ADVERTISEMENT

ಯುವತಿಗೆ ಬ್ಲ್ಯಾಕ್‌ಮೇಲ್: ಆರೋಪಿಗೆ ಧರ್ಮದೇಟು

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2019, 20:00 IST
Last Updated 28 ಸೆಪ್ಟೆಂಬರ್ 2019, 20:00 IST
ಸುನೀಲ್
ಸುನೀಲ್   

ಬೆಂಗಳೂರು: ಯುವತಿ ಜೊತೆ ತೆಗೆದುಕೊಂಡಿದ್ದ ಫೋಟೊ ಮತ್ತು ವಿಡಿಯೊ ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಎನ್ನಲಾದಸುನೀಲ್ ಎಂಬಾತನನ್ನು ಸಾರ್ವಜನಿಕರೇ ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

‘ಸ್ಥಳೀಯಬಿಗ್‌ ಬಜಾರ್ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ಸುನೀಲ್, ತನ್ನ ಸಹೋದ್ಯೋಗಿಯೇ ಆಗಿದ್ದ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದ. ಸ್ನೇಹಿತರಾಗಿದ್ದ ಅವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದರು’ ಎಂದು ರಾಮಮೂರ್ತಿನಗರ ಪೊಲೀಸರು ಹೇಳಿದರು.

‘ಸ್ನೇಹಿತರ ಜನ್ಮದಿನ ಇರುವುದಾಗಿ ಹೇಳಿ ಸುನೀಲ್,ಇದೇ 18ರಂದು ಯುವತಿಯನ್ನು ತನ್ನ ಬಳಿ ಕರೆಸಿಕೊಂಡಿದ್ದ. ಅದೇ ವೇಳೆ ಯುವತಿ ಜೊತೆಗೆ ಖಾಸಗಿ ಕ್ಷಣ ಕಳೆದಿದ್ದ. ಅದರ ಫೋಟೊ ಹಾಗೂ ವಿಡಿಯೊ ಚಿತ್ರೀಕರಣ ಮಾಡಿಟ್ಟುಕೊಂಡಿದ್ದ.’

ADVERTISEMENT

‘ಮರುದಿನದಿಂದಲೇ ಯುವತಿಗೆ ಕಿರುಕುಳ ನೀಡಲಾರಂಭಿಸಿದ್ದ. ಫೋಟೊ ಹಾಗೂ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡುವುದಾಗಿ ಬ್ಲ್ಯಾಕ್‌ಮೇಲ್ ಮಾಡಿ ಲೈಂಗಿಕ ದೌರ್ಜನ್ಯ ಎಸಗಲಾರಂಭಿಸಿದ್ದ. ವಿಷಯ ಯಾರಿಗೂ ಹೇಳದಂತೆ ಜೀವ ಬೆದರಿಕೆಯೊಡ್ಡಿದ್ದಾಗಿ ಯುವತಿ ಹೇಳಿಕೆ ನೀಡಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದರು.

‘ಆರೋಪಿ ಸುನೀಲ್‌ನ ಕಿರುಕುಳ ಇತ್ತೀಚೆಗೆ ಹೆಚ್ಚಾಗಿತ್ತು. ಇದರಿಂದ ನೊಂದ ಯುವತಿ, ಸಂಘಟನೆಯೊಂದರ ಸದಸ್ಯರಿಗೆ ವಿಷಯ ತಿಳಿಸಿದ್ದರು. ಸದಸ್ಯರೇ ಆರೋಪಿ ಮನೆಗೆ ನುಗ್ಗಿ ಥಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಹೋದ ಹೊಯ್ಸಳ ವಾಹನದ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದಾರೆ’ ಎಂದು ವಿವರಿಸಿದರು.

ಎಫ್‌ಐಆರ್‌ ದಾಖಲು: ‘ಆರೋಪಿ ವಿರುದ್ಧ ಯುವತಿ ದೂರು ನೀಡಿದ್ದಾರೆ. ಎಫ್‌ಐಆರ್‌ ದಾಖಲಿಸಿಕೊಂಡು ವಿಚಾರಣೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.