ಕೆಂಗೇರಿ: ರಾಜರಾಜೇಶ್ವರಿ ವೈದ್ಯಕೀಯ ಕಾಲೇಜಿನ 15ನೇ ಘಟಿಕೋತ್ಸವದಲ್ಲಿ 400 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಮಾತನಾಡಿ, ‘ದಶಕದಿಂದೀಚೆಗೆ
ಆರೋಗ್ಯ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆಯಾಗಿದೆ. ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆಯಡಿ 55 ಕೋಟಿ ನಾಗರಿಕರಿಗೆ ಆರೋಗ್ಯ ಭದ್ರತೆ ಒದಗಿಸಲಾಗಿದೆ’ ಎಂದರು.
‘ಆರೋಗ್ಯ ಕ್ಷೇತ್ರದ ಬಲ ವರ್ಧನೆಗಾಗಿ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ₹99,000 ಕೋಟಿ ಮೀಸಲಿಡಲಾಗಿದೆ. ವೈದ್ಯಕೀಯ ಸೀಟುಗಳ ಸಂಖ್ಯೆಯನ್ನು ಶೇಕಡ 135ರಷ್ಟು ಹೆಚ್ಚಳ ಮಾಡಲಾಗಿದೆ’ ಎಂದು ಹೇಳಿದರು.
‘ವೈದ್ಯಕೀಯ ವೃತ್ತಿ ಎಂಬುದು ಕೇವಲ ಉದ್ಯೋಗವಲ್ಲ. ಅದೊಂದು ಸೇವಾ ಕ್ಷೇತ್ರ. ಯುವ ವೈದ್ಯರು ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ಸಮಾಜದ ಬೆಳವಣಿಗೆಗೆ ಸಹಕಾರ ನೀಡಬೇಕು’ ಎಂದು ಸಲಹೆ ನೀಡಿದರು.
ಆರ್. ಆರ್. ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಕುಲಪತಿ ಡಾ. ಎ. ಸಿ.ಷಣ್ಮುಗಂ ಮಾತನಾಡಿ, ‘ಪದವಿ ಗಳಿಕೆಗಾಗಿ ಮಾತ್ರ ಅಧ್ಯಯನ ಮಾಡಬಾರದು. ದೀರ್ಘಕಾಲದವರೆಗೆ ಯಶಸ್ಸನ್ನು ಕಾಪಿಟ್ಟುಕೊಳ್ಳುವ ನಿಟ್ಟಿನಲ್ಲಿ ನಿರಂತರ ಅಧ್ಯಯನ ಅತಿ ಅವಶ್ಯಕ’ ಎಂದರು.
ಆರ್. ಆರ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎ. ಸಿ. ಎಸ್. ಅರುಣ್ ಕುಮಾರ್, ಟ್ರಸ್ಟಿ ಲಲಿತಾ ಲಕ್ಷ್ಮಿ, ಡಾ. ಎಸ್. ವಿಜಯಾನಂದ, ಸಿ. ಎನ್. ಸೀತಾರಾಮ್, ಡಾ. ಬಸವರಾಜ್ ಭಂಡಾರೆ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.