ADVERTISEMENT

ಎಲ್ಲೆಲ್ಲೂ ನೀರು; ಜೋಪಡಿಯೊಳಗೆ ಕಣ್ಣೀರು

ವಲಸೆ ಕಾರ್ಮಿಕರ ಬದುಕು ಬೀದಿಗೆ: ನಿದ್ರೆಯೂ ಇಲ್ಲ, ಊಟವೂ ಇಲ್ಲ

ವಿಜಯಕುಮಾರ್ ಎಸ್.ಕೆ.
Published 6 ಸೆಪ್ಟೆಂಬರ್ 2022, 22:00 IST
Last Updated 6 ಸೆಪ್ಟೆಂಬರ್ 2022, 22:00 IST
ನೀರು ತುಂಬಿದ ಜೊಪಡಿಯ ಮುಂದೆ ಮಕ್ಕಳು
ನೀರು ತುಂಬಿದ ಜೊಪಡಿಯ ಮುಂದೆ ಮಕ್ಕಳು   

ಬೆಂಗಳೂರು: ‘ದಿನವೂ ಮಳೆ ನೀರು ಜೋಪಡಿ ತುಂಬುತ್ತಿದೆ, ನೆಮ್ಮದಿಯಿಂದ ನಿದ್ರೆ ಮಾಡಿ ವಾರಗಳೇ ಕಳೆದಿದೆ, ಊಟಕ್ಕೂ ಗತಿ ಇಲ್ಲ, ನೆರವಿನ ಹಸ್ತ ಚಾಚುವವರೇ ಇಲ್ಲ...’ ಇದು ವೈಟ್‌ಫೀಲ್ಡ್ ಮುಖ್ಯ ರಸ್ತೆಯಲ್ಲಿ ಬಿಇಎಂಎಲ್‌ ಲೇಔಟ್‌ನಲ್ಲಿರುವ ವಲಸೆ ಕಾರ್ಮಿಕರ ಗೋಳು.

ಈ ಲೇಔಟ್‌ನ ಖಾಲಿ ಜಾಗವೊಂದರಲ್ಲಿ ರಾಯಚೂರು ಜಿಲ್ಲೆಯ ವಲಸೆ ಕಾರ್ಮಿಕರ 100ಕ್ಕೂ ಹೆಚ್ಚು ಜೋಪಡಿಗಳಿವೆ. ಬಿಬಿಎಂಪಿ ಕಸ ನಿರ್ವಹಣೆ ಕೆಲಸ ಮಾಡುವ ಕಾರ್ಮಿಕರು, ಕುಟುಂಬ ಸಮೇತ ನೆಲೆಸಿದ್ದಾರೆ. ನಿರಂತರವಾಗಿ ಸುರಿಯುತ್ತಿರುವ ಮಳೆ ಇವರ ನೆಮ್ಮದಿ ಹಾಳು ಮಾಡಿದೆ.

‘ಸುತ್ತಲೂ ಅಪಾರ್ಟ್‌ಮೆಂಟ್ ಸಮುಚ್ಚಯ ಮತ್ತು ಐ.ಟಿ ಕಂಪನಿಗಳ ಕಟ್ಟಡಗಳಿವೆ. ಈ ಕಟ್ಟಡಗಳ ಆವರಣ, ನೆಲ ಮಹಡಿಗಳಿಗೆ ತುಂಬಿಕೊಳ್ಳುವ ನೀರನ್ನು ನಾಲ್ಕೈದು ಮೋಟರ್‌ಗಳ ಮೂಲಕ ಹೊರಹಾಕುತ್ತಾರೆ. ಆ ನೀರು ನಮ್ಮ ಜೋಪಡಿಗಳನ್ನು
ತುಂಬಿಕೊಳ್ಳುತ್ತಿದೆ’ ಎಂದು ವಲಸೆ ಕಾರ್ಮಿಕ ಭೀಮೇಶ್ ಹೇಳುತ್ತಾರೆ.

ADVERTISEMENT

‘ಜೋಪಡಿಗಳನ್ನು ನಿರ್ಮಿಸಿಕೊಂಡು ಹಲವು ವರ್ಷಗಳಿಂದ ಇದೇ ಜಾಗದಲ್ಲಿ ವಾಸವಿದ್ದೇವೆ. ಒಂದು ಗುಡಿಸಿಲಿಗೆ ₹2 ಸಾವಿರದಂತೆ\ ನೆಲ ಬಾಡಿಗೆ ಕೊಡುತ್ತಿದ್ದೇವೆ. ಪಕ್ಕದಲ್ಲಿ ದೊಡ್ಡ ಕಟ್ಟಡ ನಿರ್ಮಾಣವಾದ ಬಳಿಕ ಅಲ್ಲಿಂದ ಹೊರ ಹಾಕುವ ನೀರು ನಮ್ಮ ಗುಡಿಸಿಲು ತಲುಪುತ್ತಿದೆ’ ಎಂದು ಹೇಳಿದರು.

‘ಶಾಸಕ ಅರವಿಂದ ಲಿಂಬಾವಳಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಮಸ್ಯೆ ಸರಿಪಡಿಸುವ ಬದಲು ಈ ಜಾಗದಿಂದ ಖಾಲಿ ಮಾಡಿ ಎಂದು ನಮಗೇ ಸೂಚನೆ ನೀಡಿದರು’ ಎಂದು ಬೇಸರ ವ್ಯಕ್ತಪಡಿಸಿದರು.

‘ಬೀದಿಗಳಲ್ಲಿ ಕಸ ಗುಡಿಸುವ, ಕಸ ಸಂಗ್ರಹಿಸುವ ಕೆಲಸ ಮಾಡುತ್ತೇವೆ. ಈ ಕೆಲಸ ಮಾಡಲು ಪಾಲಿಕೆಗೆ ನಾವೇ ಬೇಕು. ಆದರೆ, ನಮ್ಮ ಸಮಸ್ಯೆ ಕೇಳಲು ಯಾರೂ ಮುಂದೆ ಬರುವುದಿಲ್ಲ. ಉಳ್ಳವರ ಪರವೇ ಎಲ್ಲರೂ ಮಾತನಾಡುತ್ತಾರೆ’ ಎಂದು ಅಳಲು ತೋಡಿಕೊಂಡರು.

ದೇವಸ್ಥಾನದಲ್ಲಿ ಮಕ್ಕಳಿಗೆ ಆಶ್ರಯ

‘ಗುಡಿಸಿಲುಗಳ ಪಕ್ಕದಲ್ಲಿ ದೇವಸ್ಥಾನವೊಂದಿದ್ದು, ಮಳೆ ಬಂದ ಕೂಡಲೇ ಮಕ್ಕಳನ್ನು ಅಲ್ಲಿಗೆ ಕರೆದೊಯ್ದು ಕೂರಿಸುತ್ತೇವೆ’ ಎಂದು ಭೀಮೇಶ್ ಹೇಳಿದರು.

‘ಪ್ರತಿದಿನ ರಾತ್ರಿ ಮಳೆ ಬರುತ್ತಿದೆ. ಮಧ್ಯಾಹ್ನದ ತನಕ ನೀರು ಹೊರಹಾಕುವ ಕೆಲಸ ಮಾಡುತ್ತಿದ್ದೇವೆ. ನೀರು ಕಡಿಮೆ ಆಯಿತು ಎನ್ನುವಷ್ಟರಲ್ಲಿ ಮತ್ತೆ ರಾತ್ರಿ ಮಳೆ ಸುರಿಯುತ್ತಿದೆ. ವಾರದಿಂದ ಕೆಲಸವೂ ಇಲ್ಲ, ನೆಮ್ಮದಿಯೂ ಇಲ್ಲ. ಊಟಕ್ಕೂ ಪರದಾಡುವ ಸ್ಥಿತಿ ಇದೆ’ ಎಂದು ಗದ್ಗದಿತರಾದರು.


‘ಹೊರಟಿದ್ದೇವೆ, ಎಲ್ಲಿಗೋ ಗೊತ್ತಿಲ್ಲ’

ಪ್ರತಿದಿನ ಮಳೆ ನೀರು ತುಂಬಿಕೊಳ್ಳುತ್ತಿದ್ದು, ಇದರಿಂದ ಬೇಸತ್ತ ಕೆಲವು ಕಾರ್ಮಿಕರು ಖಾಲಿ ಮಾಡಿ ಬೇರೆ ಜಾಗದ ಹುಡುಕಾಟದಲ್ಲಿದ್ದಾರೆ.

‘ಅಧಿಕಾರಿಗಳು, ಶಾಸಕರು ಸೇರಿ ಎಲ್ಲರೂ ನಮ್ಮದೇ ತಪ್ಪು ಎಂಬಂತೆ ನಡೆದುಕೊಳ್ಳುತ್ತಿದ್ದಾರೆ. ಬಡವರಿಗೆ ಯಾರ ನೆರವೂ ಸಿಗುವುದಿಲ್ಲ ಎಂಬುದು ಖಾತ್ರಿಯಾಗಿದೆ’ ಎಂದು ವಸ್ತುಗಳನ್ನು ಹೊತ್ತು ಹೊರಟಿದ್ದ ಶರಣಮ್ಮ ಹೇಳಿದರು.

‘ಯಾವುದೇ ಖಾಲಿ ಜಾಗದಲ್ಲೂ ಗುಡಿಸಿಲು ನಿರ್ಮಿಸಿಕೊಳ್ಳಲು ಅವಕಾಶ ನೀಡುವುದಿಲ್ಲ. ಸರ್ಕಾರ‌ದ ಜಾಗಕ್ಕೆ ಹೋದರೂ ಅಧಿಕಾರಿಗಳು ಖಾಲಿ ಮಾಡಿಸುತ್ತಾರೆ. ನೀರಿನಲ್ಲಿ ದಿನವೂ ಮುಳುಗಿ ಬೇಸತ್ತು ಹೊರಟಿದ್ದೇವೆ.ಬಾಡಿಗೆ ಮನೆ ಪಡೆಯುವಷ್ಟು ದುಡಿಮೆ ಇಲ್ಲ. ದುಡಿದು ತಿನ್ನುವ ನಮ್ಮನ್ನು ಬಡತನ ಕಿತ್ತು ತಿನ್ನುತ್ತಿದೆ. ಎಲ್ಲಿಗೆ ಹೋಗಬೇಕೋ ಗೊತ್ತಿಲ್ಲ’ ಎಂದು ಅವರು ಕಣ್ಣಾಲಿ ತುಂಬಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.