
ಬೆಂಗಳೂರು: ‘ಕರ್ನಾಟಕ ರಾಜ್ಯೋತ್ಸವ ಆಚರಣೆಗೆ ಅವಕಾಶ ನೀಡದ ಕೇಂದ್ರ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಎಚ್ಚರಿಸಿದ್ದಾರೆ.
ರಾಜ್ಯೋತ್ಸವ ಆಚರಣೆಗೆ ಅನುಮತಿ ನೀಡದ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ ಸಂಸ್ಥೆಯ (ಬಿ.ಎಚ್.ಇ.ಎಲ್) ನಡೆ ಖಂಡಿಸಿರುವ ಅವರು, ಈ ಬಗ್ಗೆ ಸಂಸ್ಥೆಯ ಉನ್ನತ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
‘ಸಂಸ್ಥೆಯ ಆಡಳಿತ ವರ್ಗದ ಧೋರಣೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಲಿದೆ. ನೌಕರರ ಸಂಘಟನೆಗಳಿಗೆ ಯಾವುದೇ ಷರತ್ತು ವಿಧಿಸದೆ, ರಾಜ್ಯೋತ್ಸವ ಆಚರಣೆಗೆ ಅನುಮತಿ ನೀಡುವುದು ನೆಲದ ಭಾಷೆಗೆ ಗೌರವ ನೀಡುವ ವಿಷಯವಾಗಿದೆ. ಸಂಸ್ಥೆ ಅನುಮತಿ ನೀಡಲು ನಿರಾಕರಿಸಿದಲ್ಲಿ, ರಾಜ್ಯ ಸರ್ಕಾರವು ತನ್ನ ಅಧಿಕಾರ ವ್ಯಾಪ್ತಿಯನ್ನು ಸಂಸ್ಥೆಗೆ ಮನನ ಮಾಡಿಕೊಡಬೇಕಾಗುತ್ತದೆ’ ಎಂದಿದ್ದಾರೆ.
‘ಯಾವುದೇ ಸಂಸ್ಥೆ ನವೆಂಬರ್ 1 ರಂದು ಕರ್ನಾಟಕ ರಾಜ್ಯೋತ್ಸವ ಆಚರಿಸಲು ಅನುಮತಿ ನಿರಾಕರಿಸಿದಲ್ಲಿ, ಖುದ್ದಾಗಿ ಸಂಸ್ಥೆಗೆ ಭೇಟಿ ನೀಡಿ ಕ್ರಮಕ್ಕೆ ಆಗ್ರಹಿಸುತ್ತೇನೆ’ ಎಂದು ಹೇಳಿದ್ದಾರೆ.
‘ಪ್ರಾಧಿಕಾರದ ನಿಯೋಗ ಬಿ.ಎಚ್.ಇ.ಎಲ್ ಸಂಸ್ಥೆಗೆ ಭೇಟಿ ನೀಡಿ, ಆಡಳಿತದಲ್ಲಿ ಕನ್ನಡ ಅನುಷ್ಠಾನದ ಪ್ರಗತಿ ಪರಿಶೀಲನೆಯನ್ನೂ ನಡೆಸಲಿದೆ. ಕನ್ನಡ ಕಡೆಗಣಿಸಿರುವುದು ಕಂಡುಬಂದಲ್ಲಿ ಸೂಕ್ತ ಕ್ರಮಕ್ಕೆ ಮುಂದಾಗಲಿದೆ’ ಎಂದಿದ್ದಾರೆ.
‘ಕರ್ನಾಟಕದ ನೆಲ–ಜಲ, ಮಾನವ ಸಂಪನ್ಮೂಲಗಳನ್ನು ಬಳಸಿಕೊಂಡು ವ್ಯವಹಾರ ನಡೆಸುವ ಕೇಂದ್ರೋದ್ಯಮಗಳು, ಮೊದಲು ಇಲ್ಲಿನ ಭಾಷೆಗೆ ಗೌರವ ಕೊಡಬೇಕು. ಈ ಸಂಸ್ಥೆಗಳು ಒಕ್ಕೂಟ ತತ್ತ್ವವನ್ನು ಗೌರವಿಸುವುದು ವಿಫಲವಾದಲ್ಲಿ, ಅಂತಹ ವೈಫಲ್ಯಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕೈಗೊಳ್ಳುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಲಾಗುವುದು’ ಎಂದು ಹೇಳಿದ್ದಾರೆ.
‘ಸಿಎಜಿ ಕಚೇರಿಯಲ್ಲಿ ಕನ್ನಡ ಕಡೆಗಣನೆ’
‘ಅನ್ಯ ಭಾಷಿಕ ಸಿಬ್ಬಂದಿಯಿಂದ ತುಂಬಿರುವ ಬೆಂಗಳೂರಿನ ಮಹಾಲೇಖಪಾಲರ (ಸಿಎಜಿ) ಕಚೇರಿ ಕನ್ನಡಕ್ಕೆ ಮೊದಲ ಆದ್ಯತೆ ನೀಡುವುದನ್ನು ರೂಢಿಸಿಕೊಳ್ಳಬೇಕು. ಅನ್ಯ ಭಾಷಿಕ ಸಿಬ್ಬಂದಿ ಸ್ಥಳೀಯ ಸರ್ಕಾರಿ ನೌಕರರೊಂದಿಗೆ ವ್ಯವಹರಿಸುವಾಗ ಕನ್ನಡ ಬಳಸುವುದು ಅನಿವಾರ್ಯ. ಪ್ರಾಧಿಕಾರದ ನಿಯೋಗವು ಕಳೆದ ಭೇಟಿಯ ಸಂದರ್ಭದಲ್ಲಿ ಸ್ಪಷ್ಟ ಸೂಚನೆ ನೀಡಿದರೂ ಈವರೆಗೂ ರಚನಾತ್ಮಕ ಬದಲಾವಣೆ ಕಾಣದಿರುವುದು ವಿಷಾದನೀಯ’ ಎಂದು ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ. ಈ ಬಗ್ಗೆ ಪ್ರಧಾನ ಮಹಾಲೇಖಪಾಲ ರಾಜೀವ್ ಕುಮಾರ್ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ. ‘ಮಹಾಲೇಖಪಾಲರ ಕಚೇರಿಯಲ್ಲಿ ಕೂಡಲೇ ಕನ್ನಡ ಕಲಿಕಾ ಘಟಕಗಳನ್ನು ತೆರೆಯಬೇಕು. ಜಾಲತಾಣಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕು. ರಾಜ್ಯದೊಳಗೆ ವ್ಯವಹರಿಸುವ ದೈನಂದಿನ ಪತ್ರಗಳಲ್ಲಿ ಕನ್ನಡವನ್ನು ಬಳಸಬೇಕು. ತ್ರಿಭಾಷಾ ಸೂತ್ರವನ್ನು ಕಡ್ಡಾಯವಾಗಿ ಅನುಸರಿಸಬೇಕು. ಇದನ್ನು ಪರಿಶೀಲಿಸಲು ಪ್ರಾಧಿಕಾರದ ನಿಯೋಗ ಶೀಘ್ರದಲ್ಲೆ ಮಹಾಲೇಖಪಾಲರ ಕಚೇರಿಗೆ ಭೇಟಿ ನೀಡಲಿದೆ’ ಎಂದು ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಸ್ವಾಮ್ಯದ ಭಾರತ್ ಹೆವಿ ಎಲೆಕ್ಟ್ರಿಕಲ್ ಲಿಮಿಟೆಡ್ (ಬಿ.ಎಚ್.ಇ.ಎಲ್) ಆವರಣದಲ್ಲಿ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವ ಆಚರಣೆಗೆ ಅನುಮತಿ ನೀಡುವಂತೆ ಕೋರಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ಬಿಎಚ್ಇಎಲ್ ಆಡಳಿತ ಮಂಡಳಿಗೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.
ಈ ಸಂಬಂಧ ‘ಬಿಎಚ್ಇಎಲ್ ನೌಕರರ ಕನ್ನಡ ಸಂಘ’ದ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ಕೆಲ ಕಾಲ ಅರ್ಜಿದಾರರ ಪರ ವಾದ ಆಲಿಸಿದ ನ್ಯಾಯಪೀಠ ಬಿಎಚ್ಇಎಲ್ ಮುಖ್ಯ ಆಡಳಿತಾಧಿಕಾರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆಯನ್ನು ಗುರುವಾರಕ್ಕೆ (ಅ.30)ಕ್ಕೆ ಮುಂದೂಡಿತು.
ಏನಿದು ಅರ್ಜಿ?: ‘ಬಿಎಚ್ಇಎಲ್ ಆವರಣದಲ್ಲಿ 42 ವರ್ಷಗಳಿಂದ ಕನ್ನಡ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ಇದಕ್ಕೆ ಪ್ರತಿ ವರ್ಷ ಆಡಳಿತ ಮಂಡಳಿ ಆರ್ಥಿಕ ನೆರವು ನೀಡುತ್ತಾ ಬಂದಿದೆ. ಆದರೆ, ಈ ಬಾರಿ ನಮ್ಮ ಮನವಿಯನ್ನು ಪರಿಗಣಿಸಲಾಗಿಲ್ಲ. ನವೆಂಬರ್ 1ರಂದು ಬಿಎಚ್ಇಎಲ್ ಅವರಣದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ, ಕನ್ನಡ ಧ್ವಜಾರೋಹಣಕ್ಕೆ ಅನುಮತಿ ನೀಡಬೇಕು ಹಾಗೂ ಅದಕ್ಕೆ ಬೇಕಾದ ಅನುದಾನವನ್ನು ಮಂಜೂರು ಮಾಡಲು ಆಡಳಿತ ಮಂಡಳಿಗೆ ನಿರ್ದೇಶನ ನೀಡಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.