ADVERTISEMENT

ಮಳೆ ನೀರು ಸಂಗ್ರಹ ತೊಟ್ಟಿ ಕಡ್ಡಾಯ?

ನಗರದ ನೀರಿನ ಬೇಡಿಕೆ ಪೂರೈಸುವುದು – ಅಂತರ್ಜಲ ಮಟ್ಟ ವೃದ್ಧಿಸಲು ಜಲಮಂಡಳಿ ಚಿಂತನೆ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2019, 20:03 IST
Last Updated 27 ಆಗಸ್ಟ್ 2019, 20:03 IST
ಮಳೆ ನೀರು ಸಂಗ್ರಹ ವ್ಯವಸ್ಥೆ  (ಸಂಗ್ರಹ ಚಿತ್ರ)
ಮಳೆ ನೀರು ಸಂಗ್ರಹ ವ್ಯವಸ್ಥೆ  (ಸಂಗ್ರಹ ಚಿತ್ರ)   

ಬೆಂಗಳೂರು: ನಗರದಲ್ಲಿರುವ 60X40 ಅಡಿ ಮತ್ತು ಅದಕ್ಕಿಂತ ಹೆಚ್ಚು ವಿಸ್ತೀರ್ಣದ ಕಟ್ಟಡಗಳಲ್ಲಿ ಮಳೆ ನೀರು ಸಂಗ್ರಹದ ತೊಟ್ಟಿ ನಿರ್ಮಿಸುವುದನ್ನು ಜಲಮಂಡಳಿಯು ಶೀಘ್ರದಲ್ಲಿಯೇ ಕಡ್ಡಾಯಗೊಳಿಸಲಿದೆ.

ಹೀಗೆ ನಿರ್ಮಿಸುವ ಸಂಪ್‌ ಅಥವಾ ತೊಟ್ಟಿಯು 1 ಚದರ ಮೀಟರ್‌ಗೆ 60 ಲೀಟರ್‌ ನೀರು ಹಿಡಿಯುವಷ್ಟು ಇರಬೇಕು. ಅಂದರೆ, 1,600 ಚದರ ಅಡಿ ವಿಸ್ತೀರ್ಣವಿರುವ ಕಟ್ಟಡವು 9,600 ಲೀಟರ್‌ನಷ್ಟು ಮಳೆ ನೀರು ಹಿಡಿಯುವ ತೊಟ್ಟಿಯನ್ನು ಹೊಂದಿರಬೇಕು.

ಈ ಉದ್ದೇಶಿತ ನಿಯಮ ಜಾರಿಗೆ ಬಂದರೆ, ಈಗ ಸಂಗ್ರಹವಾಗುವ ಮಳೆ ನೀರಿಗಿಂತ ಮೂರು ಪಟ್ಟು ಹೆಚ್ಚು ನೀರನ್ನು ಸಂಗ್ರಹಿಸಬಹುದಾಗಿದೆ.

ADVERTISEMENT

ನಗರದಲ್ಲಿ ವರ್ಷಕ್ಕೆ ಸರಾಸರಿ 970 ಮಿ.ಮೀ. ಮಳೆಯಾದರೆ, ಈ ಪೈಕಿ ಅರ್ಧದಷ್ಟು ನೀರು ಸಂಗ್ರಹಿಸಿದರೂ, ಬೆಂಗಳೂರಿನ ನಾಗರಿಕರಿಗೆ ದಿನಕ್ಕೆ ತಲಾ 100 ಲೀಟರ್ ನೀರನ್ನು ಹೆಚ್ಚುವರಿಯಾಗಿ ನೀಡಬಹುದು ಎಂದು ಜಲತಜ್ಞರು ಹೇಳುತ್ತಾರೆ. ಆದರೆ, ಇದು ಸಾಧ್ಯವಾಗಬೇಕಾದರೆ ಜಲಮಂಡಳಿ ಅಥವಾ ಸರ್ಕಾರ ಸರಿಯಾದ ನಿಯಮಗಳನ್ನು ರೂಪಿಸಿ, ಅದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕಿದೆ.

ಮಳೆ ನೀರು ಸಂಗ್ರಹ ಮತ್ತು ಬಳಕೆಯ ಕುರಿತು ಸೆನ್ಸರ್‌ಗಳನ್ನು ಅಳವಡಿಸಿ, ಪರಿಶೀಲನೆ ಮಾಡಬೇಕಾದ ಅಗತ್ಯವಿದೆ ಎಂದು ತಜ್ಞರು ಸಲಹೆ ನೀಡುತ್ತಾರೆ.

‘ಮಳೆ ನೀರು ಸಂಗ್ರಹ ತೊಟ್ಟಿ ನಿರ್ಮಾಣ ಕಡ್ಡಾಯ ಮಾಡುವ ಪ್ರಸ್ತಾವ ಕುರಿತು ಸರ್ಕಾರ ಪರಿಶೀಲನೆ ನಡೆಸುತ್ತಿದೆ. ಜಲಮಂಡಳಿ ಕಾಯ್ದೆಯಲ್ಲಿ ಈ ನಿಯಮವನ್ನು ಸೇರಿಸುವುದರಿಂದ ಮಳೆ ನೀರು ಸಂಗ್ರಹ ಪ್ರಮಾಣ ಹೆಚ್ಚಾಗುತ್ತದೆಯಲ್ಲದೆ, ಅಂತರ್ಜಲ ಮಟ್ಟವು ಸುಧಾರಿಸಲಿದೆ. ಈಗಾಗಲೇ, 30X40 ಅಡಿ ಮತ್ತು ಅದಕ್ಕಿಂತ ಹೆಚ್ಚಿನ ವಿಸ್ತೀರ್ಣದ ನೂತನ ಕಟ್ಟಡಗಳಲ್ಲಿ ಮಳೆ ನೀರು ಸಂಗ್ರಹ ಈಗಾಗಲೇ ಕಡ್ಡಾಯ ಮಾಡಲಾಗಿದೆ’ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ತಿಳಿಸಿದರು.

‘ಮಂಜೂರಾತಿ ವೇಳೆಯೇ ವಿನ್ಯಾಸ’
‘ಕಟ್ಟಡ ನಿರ್ಮಾಣ ಪೂರ್ಣಗೊಂಡ ನಂತರವೇ ನೀರು ಸಂಪರ್ಕ ಪಡೆದುಕೊಳ್ಳಲು ಕಟ್ಟಡ ಮಾಲೀಕರು ಬರುತ್ತಾರೆ. ಆಗ, ಮಳೆ ನೀರು ಸಂಗ್ರಹ ಕಡ್ಡಾಯವಿದೆ, ಸ್ಟೋರೇಜ್‌ ಟ್ಯಾಂಕ್‌ ನಿರ್ಮಿಸಬೇಕು ಎಂದು ಹೇಳಿದಾಗ ಆತಂಕಕ್ಕೆ ಈಡಾಗುತ್ತಾರೆ. ನಿರ್ಮಾಣಕ್ಕೂ ಮುನ್ನವೇ ಈ ಅಂಶ ಒಳಗೊಂಡಂತೆ ಕಟ್ಟಡ ನಕ್ಷೆ ಮಂಜೂರಾತಿ ನೀಡಿದರೆ, ಆ ಪ್ರಕಾರವಾಗಿ ಕಟ್ಟಡ ನಿರ್ಮಿಸಲು ಅನುಕೂಲವಾಗುತ್ತದೆ’ ಎಂದು ಜಲಮಂಡಳಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ಎಂ. ಮಂಜುನಾಥ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಅಂಶಗಳನ್ನು ಒಳಗೊಂಡಂತೆ ಕಾಯ್ದೆ ರೂಪಿಸುವುದು ವಿಳಂಬವಾಗುತ್ತದೆ. ಆದ್ದರಿಂದ ಸರ್ಕಾರದ ನಿರ್ದೇಶನದ ಮೇರೆಗೆ, ಬಿಬಿಎಂಪಿಗೆ ಈ ಕುರಿತು ಪ್ರಸ್ತಾವ ಕಳುಹಿಸಿದ್ದು, ನಕ್ಷೆ ಮಂಜೂರಾತಿ ಸಂದರ್ಭದಲ್ಲಿಯೇ ಈ ಅಂಶ ಸೇರ್ಪಡೆಗೊಳಿಸಲು ಕೋರಲಾಗಿದೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.