ADVERTISEMENT

ಬೊಮ್ಮನಹಳ್ಳಿ: ಕಾಲುವೆ ಅಳತೆಗೇ ಕುತ್ತು, ತಂದಿದೆ ಆಪತ್ತು

ಸಿಲ್ಕ್‌ ಬೋರ್ಡ್‌ ಜಂಕ್ಷನ್‌, ಎಲೆಕ್ಟ್ರಾನಿಕ್‌ ಸಿಟಿ ಸುತ್ತಮುತ್ತ ರಾಜಕಾಲುವೆ ಒತ್ತುವರಿ

Published 14 ಸೆಪ್ಟೆಂಬರ್ 2022, 1:26 IST
Last Updated 14 ಸೆಪ್ಟೆಂಬರ್ 2022, 1:26 IST
   

ಬೆಂಗಳೂರು: ಸಿಲ್ಕ್ ಬೋರ್ಡ್‌ ಜಂಕ್ಷನ್‌ ಎಂದರೆ ವಾಹನದಟ್ಟಣೆಯ ತಾಣ ಎಂದೇ ಜನಜನಿತ. ಈ ರಸ್ತೆ ಐಟಿ ಕಾರಿಡಾರ್‌ ಎಲೆಕ್ಟ್ರಾನಿಕ್‌ ಸಿಟಿಗೆ ಸಂಪರ್ಕಸೇತು. ಈ ಭಾಗದಲ್ಲಿ ಸಣ್ಣ ಮಳೆಯಾದರೂ ರಾಜಕಾಲುವೆಗಳು ಉಕ್ಕಿ ಹರಿದು, ರಸ್ತೆಯಲ್ಲೆಲ್ಲ ತುಂಬಿಕೊಳ್ಳುತ್ತವೆ. ಇದಕ್ಕೆಲ್ಲ ಕಾರಣ ರಾಜಕಾಲುವೆ ಒತ್ತುವರಿ ಹಾಗೂ ಗಾತ್ರ ಕಡಿಮೆ ಮಾಡಿರುವುದು. ಅಷ್ಟೇ ಅಲ್ಲ, ಮೂಲ ರಾಜಕಾಲುವೆಗೆ ಪರ್ಯಾಯವಾಗಿ ಮತ್ತೊಂದೆಡೆ ಕಾಲುವೆ ಇದೆ ಎಂದು ತೋರಿಸಿದ್ದು, ಮೂಲ ರಾಜಕಾಲುವೆಯ ಒತ್ತುವರಿಯನ್ನೇ ತೆರವು ಮಾಡಿಲ್ಲ.

ಮಡಿವಾಳ ಕೆರೆಯಿಂದ ಬಿಳೇಕಹಳ್ಳಿ ಮೂಲಕ ಅಗರ ಕೆರೆಗೆ ರಾಜಕಾಲುವೆ ಮೂಲಕ ಕೋಡಿ ಹರಿಯಬೇಕು. ಆದರೆ, ಈ ರಾಜಕಾಲುವೆ ಮುಖ್ಯರಸ್ತೆಯಲ್ಲೇ ಇಲ್ಲದಂತಾಗಿದೆ. ಮೂಲ ವಿಸ್ತೀರ್ಣ ಕಳೆದುಕೊಂಡ ‘ಬಾಕ್ಸ್‌ ರಾಜಕಾಲುವೆಯಿಂದ’ ನೀರು ಸರಾಗವಾಗಿ ಹರಿಯುತ್ತಿಲ್ಲ. ಸಿಲ್ಕ್‌ ಬೋರ್ಡ್‌ ಜಂಕ್ಷನ್‌ ಸೇರಿ ಎಲೆಕ್ಟ್ರಾನಿಕ್‌ ಸಿಟಿಗೆ ಹೋಗುವ ರಸ್ತೆಯಲ್ಲಿ ಸಣ್ಣ ಮಳೆ ಬಂದರೂ ನೀರು ತುಂಬಿಕೊಳ್ಳುತ್ತದೆ.

ಸೆಪ್ಟೆಂಬರ್‌ ಮೊದಲ ವಾರದಲ್ಲಿ ಸುರಿದ ಮಳೆಗೆ ಬೊಮ್ಮನಹಳ್ಳಿ ವಲಯದಲ್ಲಿ ಎಚ್‌.ಎಸ್‌.ಆರ್‌. ಬಡಾವಣೆ ಸೇರಿ ಪ್ರಮುಖ 9 ರಸ್ತೆಗಳು ಜಲಾವೃತವಾಗಿದ್ದವು. ಹೊಂಗಸಂದ್ರ, ಬೇಗೂರು, ಬಿಳೇಕಹಳ್ಳಿ, ಅರಕೆರೆ, ಹುಳಿಮಾವು, ಪುಟ್ಟೇನಹಳ್ಳಿ ಕೆರೆ, ರಾಜಕಾಲುವೆಗಳ ಸುತ್ತಮುತ್ತಲಿನ ಬಡಾವಣೆಗಳು ಹಾಗೂ 140ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿತ್ತು. ಇದಕ್ಕೆಲ್ಲ ಕಾರಣ ರಾಜಕಾಲುವೆ ಒತ್ತುವರಿ. ಜೊತೆಗೆ ಇರುವ ರಾಜಕಾಲುವೆಯ ವಿಸ್ತೀರ್ಣವನ್ನು ಕಡಿಮೆ ಮಾಡಿರುವುದು. ಸಾಮಾನ್ಯವಾಗಿ ರಾಜಕಾಲುವೆಗಳ ಅಗಲ ಕನಿಷ್ಠ 15 ಅಡಿಯಿಂದ 66 ಅಡಿ ಇರುತ್ತದೆ. ಇಲ್ಲಿ ಅಗಲ ವಿಪರೀತ ಎನ್ನುವಷ್ಟು ಕಡಿಮೆಯಾಗಿ
ರುವುದಕ್ಕೆ ಉದಾಹರಣೆಗಳು ಸಿಗುತ್ತವೆ.

ADVERTISEMENT

ಇನ್ನು ಈ ಭಾಗದ ಐಟಿ ಕಾರಿಡಾರ್‌ ಎಲೆಕ್ಟ್ರಾನಿಕ್‌ ಸಿಟಿ ಬಿಬಿಎಂಪಿ ವ್ಯಾಪ್ತಿಗೆ ಬಾರದಿದ್ದರೂ ರಾಜಕಾಲುವೆ, ಕುಂಟೆಗಳ ಒತ್ತುವರಿಯಲ್ಲಿ ಹಿಂದೆ ಬಿದ್ದಿಲ್ಲ. ಗ್ರಾಮ ಪಂಚಾಯಿತಿಯವರು ಈ ಎಲ್ಲ ದುರವಸ್ಥೆಗೆ ಅನುವು ಮಾಡಿಕೊಟ್ಟಿದ್ದಾರೆ. ಈ ಭಾಗದಲ್ಲಿ ರಾಜಕಾಲುವೆ ಒತ್ತುವರಿ ತೆರವಿಗೆ ಯಾರೂ ಮುಂದಾಗುತ್ತಿಲ್ಲ ಎಂಬುದು
ಸ್ಥಳೀಯರ ಆರೋಪ.

ಕೆರೆ ಮೇಲಿದೆ ಡಾಲರ್ಸ್ ಕಾಲೊನಿ

ರಾಜಕಾಲುವೆಯ ಅಗಲ ಹಾಗೂ ಆಳವನ್ನೇ ಬೊಮ್ಮನಹಳ್ಳಿ ವಲಯದಲ್ಲಿ ಕಡಿಮೆ ಮಾಡಿದ್ದಾರೆ. 60–70 ಅಡಿ ಅಗಲದ ರಾಜಕಾಲುವೆ 20–30 ಅಡಿಯಷ್ಟಾಗಿದೆ. ಮಡಿವಾಳ ಕೆರೆಯಿಂದ ಬಿಳೇಕಹಳ್ಳಿ ಭಾಗದಲ್ಲಿ ರಾಜಕಾಲುವೆಯನ್ನು ಬಾಕ್ಸ್‌ ಮಾಡಲಾಗಿದ್ದು, ನೀರು ಹರಿಯುವ ಪ್ರಮಾಣ ಕಡಿಮೆಯಾಗಿದೆ. ಈ ಭಾಗದಲ್ಲಿ ಲಿಂಗಣ್ಣನ ಕೆರೆ ಸೇರಿ ಹಲವು ಕುಂಟೆಗಳನ್ನೂ ಮುಚ್ಚಿ ಬಿಡಿಎ ಡಾಲರ್ಸ್‌ ಕಾಲೊನಿಯನ್ನೂ ಮಾಡಿದೆ. ಇಲ್ಲಿ ಪ್ರತಿಷ್ಠಿತರೆಲ್ಲ ನೆಲೆಸಿದ್ದಾರೆ. ಅವರನ್ನೆಲ್ಲ ಯಾರು ತೆರವು ಮಾಡುತ್ತಾರೆ? ಈ ವಲಯದಲ್ಲಿ ಒತ್ತುವರಿಗೆ ಪ್ರಮುಖ ಕಾರಣ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ. ರಾಜಕಾಲುವೆಯನ್ನು ಕಿರಿದು ಮಾಡಿ ಲೇಔಟ್‌ ಮಾಡುವವರಿಗೆ, ರಿಯಲ್‌ ಎಸ್ಟೇಟ್‌ನವರಿಗೆ ಜಾಗ ಬಿಟ್ಟುಕೊಟ್ಟಿರುವುದು ಇದೇ ಬಿಡಿಎಯವರು. ಕಳೆದ ಬಾರಿ ಮಳೆ ಬಂದಾಗ ಬಿಳೇಕಹಳ್ಳಿ ಕಡೆ ರಾಜಕಾಲುವೆ ಒತ್ತುವರಿ ತೆರವು ಮಾಡಲು ಮುಂದಾದರು. ನಂತರ ಸುಮ್ಮನಾದರು.

ಕೆರೆಗಳ ಕಾಲುವೆ ಮಾಯ

ಬೊಮ್ಮನಹಳ್ಳಿ ಹಾಗೂ ಬೆಂಗಳೂರು ದಕ್ಷಿಣ ವಿಧಾನಸಭೆ ಕ್ಷೇತ್ರದಲ್ಲಿ ಕೆರೆಗಳ ಅಭಿವೃದ್ಧಿಗೆ ವಹಿಸಿದ್ದ ಆಸಕ್ತಿಯನ್ನು ಕಾಲುವೆಗಳನ್ನು ಉಳಿಸಿಕೊಳ್ಳುವಲ್ಲಿ ತೋರಿಲ್ಲ ಎಂಬುದಕ್ಕೆ ಕೆರೆಗಳ ಸುತ್ತಲಿನ ರಾಜಕಾಲುವೆಗಳು ಒತ್ತುವರಿಯಾಗಿರುವುದೇ ಸಾಕ್ಷಿ. ಉತ್ತರಹಳ್ಳಿ ಮೊಗೆಕೆರೆ, ದೊರೆ ಕೆರೆ, ಸುಬ್ರಮಣ್ಯಪುರ ಕೆರೆ, ದೊಡ್ಡಕಲ್ಲಸಂದ್ರ, ಕೊತ್ತನೂರು, ಆಲಹಳ್ಳಿ, ಗೊಲ್ಲಹಳ್ಳ, ಕೆಂಬತ್ತಳ್ಳಿ, ಗೊಟ್ಟಿಗೆರೆ, ಐತಿಹಾಸಿಕ ಬೇಗೂರು, ಪರಪ್ಪನ ಅಗ್ರಹಾರ, ಹರಳೂರು, ಸೋಮಸಂದ್ರ, ಕೊತ್ತನೂರು, ಚುಂಚಘಟ್ಟ, ಕೂಡ್ಲು ದೊಡ್ಡಕೆರೆಗಳ ಸುತ್ತಮುತ್ತಲಿನ ರಾಜಕಾಲುವೆ ಒತ್ತುವರಿಯಾಗಿದೆ. ಈ ಕೆರೆಗಳು ತುಂಬಿದಾಗ ನೀರು ಬಡಾವಣೆ, ರಸ್ತೆಗೆ ಹರಿಯುತ್ತಿದೆ.

ಈಗಲೂ ಈ ಭಾಗದಲ್ಲಿ ಒತ್ತುವರಿ ತೆರವು ಕಾರ್ಯ ಆಗುತ್ತಿಲ್ಲ ಎಂದು ಜನಾಧಿಕಾರ ಸಂಘರ್ಷ ಪರಿಷತ್‌ನ ಸಹ–ಸಂಸ್ಥಾಪಕ ಬಿ.ಕೆ. ಪ್ರಕಾಶ್‌ ಬಾಬು ಅಸಮಾಧಾನ ವ್ಯಕ್ತಪಡಿಸಿದರು.

ಸ್ಥಳ ಬದಲಿಸಿದ ರಾಜಕಾಲುವೆ

ಬೊಮ್ಮನಹಳ್ಳಿ ಹಾಗೂ ಬೆಂಗಳೂರು ದಕ್ಷಿಣ ವಿಧಾನಸಭೆ ಕ್ಷೇತ್ರಗಳಲ್ಲಿ ರಾಜಕಾಲುವೆ ಸ್ಥಳ ಬದಲಿಸಿದೆ. ಪರ್ಯಾಯ ರಾಜಕಾಲುವೆ ಇದೆ ಎಂದು ಮೂಲ ರಾಜಕಾಲುವೆಯ ಒತ್ತುವರಿಯನ್ನು ಬಿಬಿಎಂಪಿ ಹಾಗೂ ಕಂದಾಯ ಇಲಾಖೆ ಹಾಗೆಯೇ ಬಿಟ್ಟಿವೆ.

ಗುಬ್ಬಲಾಳದ ಸರ್ವೆ ನಂ.11, ಚುಂಚಘಟ್ಟದ ಸರ್ವೆ ನಂ. 22/1, ಗೊಟ್ಟಿಗೆರೆಯ ಸರ್ವೆ ನಂ.29, 30, 32, 42, 43, 44, 45/1–9, 46, 47, 48, 130, ಪರಪ್ಪನ ಅಗ್ರಹಾರ ಸರ್ವೆ ನಂ. 61/1, 61/2, 62/3, ಹೊಂಗಸಂದ್ರದ ಸರ್ವೆ ನಂ. 79, 82/1, ಆಲಹಳ್ಳಿಯ ಸರ್ವೆ ನಂ. 92/1ಎ–ಬಿ, 92/2 ಗಳಲ್ಲಿ ಕಾಲು ಗುಂಟೆಯಿಂದ 11 ಗುಂಟೆಯವರೆಗೆ ರಾಜಕಾಲುವೆ ಒತ್ತುವರಿಯಾಗಿದೆ. ಆದರೆ, ‘ಪರ್ಯಾಯ ಕಾಲುವೆ ಇದೆ’ ಎಂಬ ಷರಾ ಬರೆದು ಬಿಬಿಎಂಪಿ ವರ್ಷಗಳಿಂದ ಸುಮ್ಮನಿದೆ.

ಎಲೆಕ್ಟ್ರಾನಿಕ್‌ ಸಿಟಿಯಲ್ಲೂ ಒತ್ತುವರಿ

ಎಲೆಕ್ಟ್ರಾನಿಕ್ ಸಿಟಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಕಷ್ಟು ಅಪಾರ್ಟ್‌ಮೆಂಟ್‌ಗಳಿವೆ. ಈ ಭಾಗದಲ್ಲಿ ರಾಜಕಾಲುವೆ ಬಹುತೇಕ ಮುಚ್ಚಿಹೋಗಿದೆ. ಮಳೆ ಬಂದಾಗ ಒಳಚರಂಡಿ ನೀರು ಸೇರಿಕೊಂಡು ಕಲ್ಮಶವೆಲ್ಲ ರಸ್ತೆಯಲ್ಲೇ ಹರಿಯುತ್ತದೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಅಥವಾ ಜಿಲ್ಲಾಡಳಿತ ಕ್ರಮ ಕೈಗೊಳ್ಳುತ್ತಿಲ್ಲ. ಪ್ರತಿ ಮಳೆಯಲ್ಲೂ ಈ ಭಾಗದ ನಿವಾಸಿಗಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಎಲೆಕ್ಟ್ರಾನಿಕ್‌ ಸಿಟಿ ಪೂರ್ಣ ಜಲಾವೃತವಾದಾಗ ಮಾತ್ರ ಇಲ್ಲಿನ ಸಂಕಷ್ಟ ಎಲ್ಲರಿಗೂ ಅರ್ಥವಾಗುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ಮಾಣಿ ರಂಜನ್‌ ಎಚ್ಚರಿಕೆ ನೀಡಿದರು.

ಯಾವ ಗ್ರಾಮಗಳಲ್ಲಿ?

ಕೊತ್ತನೂರು, ಪರಪ್ಪನ ಅಗ್ರಹಾರ, ಹುಳಿಮಾವು, ಕೋಡಿಚಿಕ್ಕನಹಳ್ಳಿ, ನ್ಯಾನಪ್ಪನಹಳ್ಳಿ, ದೊಡ್ಡಕಲ್ಲಸಂದ್ರ, ರಾಘವನಪಾಳ್ಯ, ಆಲಹಳ್ಳಿ, ಗುಬ್ಬಲಾಳ, ಮಾರಸಂದ್ರ, ಬೊಮ್ಮನಹಳ್ಳಿ, ಚುಂಚಘಟ್ಟ, ಗೊಟ್ಟಿಗೆರೆ, ಹೊಂಗಸಂದ್ರ, ಬೇಗೂರು, ತುರಹಳ್ಳಿ, ಸಿಂಗಸಂದ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.