ADVERTISEMENT

ಬೆಂಗಳೂರಿನಲ್ಲಿ ವರುಣನ ಆರ್ಭಟ: ಮನೆ, ರಸ್ತೆಗಳು ಜಲಾವೃತ

ಕೆಂಗೇರಿ, ಆರ್‌.ಆರ್‌. ನಗರದಲ್ಲಿ ಹೆಚ್ಚು ಮಳೆ l ಬಿಬಿಎಂಪಿ, ಪೊಲೀಸರು, ಎನ್‌ಡಿಆರ್‌ಎಫ್‌ ತಂಡದಿಂದ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2020, 21:23 IST
Last Updated 23 ಅಕ್ಟೋಬರ್ 2020, 21:23 IST
ಬೆಂಗಳೂರಿನಲ್ಲಿ ಶುಕ್ರವಾರ ಸಂಜೆ ಸುರಿದ ಮಳೆಗೆ ಹೊರ ವರ್ತುಲ ರಸ್ತೆಯ ಕಾಮಾಕ್ಯದಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆಯಾಯಿತು – ಪ್ರಜಾವಾಣಿ ಚಿತ್ರ
ಬೆಂಗಳೂರಿನಲ್ಲಿ ಶುಕ್ರವಾರ ಸಂಜೆ ಸುರಿದ ಮಳೆಗೆ ಹೊರ ವರ್ತುಲ ರಸ್ತೆಯ ಕಾಮಾಕ್ಯದಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆಯಾಯಿತು – ಪ್ರಜಾವಾಣಿ ಚಿತ್ರ   

ಬೆಂಗಳೂರು: ನಗರದ ದಕ್ಷಿಣ ಭಾಗದ ಪ್ರದೇಶಗಳಲ್ಲಿ ಶುಕ್ರವಾರ ಜೋರು ಮಳೆಯಾಗಿ, ರಾಜಕಾಲುವೆಗಳು ತುಂಬಿ ಹರಿದವು. ಹಲವು ಮನೆಗಳಿಗೆ ನೀರು ನುಗ್ಗಿ, ಕೆಲ ಪ್ರದೇಶಗಳ ರಸ್ತೆಗಳಲ್ಲಿ 4 ಅಡಿಯಷ್ಟು ನೀರು ರಭಸವಾಗಿ ಹರಿಯಿತು.

ಬೆಳಿಗ್ಗೆಯಿಂದಲೇ ನಗರದಲ್ಲಿ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನ ಹಲವೆಡೆ ಜಿಟಿ ಜಿಟಿಯಾಗಿ ಆರಂಭವಾದ ಮಳೆ, ಏಕಾಏಕಿ ಜೋರಾಗಿ ಸುರಿಯಿತು. ಸಂಜೆಯಾಗುತ್ತಿದ್ದಂತೆ ವರುಣ ಆರ್ಭಟ ಹೆಚ್ಚಾಗಿ, ದಕ್ಷಿಣ ಭಾಗದ ಬಹುತೇಕ ಪ್ರದೇಶಗಳು ನೀರಿನಿಂದ ಆವೃತ್ತಗೊಂಡವು.

ಹೊಸಕೆರೆಹಳ್ಳಿಯ ದತ್ತಾತ್ರೇಯ ದೇವಸ್ಥಾನ ಹಿಂಭಾಗಕ್ಕೆ ಹೊಂದಿಕೊಂಡಿರುವ ರಾಜಕಾಲುವೆಗೆ ತಡೆಗೋಡೆ ನಿರ್ಮಿಸುವ ಕೆಲಸ ನಡೆದಿದೆ. ಇತ್ತೀಚೆಗೆ ಕಾಲುವೆಯ ಒಂದು ಭಾಗದಲ್ಲಿ ತಡೆಗೋಡೆ ಕುಸಿದು ಬಿದ್ದಿತ್ತು. ಜೊತೆಗೆ ಹೂಳು ತುಂಬಿಕೊಂಡಿತ್ತು. ಶುಕ್ರವಾರ ಸುರಿದ ಮಳೆಯ ನೀರು ಸರಾಗವಾಗಿ ಹರಿದುಹೋಗಲಿಲ್ಲ.

ADVERTISEMENT

ಕಾಲುವೆಯಲ್ಲಿ ತುಂಬಿದ ನೀರು, ಅಕ್ಕ–ಪಕ್ಕದ ಪ್ರದೇಶಗಳಿಗೆ ನುಗ್ಗಿತು. ದತ್ತಾತ್ರೇಯ ದೇವಸ್ಥಾನ ರಸ್ತೆ, ಗುರುದತ್ತ ಲೇಔಟ್ ಕೆಲ ಭಾಗ ಹಾಗೂ ಸುತ್ತಮುತ್ತಲ ಕೆಲ ಪ್ರದೇಶದಲ್ಲಿ ಮನೆಗಳಿಗೆ ನೀರು ನುಗ್ಗಿತ್ತು. ರಸ್ತೆಯಲ್ಲಿ 4 ಅಡಿಯಷ್ಟು ನೀರು ಹರಿದು, ಕಾರುಗಳು ತೇಲುತ್ತಿದ್ದ ದೃಶ್ಯಗಳು ಕಂಡುಬಂದವು.

ರಾಜಕಾಲುವೆ ಸಮೀಪವೇ ಎರಡು ಅಪಾರ್ಟ್‌ಮೆಂಟ್ ಸಮುಚ್ಚಯಗಳು ಇವೆ. ಅದರ ಆವರಣಕ್ಕೂ ನೀರು ನುಗ್ಗಿತ್ತು. ಪಾರ್ಕಿಂಗ್ ಜಾಗದಲ್ಲಿ ನೀರು ತುಂಬಿಕೊಂಡು, ಅದರಲ್ಲೇ ವಾಹನಗಳು ನಿಂತಿದ್ದವು.

ಮಳೆ ಆರ್ಭಟದೊಂದಿಗೆ ಕಾಲುವೆ ಕೊಳಚೆ ಸಹಿತವಾಗಿ ನೀರು ಮನೆಗಳಿಗೆ ರಭಸದಿಂದ ನುಗ್ಗಿತು. ಸ್ಥಳೀಯ ನಿವಾಸಿಗಳು ತೊಂದರೆಗೆ ಸಿಲುಕಿದರು. ಮನೆಯಲ್ಲಿ ಮೂರು–ನಾಲ್ಕು ಅಡಿಯಷ್ಟು ನೀರು ನಿಂತಿತ್ತು. ಪೀಠೋಪಕರಣಗಳು ಹಾಗೂ ಎಲೆಕ್ಟ್ರಾನಿಕ್ ವಸ್ತುಗಳು ಸಹ ನೀರಿನಲ್ಲೇ ಇದ್ದವು. ಮನೆಯೊಳಗಿನ ನೀರನ್ನು ಹೊರಹಾಕುವುದರಲ್ಲೇ ನಿವಾಸಿಗಳು ರಾತ್ರಿ ಕಳೆದರು.

ಬಿಬಿಎಂಪಿ, ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಕಾರ್ಯಾಚರಣೆ ಆರಂಭಿಸಿದರು. ನೀರು ಹರಿದುಹೋಗಲು ಹಾಗೂ ಮನೆಗಳಿಗೆ ನುಗ್ಗಿದ್ದ ನೀರನ್ನು ಹೊರಹಾಕಲು ಪ್ರಯತ್ನಿಸಿದರು. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡವನ್ನು (ಎನ್‌ಡಿಆರ್‌ಎಫ್‌) ಸಹ ರಾತ್ರಿ ಸ್ಥಳಕ್ಕೆ ಕರೆಸಲಾಯಿತು.

‘ನೀರಿನಲ್ಲಿ ಯಾರೊಬ್ಬರೂ ಸಿಲುಕಿಲ್ಲ. ಮುಂಜಾಗ್ರತಾ ಕ್ರಮವಾಗಿ ಎನ್‌ಡಿಆರ್‌ಎಫ್‌ ಕರೆಸಲಾಗಿತ್ತು. ಕಾಲುವೆ ನೀರು ಹರಿದು ಹೋಗಲು ಜಾಗ ಮಾಡಲಾಗಿದೆ. ಹೊಸಕೆರೆಹಳ್ಳಿ ಬಳಿಯ ಕೆಲ ಪ್ರದೇಶದಲ್ಲಿ ನಿಂತಿದ್ದ ನೀರು ಕಡಿಮೆ ಆಗಿದೆ. ನಮ್ಮ ತಂಡ ರಾತ್ರಿಯೇ ವಾಪಸು ಬಂದಿದೆ’ ಎಂದು ಎನ್‌ಡಿಆರ್‌ಎಫ್‌ ಸಹಾಯಕ ಕಮಾಂಡೆಂಟ್ ಕೆ.ಎಸ್. ಸುಬೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ಕಾಂಪೌಂಡ್ ಕುಸಿತ: ಬಸವನಗುಡಿ ಬಳಿಯ ಗವಿಗಂಗಾಧರೇಶ್ವರ ದೇವಸ್ಥಾನದ ಪಶ್ಚಿಮದ ಕಾಂಪೌಂಡ್ ಕುಸಿದಿದೆ. ಮಳೆ ಸುರಿಯುವ ವೇಳೆಯಲ್ಲೇ ಈ ಘಟನೆ ನಡೆದಿದ್ದು, ಹೆಚ್ಚಿನ ಹಾನಿಯಾಗಿಲ್ಲವೆಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ವಿ.ವಿ. ಪುರ ಬಳಿ ರಸ್ತೆಯಲ್ಲಿ ನಾಲ್ಕು ಅಡಿಯಷ್ಟು ನೀರು ಹರಿಯಿತು. ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ವಾಹನಗಳು ನೀರಿನಲ್ಲಿ ಮುಳುಗಿದ್ದು ಕಂಡುಬಂತು. ಈ ಭಾಗದಲ್ಲಿ ರಾಜಕಾಲುವೆ ತುಂಬಿ ಹರಿಯಿತು.

ಬಸವನಗುಡಿ ಗಾಂಧಿ ಬಜಾರ್‌ನಲ್ಲಿ ಜೋರು ಮಳೆಯಾಗಿ ಕೆಳಸೇತುವೆಯಲ್ಲಿ ನೀರು ನಿಂತುಕೊಂಡಿತ್ತು. ಕೋರಮಂಗಲದ 100 ಅಡಿ ರಸ್ತೆಯಲ್ಲೂ ಭರ್ತಿ ನೀರು ತುಂಬಿತ್ತು.

ಕೆಂಗೇರಿ, ರಾಜರಾಜೇಶ್ವರಿನಗರ, ವಿದ್ಯಾಪೀಠ, ಉತ್ತರಹಳ್ಳಿ, ಕೋಣನಕುಂಟೆ, ಕುಮಾರಸ್ವಾಮಿ ಲೇಔಟ್, ಸಾರಕ್ಕಿ, ಲಕ್ಕಸಂದ್ರ, ದೊರೆಸಾನಿಪಾಳ್ಯ, ಅರಕೆರೆ, ಶಾಂತಿನಗರ, ಪಟ್ಟಾಭಿರಾಮನಗರ, ದೊಡ್ಡಕಮ್ಮನಹಳ್ಳಿ, ಲಾಲ್‌ಬಾಗ್ ರಸ್ತೆ ಹಾಗೂ ನಾಯಂಡನಹಳ್ಳಿ ಸೇರಿದಂತೆ ಹಲವೆಡೆ ಮಳೆ ಆರ್ಭಟವಿತ್ತು. ರಾಜಕಾಲುವೆ ಹಾದು ಹೋಗಿರುವ ಅಕ್ಕ–ಪಕ್ಕದ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದಿದ್ದು ಕಂಡುಬಂತು.

ರಾಜಾಜಿನಗರ, ವಿಜಯನಗರ, ಯಶವಂತಪುರ, ಪೀಣ್ಯ, ಶಾಂತಿನಗರ, ಮೆಜೆಸ್ಟಿಕ್, ಗಾಂಧಿನಗರ, ಆರ್.ಟಿ.ನಗರ, ಹೆಬ್ಬಾಳ, ಮಡಿವಾಳ, ಕೆಂಗೇರಿ ಹಾಗೂ ಸುತ್ತಮುತ್ತಲೂ ಮಳೆ ಇತ್ತು. ಶಿವಾನಂದ ವೃತ್ತ, ಮೆಜೆಸ್ಟಿಕ್‌ ಬಳಿಯ ಕೆಳ ಸೇತುವೆಗಳಲ್ಲಿ ನೀರು ಹರಿಯಿತು, ನೀರಿನಲ್ಲಿ ವಾಹನಗಳು ಸಂಚರಿಸಿದವು. ಕೆಲ ವಾಹನಗಳು ಕೆಟ್ಟು ನಿಂತವು. ಈ ರಸ್ತೆಯಲ್ಲಿ ವಾಹನಗಳ ಓಡಾಟ ನಿಧಾನಗತಿಯಲ್ಲಿ ಇದ್ದಿದ್ದರಿಂದ ಸಂಚಾರ ದಟ್ಟಣೆ ಕಂಡುಬಂತು.

ರಾಜರಾಜೇಶ್ವರಿನಗರದ ಕಾಫಿ ಕಟ್ಟೆ ಹಿಂಭಾಗದಲ್ಲಿರುವ 8 ಮನೆಗಳಿಗೆ ನೀರು ನುಗ್ಗಿತ್ತು. ಸಹಾಯವಾಣಿಗೆ ದೂರುಗಳು ಬರುತ್ತಿದ್ದಂತೆ ಬಿಬಿಎಂಪಿ ಸಿಬ್ಬಂದಿ ಸ್ಥಳಕ್ಕೆ ಹೋಗಿ, ಕಾರ್ಯಾಚರಣೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.