ADVERTISEMENT

ಗುಡುಗು– ಸಿಡಿಲು ಸಮೇತ ಮಳೆ

ಮೋಡ ಕವಿದ ವಾತಾವರಣ * ಬಿಡುವು ಕೊಟ್ಟು ಸುರಿದ ವರುಣ * ಹೊಳೆಯಂತಾದ ರಸ್ತೆಗಳು

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2022, 19:37 IST
Last Updated 15 ಅಕ್ಟೋಬರ್ 2022, 19:37 IST
ಮಳೆಯಿಂದಾಗಿ ಜೆ.ಸಿ ರಸ್ತೆಯಲ್ಲಿ ನೀರು ನಿಂತಿತ್ತು –ಪ್ರಜಾವಾಣಿ ಚಿತ್ರ
ಮಳೆಯಿಂದಾಗಿ ಜೆ.ಸಿ ರಸ್ತೆಯಲ್ಲಿ ನೀರು ನಿಂತಿತ್ತು –ಪ್ರಜಾವಾಣಿ ಚಿತ್ರ   

ಬೆಂಗಳೂರು: ನಗರದಲ್ಲಿ ಕೆಲ ದಿನಗಳಿಂದ ಬಿಡುವು ಕೊಡುತ್ತಲೇ ಮಳೆ ಸುರಿಯುತ್ತಿದೆ. ಶನಿವಾರವೂ ಗುಡುಗು–ಸಿಡಿಲು ಸಮೇತ ಮಳೆ ಅಬ್ಬರ ಜೋರಾಗಿತ್ತು. ರಸ್ತೆಗಳಲ್ಲಿ ನೀರು ಹೊಳೆಯಂತೆ ಹರಿಯಿತು.

ಬೆಳಿಗ್ಗೆಯಿಂದ ಆಗಾಗ ಸುರಿದು, ಬಿಡುವು ನೀಡಿದ್ದ ಮಳೆಯು ಸಂಜೆ 6 ಗಂಟೆಯ ನಂತರ ಪುನಃ ಆರಂಭವಾಗಿ, ರಾತ್ರಿಯವರೆಗೂ ಸುರಿಯಿತು. ಈ ಸಂದರ್ಭದಲ್ಲಿ ಗುಡುಗು–‌ಸಿಡಿಲಿನ ಅಬ್ಬರವೂ ಕಂಡುಬಂತು.

ಜಯನಗರದ ಮಾಧವನ್ ಉದ್ಯಾನದ ಬಳಿ ಮರವೊಂದು ಉರುಳಿ ಬಿದ್ದಿತ್ತು. ಸ್ಥಳೀಯರ ಸಹಾಯದಿಂದ ಬಿಬಿಎಂಪಿ ಸಿಬ್ಬಂದಿ ಮರ ತೆರವುಗೊಳಿಸಿದರು.

ADVERTISEMENT

ಕಚೇರಿ ಹಾಗೂ ಇತರೆ ಕೆಲಸಕ್ಕೆಂದು ಹೊರಗಡೆ ಬಂದಿದ್ದ ಜನ, ಮನೆಗೆ ವಾಪಸು ಹೋಗಲು ತೊಂದರೆ ಅನುಭವಿಸಿದರು. ಕೆಲವರು, ಸುರಿಯುವ ಮಳೆಯಲ್ಲೇ ಸಂಚರಿಸಿದರು. ಬಹುತೇಕ ಜನ ಅಂಗಡಿ–ಮಳಿಗೆ ಬಳಿ ಆಶ್ರಯ ಪಡೆದಿದ್ದರು. ದ್ವಿಚಕ್ರ ವಾಹನ ಸವಾರರು ರಸ್ತೆ ಬದಿ ವಾಹನಗಳನ್ನು ನಿಲ್ಲಿಸಿ ಸುರಕ್ಷಿತ ಸ್ಥಳಗಳಲ್ಲಿ ನಿಂತುಕೊಂಡಿದ್ದರು.

ಕೆಂಗೇರಿ, ರಾಜರಾಜೇಶ್ವರಿನಗರ, ನಾಯಂಡಹಳ್ಳಿ, ಹೊಸಹಳ್ಳಿ, ದೀಪಾಂಜಲಿನಗರ, ಗಿರಿನಗರ, ಹನು
ಮಂತನಗರ, ಬಸವನಗುಡಿ, ಬನಶಂಕರಿ, ಜಯನಗರ, ಕುಮಾರಸ್ವಾಮಿ ಲೇಔಟ್, ಜೆ.ಪಿ. ನಗರ, ಮಡಿವಾಳ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಮಳೆ ಜೋರಾಗಿತ್ತು.

ಚಿಕ್ಕಪೇಟೆ, ಗಾಂಧಿನಗರ, ಮೆಜೆಸ್ಟಿಕ್, ಶೇಷಾದ್ರಿಪುರ, ಮಲ್ಲೇಶ್ವರ, ರಾಜಾಜಿನಗರ, ವಿಜಯನಗರ, ಬಸವೇಶ್ವರನಗರ, ಯಶವಂತಪುರ, ಪೀಣ್ಯ, ಜಾಲಹಳ್ಳಿ, ವಿದ್ಯಾರಣ್ಯಪುರ, ಕುರುಬರಹಳ್ಳಿ, ನಂದಿನಿ ಲೇಔಟ್, ಮಹಾಲಕ್ಷ್ಮಿ ಲೇಔಟ್, ಸಂಜಯನಗರ, ಹೆಬ್ಬಾಳ, ಆರ್‌.ಟಿ.ನಗರ, ವಸಂತನಗರ, ಶಿವಾಜಿನಗರ, ಕಮರ್ಷಿಯಲ್ ಸ್ಟ್ರೀಟ್, ಎಂ.ಜಿ.ರಸ್ತೆ, ಅಶೋಕನಗರ, ಎಚ್‌ಎಎಲ್‌, ವಿವೇಕನಗರ, ಕೋರಮಂಗಲ, ಈಜಿಪುರ ಹಾಗೂ ಸುತ್ತಮುತ್ತ ಸ್ಥಳಗಳಲ್ಲಿ ಮಳೆ ಸುರಿಯಿತು.

ಹೊಳೆಯಂತಾದ ರಸ್ತೆಗಳು: ಮಳೆ ಧಾರಾಕಾರವಾಗಿ ಸುರಿದಿದ್ದರಿಂದ ಕಾಲುವೆಯಲ್ಲಿ ನೀರು ತುಂಬಿ ರಸ್ತೆಗೆ ಹರಿಯಿತು. ಹರಿಯುವ ನೀರಿನಲ್ಲೇ ವಾಹನಗಳು ಸಂಚರಿಸಿದವು.

ಚಿಕ್ಕಪೇಟೆ, ಕಾಟನ್‌ಪೇಟೆ, ಗಾಂಧಿ ನಗರ, ಮೆಜೆಸ್ಟಿಕ್, ಉಪ್ಪಾರಪೇಟೆ, ಓಕಳಿಪುರ, ಮಲ್ಲೇಶ್ವರ, ಯಶವಂತಪುರ ಹಾಗೂ ಸುತ್ತಮುತ್ತ ಪ್ರದೇಶಗಳ ಪ್ರಮುಖ ರಸ್ತೆಗಳಲ್ಲಿ 2 ಅಡಿಯಷ್ಟು ನೀರು ಹರಿಯಿತು. ಈ ಭಾಗದ ಹಲವೆಡೆ ಕಾಮಗಾರಿ ನಡೆಯುತ್ತಿದ್ದು, ಅದಕ್ಕಾಗಿ ಅಗೆದಿದ್ದ ಗುಂಡಿಗಳಲ್ಲೂ ನೀರು ನಿಂತುಕೊಂಡಿತ್ತು.

‘ಬಹುತೇಕ ಕಾಲುವೆಗಳಲ್ಲಿ ಹೂಳು ತುಂಬಿದೆ. ಹೀಗಾಗಿ, ಕಾಲುವೆಯಲ್ಲಿ ಹೋಗಬೇಕಾದ ನೀರು ರಸ್ತೆಗೆ ಬರುತ್ತಿದೆ. ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ‘ ಎಂದು ಚಿಕ್ಕಪೇಟೆಯ ಬಟ್ಟೆ ಅಂಗಡಿ ವ್ಯಾಪಾರಿ ಸುಪ್ರೀತ್ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.