೆ?
ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಇದೇ 27ರಂದು ಗುಡುಗು, ಸಿಡಿಲು ಹಾಗೂ ವೇಗವಾದ ಗಾಳಿ ಸಹಿತ ಭಾರಿ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರಾವಳಿಯಲ್ಲಿ ಗಂಟೆಗೆ 25ರಿಂದ 30 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ದಕ್ಷಿಣ ಒಳನಾಡಿನ ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಸೋಮವಾರದವರೆಗೆ 'ಯೆಲ್ಲೊ ಅಲರ್ಟ್' ಘೋಷಿಸಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ಭಾನುವಾರ ಗರಿಷ್ಠ 7 ಸೆಂ.ಮೀ ಮಳೆಯಾಗಿದೆ. ಅರಕಲಗೂಡು, ಆಲೂರು 3, ಹೊಸಕೋಟೆ, ಹೊಳೆನರಸೀಪುರ, ಕೋಣನೂರು, ಬಂಗಾರಪೇಟೆ ಹಾಗೂ ಶಿಡ್ಲಘಟ್ಟದಲ್ಲಿ ತಲಾ 1 ಸೆಂ.ಮೀ.ಮಳೆಯಾಗಿದೆ. ಕಲಬುರ್ಗಿ, ರಾಯಚೂರಿನಲ್ಲಿ 41 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.