ADVERTISEMENT

2 ವರ್ಷದಲ್ಲಿ ಮಳೆನೀರು ಕಾಲುವೆ ದುರಸ್ತಿ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2019, 19:36 IST
Last Updated 16 ಡಿಸೆಂಬರ್ 2019, 19:36 IST

ಬೆಂಗಳೂರು: ನಗರ ವ್ಯಾಪ್ತಿಯ ಮಳೆನೀರು ಕಾಲುವೆಗಳ ದುರಸ್ತಿಕಾರ್ಯಕ್ಕೆ ಸರ್ಕಾರದಿಂದ ಹಣ ಬಿಡುಗಡೆಯಾಗಿದ್ದು, 2 ವರ್ಷದಲ್ಲಿ ದುರಸ್ತಿಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಹೈಕೋರ್ಟ್‌ಗೆ ಬಿಬಿಎಂಪಿ ಮಾಹಿತಿ ನೀಡಿದೆ.

ನಮ್ಮ ಬೆಂಗಳೂರು ಫೌಂಡೇಷನ್‌ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ಪೀಠ ಸೋಮವಾರ ವಿಚಾರಣೆ ನಡೆಸಿತು.

ಬಿಬಿಎಂಪಿ ಮಳೆನೀರು ಕಾಲುವೆ ವಿಭಾಗದ ಮುಖ್ಯ ಎಂಜಿನಿಯರ್ ಬಿ.ಎಸ್.ಪ್ರಹ್ಲಾದ್ ಸಲ್ಲಿಸಿರುವ ಹೆಚ್ಚುವರಿ ಪ್ರಮಾಣಪತ್ರವನ್ನು ನ್ಯಾಯಪೀಠಕ್ಕೆ ಸಲ್ಲಿಸಿದ ಪಾಲಿಕೆ ಪರ ವಕೀಲ ಕೆ.ಎನ್.ಪುಟ್ಟೇಗೌಡ, ನಗರದಲ್ಲಿರುವ ಮಳೆ ನೀರು ಕಾಲುವೆಗಳಿಗೆ ತಡೆಗೋಡೆ ನಿರ್ಮಾಣ ಹಾಗೂ ತಂತಿ ಬೇಲಿ ಅಳವಡಿಕೆ ಸೇರಿ ಕಾಲುವೆಗಳ ದುರಸ್ತಿಗೆಸರ್ಕಾರ ಹಣ ಬಿಡುಗಡೆ ಮಾಡಿದೆ. ಮೊದಲು ಹೆಚ್ಚು ಅಪಾಯಕಾರಿಯಾದ ಕಾಲುವೆಗಳಿಂದಲೇ ದುರಸ್ತಿಕಾರ್ಯ ಆರಂಭಿಸಿ ಹಂತ ಹಂತವಾಗಿ ಕಾಮಗಾರಿ ಪೂರ್ಣಗೊಳಿಸಲಾಗುವುದು. ಅದಕ್ಕೆ ಎರಡು ವರ್ಷ ಸಮಯ ಬೇಕಾಗಲಿದೆ ಎಂದರು.

ADVERTISEMENT

ಪ್ರಮಾಣಪತ್ರ ದಾಖಲಿಸಿಕೊಂಡ ಪೀಠ, ಅರ್ಜಿ ವಿಚಾರಣೆಯನ್ನು ಜ.10ಕ್ಕೆ ಮುಂದೂಡಿತು.

ಹಿನ್ನೆಲೆ:2014ರ ಅಕ್ಟೋಬರ್‌ನಲ್ಲಿ ಭಾರಿ ಮಳೆ ಸುರಿದ ಸಂದರ್ಭದಲ್ಲಿ ಬನ್ನೇರುಘಟ್ಟದ ಬಿಳೇಕಹಳ್ಳಿ ಬಳಿ ಮಳೆನೀರು ಕಾಲುವೆಗೆ ಬಿದ್ದಿದ್ದ 9 ವರ್ಷದ ಬಾಲಕಿ ಗೀತಾಲಕ್ಷ್ಮೀ ಮೃತಪಟ್ಟಿದ್ದಳು.ಈ ಹಿನ್ನೆಲೆಯಲ್ಲಿ ತೆರೆದ ಮಳೆ ನೀರು ಕಾಲುವೆ ಮುಚ್ಚದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸರ್ಕಾರ ಹಾಗೂ ಬಿಬಿಎಂಪಿಗೆ ನಿರ್ದೇಶಿಸುವಂತೆ ಕೋರಿ ನಮ್ಮ ಬೆಂಗಳೂರು ಫೌಂಡೇಷನ್ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.