ADVERTISEMENT

ರಾಜರಾಜೇಶ್ವರಿನಗರ: ಹೊರವರ್ತುಲ ರಸ್ತೆಯಲ್ಲಿ ಮರಗಳಿಗೆ ಬೆಂಕಿ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2025, 16:10 IST
Last Updated 24 ಮಾರ್ಚ್ 2025, 16:10 IST
ಮರದ ಬುಡಕ್ಕೆ ಬೆಂಕಿಹಚ್ಚಿ ಸುಟ್ಟುಹಾಕಲಾಗಿದೆ
ಮರದ ಬುಡಕ್ಕೆ ಬೆಂಕಿಹಚ್ಚಿ ಸುಟ್ಟುಹಾಕಲಾಗಿದೆ   

ರಾಜರಾಜೇಶ್ವರಿನಗರ: ಹೊರವರ್ತುಲ ರಸ್ತೆಯ ಮಲ್ಲತ್ತಹಳ್ಳಿಯಿಂದ ಕೇಂದ್ರ ಸಾಹಿತ್ಯ ಅಕಾಡೆಮಿವರೆಗಿನ ಪಾದಚಾರಿ ಮಾರ್ಗದಲ್ಲಿರುವ ಮರಗಳ ಬುಡಗಳಿಗೆ ಕಿಡಿಗೇಡಿಗಳು ಬೆಂಕಿ ಹಾಕಿದ್ದಾರೆ.

‘ಪಾದಚಾರಿ ಮಾರ್ಗದಲ್ಲಿರುವ ಮರಗಳ ಬಳಿ ಒಣತ್ಯಾಜ್ಯ, ಪ್ಲಾಸ್ಟಿಕ್, ತ್ಯಾಜ್ಯ, ಕಸ ಕಡ್ಡಿಗಳನ್ನು ಹಾಕಿ, ಬೆಂಕಿ ಹಾಕುವುದರಿಂದ ಮರಗಳು ನಾಶವಾಗುತ್ತಿದ್ದರೂ ಬಿಬಿಎಂಪಿ ಅರಣ್ಯ, ಬೃಹತ್ ರಸ್ತೆ ಕಾಮಗಾರಿ, ಬಿಬಿಎಂಪಿ ವಾರ್ಡ್ ಮಟ್ಟದ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಸ್ಥಳೀಯ ನಿವಾಸಿಗಳಾದ ಗಿರೀಶ್, ರಾಮಚಂದ್ರ, ತನುಜ ಅವರು ಬೇಸರ ವ್ಯಕ್ತಪಡಿಸಿದರು.

‘ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಬಿಡಿಎ, ಖಾಸಗಿ, ರೆವಿನ್ಯೂ ಬಡಾವಣೆಗಳಲ್ಲಿ ಮನೆ ನಿರ್ಮಾಣ, ವಾಣಿಜ್ಯ, ಇನ್ನಿತರೆ ಕಟ್ಟಡಗಳನ್ನು ನಿರ್ಮಿಸುವಾಗ ಅವಶ್ಯವಿಲ್ಲದಿದ್ದರೂ ಮರಗಳನ್ನು ಕಡಿದು ಹಾಕಲಾಗುತ್ತಿದೆ. ಈ ಬಗ್ಗೆ ದೂರು ನೀಡಿದರೂ ಬಿಬಿಎಂಪಿ ಕ್ರಮಕೈಗೊಳ್ಳುತ್ತಿಲ್ಲ’ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಉದ್ಯಾನನಗರ, ಹಸಿರುನಗರವನ್ನಾಗಿ ಮಾಡಲು ಬಿಡಿಎ ಹಾಗೂ ಬಿಬಿಎಂಪಿ ಕೋಟ್ಯಂತರ ರೂಪಾಯಿ ವೆಚ್ಚಮಾಡಿ ಸಸಿಗಳನ್ನು ನೆಟ್ಟು, ಮರಗಳನ್ನಾಗಿಸುತ್ತಾರೆ. ನಂತರ ರಾಜಾರೋಷವಾಗಿ ಮರಗಳನ್ನು ಕಡಿದು ಹಾಕುವವರ ಮೇಲೆ ಕಾನೂನು ರೀತಿಯಲ್ಲಿ ಕ್ರಮಕೈಗೊಳ್ಳುತ್ತಿಲ್ಲ’ ಎಂದರು

‘ಮರ–ಗಿಡ, ಕೆರೆ–ಕುಂಟೆಗಳನ್ನು ನಾಶಮಾಡುವ, ರಾಜಕಾಲುವೆ ಒತ್ತುವರಿ ಮಾಡುವವರ ಮೇಲೆ ಕಠಿಣ ಕ್ರಮಕೈಗೊಂಡಾಗ ಮಾತ್ರ ಪರಿಸರ ಉಳಿಯಲು ಸಾಧ್ಯ’ ಎಂದು ಅರ್ಪಿತಾ ಎ.ಎಂ. ಹೇಳಿದರು.

ಮರದ ಬುಡಕ್ಕೆ ಬೆಂಕಿಹಚ್ಚಿ ಸುಟ್ಟುಹಾಕಲಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.