ರಾಜರಾಜೇಶ್ವರಿ ನಗರ: ‘ವೈಟ್ ಟಾಪಿಂಗ್ ರಸ್ತೆ ನಿರ್ಮಾಣದ ಸಂಬಂಧ ವಾಣಿಜ್ಯ ಮಳಿಗೆ, ಅಂಗಡಿ ಮತ್ತು ಮನೆಗಳನ್ನು ಕಳೆದುಕೊಳ್ಳುವ ಮಾಲೀಕರಿಗೆ ಈಗಿನ ಮಾರುಕಟ್ಟೆ ದರದಲ್ಲಿ ಪರಿಹಾರ ನೀಡಬೇಕು. 2013ರ ಭೂ ಕಾಯ್ದೆಯಡಿ ನೀಡುವ ಪರಿಹಾರದಿಂದ ಬಡ, ಮಧ್ಯಮ ವರ್ಗದವರಿಗೆ ತೊಂದರೆಯಾಗಲಿದೆ..’
ಉತ್ತರಹಳ್ಳಿ ಮುಖ್ಯರಸ್ತೆಯಿಂದ ಕೋಡಿಪಾಳ್ಯ ಮಾರ್ಗವಾಗಿ ನೈಸ್ ಜಂಕ್ಷನ್‌ವರೆಗೆ ಕೈಗೊಂಡಿರುವ ರಸ್ತೆ ವಿಸ್ತರಣೆ, ರಸ್ತೆ ಬದಿಗಳಲ್ಲಿ ಚರಂಡಿ ನಿರ್ಮಾಣ, ರಸ್ತೆಗೆ ವೈಟ್ ಟಾಪಿಂಗ್ ಅಳವಡಿಸುವ ಕಾಮಗಾರಿಗಳ ಕುರಿತು ಕೋಡಿಪಾಳ್ಯದಲ್ಲಿ ಕರೆದಿದ್ದ ಭೂ ಮಾಲೀಕರು, ಕಟ್ಟಡ ಮಾಲೀಕರ ಸಭೆಯಲ್ಲಿ ಕೋಡಿಪಾಳ್ಯದ ರಾಮಚಂದ್ರ ಅವರು ಹೀಗೆ ಅಭಿಪ್ರಾಯ ವ್ಯಕ್ತಪಡಿಸಿದರು.
ಸಭೆಯಲ್ಲಿ, ‘ಏಳು ತಿಂಗಳಿಂದ ರಸ್ತೆ ನಿರ್ಮಾಣಕ್ಕಾಗಿ ಭೂಮಿ ವಶಪಡಿಸಿಕೊಳ್ಳುತ್ತಿದ್ದರೂ, ಮತ್ತೆ ಮತ್ತೆ ಸಭೆಗಳನ್ನು ಏಕೆ ಕರೆಯಲಾಗುತ್ತಿದೆ’ ಎಂದು ಪ್ರಶ್ನಿಸಿದರೆ, ‘ಹಿಂದಿನ ದರಕ್ಕೆ ಭೂಮಿ, ಮನೆ ನೀಡಲು ಸಾಧ್ಯವಿಲ್ಲ. ಈಗಿನ ದರ ನೀಡಬೇಕು. ಇಲ್ಲದಿದ್ದರೆ ನಮಗೆ ವೈಟ್‌ಟಾಪಿಂಗ್ ರಸ್ತೆ ಬೇಡ. ಮನೆ ಕಳೆದುಕೊಂಡ ನಾವು ಎಲ್ಲಿಗೆ ಹೋಗುವುದು’ ಎಂದು ಕೆಲವರು ಪ್ರಶ್ನಿಸಿದರು. ಇನ್ನೂ ಕೆಲವರು ’ರಸ್ತೆ ಮಾಡಿ ನ್ಯಾಯಯುತವಾಗಿ ಹಣ ನೀಡಿ’ ಎಂದು ಒತ್ತಾಯಿಸಿದರು.
ಬಿಬಿಎಂಪಿ ಟಿಡಿಆರ್ ವಿಭಾಗದ ಆಯುಕ್ತ ಕರಿಗೌಡ ಮಾತನಾಡಿ, ‘ಟಿಡಿಆರ್(ವರ್ಗಾಯಿಸಬಹುದಾದ ಅಭಿವೃದ್ಧಿ ಹಕ್ಕು) ಮೂಲಕ ಹಣ ನೀಡುತ್ತೇವೆ. ರಸ್ತೆ ಬೇಡ ಎಂದರೆ ವೈಟ್ ಟಾಪಿಂಗ್ ಕಾಮಗಾರಿ ರದ್ದು ಪಡಿಸುತ್ತೇವೆ. ಭೂಮಿ, ಮನೆ, ಕಟ್ಟಡಗಳ ಮಾಲೀಕರಿಗೆ 1:2ರ ಅನುಪಾತದಲ್ಲಿ ಹಣ ನೀಡುತ್ತೇವೆ. ಯಾವುದೇ ಗೊಂದಲ ಬೇಡ’ ಎಂದರು.
ಶಾಸಕ ಎಸ್.ಟಿ. ಸೋಮಶೇಖರ್ ಮಾತನಾಡಿ, ‘ಎಲ್ಲರೂ ಒಪ್ಪಿಗೆ ನೀಡಿದರೆ ಮಾತ್ರ ವೈಟ್ ಟಾಪಿಂಗ್ ಕಾಮಗಾರಿ ಪ್ರಾರಂಭಿಸಲಾಗುತ್ತದೆ’ ಎಂದು ಹೇಳಿದರು.
ಬಿಬಿಎಂಪಿ ಉಪ ಆಯುಕ್ತ ಅಬ್ದುಲ್ ರಬ್, ಬೃಹತ್ ರಸ್ತೆ ಕಾಮಗಾರಿ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಮರಳ ಸಿದ್ದಪ್ಪ, ಸಹಾಯಕ ಕಾರ್ಯ ಪಾಲಕ ಎಂಜಿನಿಯರ್ ಸತೀಶ್ ಕುಮಾರ್, ವಾರ್ಡ್ ಮಟ್ಟದ ಸಹಾಯಕ ಕಾರ್ಯ ಪಾಲಕ ಎಂಜಿನಿಯರ್ ಎಂ.ಚಾಮರಾಜು, ಸಹಾಯಕ ಎಂಜಿನಿಯರ್ ಪ್ರದೀಪ್ ಜಿ., ಕಂದಾಯ ಅಧಿಕಾರಿ ಲೋಕಮಾತ, ಸಹಾಯಕ ಕಂದಾಯ ಅಧಿಕಾರಿ ಶಿವಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.