ರಾಜರಾಜೇಶ್ವರಿನಗರ: ಸೊರೆಕುಂಟೆ ಕರಿಯಮ್ಮ ದೇವಿಯ ಉತ್ಸವ, ಜಾತ್ರಾ ಮಹೋತ್ಸವ ಮತ್ತು ಕಬ್ಬಾಳಮ್ಮ, ಮಾರಮ್ಮ ದೇವರ ಉತ್ಸವ, ಪೂಜಾಕುಣಿತ ವಿವಿಧ ಜಾನಪದ ಕಲಾ ಪ್ರದರ್ಶನದೊಂದಿಗೆ ದೊಡ್ಡಗೊಲ್ಲರ ಹಟ್ಟಿ, ನಾಗದೇವನಹಳ್ಳಿ ಗ್ರಾಮದಲ್ಲಿ ಸಡಗರ ಸಂಭ್ರಮದಿಂದ ನಡೆಯಿತು.
ನಾಗದೇವನಹಳ್ಳಿಯ ಭೂತಪ್ಪಸ್ವಾಮಿ ದೇವಾಲಯ ಆವರಣದಿಂದ ಪ್ರಾರಂಭವಾದ ಉತ್ಸವದಲ್ಲಿ ಹೆಣ್ಣುಮಕ್ಕಳು ತಂಬಿಟ್ಟು, ಬೆಲ್ಲದ ಆರತಿಯನ್ನು ಮನೆಯಿಂದ ತಂದು ಕರಿಯಮ್ಮ ದೇವಿಗೆ ಬೆಳಗಿದರು. ಪಟಾಕಿ, ಬಾಣ ಬಿರುಸುಗಳ ಆರ್ಭಟದೊಂದಿಗೆ ತಮಟೆ, ನಗಾರಿ, ಚಂಡೆವಾದ್ಯಗಳ ಸದ್ದಿಗೆ ವಯಸ್ಸಿನ ಅಂತರವಿಲ್ಲದೆ ಗ್ರಾಮಸ್ಥರು ಹೆಜ್ಜೆಹಾಕುತ್ತಾ ಕುಣಿದು ಕುಪ್ಪಳಿಸಿದರು.
ಸಗಣಿ ನೀರು, ಬಣ್ಣದ ರಂಗೋಲಿ ಹಾಕಿ, ತಳಿರು ತೋರಣಗಳಿಂದ ಮನೆ, ರಸ್ತೆ, ಬೀದಿಗಳನ್ನು ಸಿಂಗರಿಸಲಾಗಿತ್ತು. ಗ್ರಾಮಗಳ ಪ್ರಮುಖ ರಸ್ತೆಗಳಲ್ಲಿ ದೇವರ ಉತ್ಸವ ಸಾಗಿಬಂದಾಗ ಮನೆ ಮುಂದೆ ಪೂಜೆ ಸಲ್ಲಿಸಿ, ಈಡುಗಾಯಿ ಹಾಕಿದರು.
ತಪ್ಪಸ್ವಾಮಿ ದೇವಸ್ಥಾನದ ಸೇವಾ ಟ್ರಸ್ಟ್ ಅಧ್ಯಕ್ಷ ಡಿಪೋ ಕೃಷ್ಣಪ್ಪ, ಬಿಜೆಪಿ ಮುಖಂಡ ಎನ್.ಸಿ.ಕುಮಾರ್, ಪೂಜಾರಿ ತಿಮ್ಮಯ್ಯ, ದಾಸಪ್ಪ, ಮಾರಣ್ಣ, ಮುಖಂಡರಾದ ರಾಮಣ್ಣ, ಜೆ.ದೊಡ್ಡಯ್ಯ, ಮೀಸೆ ಕಾಟಪ್ಪ, ಯೆರಪ್ಪ, ಬೆಣ್ಣೆ ಚಿಕ್ಕಣ್ಣ, ಪ್ರಕಾಶ್ ಉತ್ಸವದಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.