ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟದ ದೃಶ್ಯಯು ಸಿ.ಸಿ ಕ್ಯಾಮರಾದಲಿ ಸೆರೆಯಾಗಿದೆ.
ಬೆಂಗಳೂರು: ಬ್ರೂಕ್‌ಫೀಲ್ಡ್‌ನಲ್ಲಿರುವ ದಿ ರಾಮೇಶ್ವರಂ ಕೆಫೆ ಹೋಟೆಲ್‌ನಲ್ಲಿ ಬಾಂಬ್ ಇರಿಸಿ ಪರಾರಿಯಾಗಿರುವ ಶಂಕಿತನ ಪತ್ತೆಗಾಗಿ ಪೊಲೀಸರ ಎಂಟು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ನಗರ ಹಾಗೂ ಹೊರ ರಾಜ್ಯಗಳಲ್ಲಿ ಹುಡುಕಾಟ ಆರಂಭವಾಗಿದೆ.
ಕೆಫೆಗೆ ಶುಕ್ರವಾರ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಬಂದಿದ್ದರು. ಸಿಬ್ಬಂದಿ, ತಮ್ಮ ಕೆಲಸದಲ್ಲಿ ನಿರತರಾಗಿದ್ದರು. ಗ್ರಾಹಕರ ತಟ್ಟೆಗಳನ್ನು ತೊಳೆಯಲು ಮೀಸಲಿಟ್ಟ ಜಾಗದ ಪಕ್ಕದಲ್ಲಿದ್ದ ಕಟ್ಟೆ ಮೇಲೆ ಬಾಂಬ್ ಸ್ಫೋಟಗೊಂಡಿತ್ತು. ಎಲ್ಲರೂ ದಿಕ್ಕಾಪಾಲಾಗಿ ಹೋಟೆಲ್‌ನಿಂದ ಹೊರಗೆ ಓಡಿ ಬಂದರು. ಘಟನಾ ಸ್ಥಳದಲ್ಲಿದ್ದ ಗಾಯಾಳುಗಳನ್ನು ಸ್ಥಳೀಯರು ಹೊರಗೆ ಕರೆತಂದು ಆಸ್ಪತ್ರೆಗೆ ದಾಖಲಿಸಿದರು.
‘ಕುಟುಂಬಸ್ಥರ ಜೊತೆ ಊಟ ಮಾಡಲು ಕೆಫೆಗೆ ಬಂದಿದ್ದೆ. ಎಲ್ಲರೂ ಊಟ ತೆಗೆದುಕೊಂಡು ಕಟ್ಟೆ ಮೇಲೆ ಕುಳಿತು ತಿನ್ನುತ್ತಿದ್ದೆವು. ಸ್ವಲ್ಪ ದೂರದಲ್ಲಿದ್ದ ಕಟ್ಟೆ ಮೇಲೆ ಸ್ಫೋಟ ಉಂಟಾಗಿ, ದಟ್ಟ ಹೊಗೆ ಬಂತು. ಹೊಗೆ ಹೋದ ನಂತರ ಗಾಯಾಳುಗಳು ಬಿದ್ದಿದ್ದು ಕಂಡಿತು’ ಎಂದು ಪ್ರತ್ಯಕ್ಷದರ್ಶಿ ನಿಖಿಲ್ ಹೇಳಿದರು.
‘ತೀವ್ರ ಗಾಯಗೊಂಡಿದ್ದ ಮಹಿಳೆಯ ಮುಖ, ಕಾಲು, ಕೈ ಹಾಗೂ ಇತರೆ ಭಾಗಕ್ಕೆ ಗಾಯವಾಗಿತ್ತು. ಉಳಿದವರ ಬಟ್ಟೆಗಳು ಹರಿದಿದ್ದವು. ಮೈಗೂ ಗಾಯವಾಗಿತ್ತು. ಎಲ್ಲರನ್ನೂ ಆಟೊದಲ್ಲಿ ಆಸ್ಪತ್ರೆಗೆ ಕಳುಹಿಸಲಾಯಿತು’ ಎಂದರು.
‘ಆರೋಪಿ ಹೋದ ಗಂಟೆ ನಂತರ ಮಧ್ಯಾಹ್ನ 12.55ಕ್ಕೆ ಬಾಂಬ್ ಸ್ಫೋಟಗೊಂಡಿದೆ. ಶಂಕಿತ, ಮೊದಲೇ ಟೈಮರ್ ನಿಗದಿ ಮಾಡಿ ಕೆಫೆಗೆ ಬಂದು ಬಾಂಬ್ ಇರಿಸಿ ಹೋಗಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ’ ಎಂದು ಮಾಹಿತಿ ನೀಡಿದರು.
ಘಟನಾ ಸ್ಥಳಕ್ಕೆ ಹಾಗೂ ಗಾಯಾಳುಗಳು ದಾಖಲಾಗಿರುವ ಆಸ್ಪತ್ರೆಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಗೃಹ ಸಚಿವ ಜಿ. ಪರಮೇಶ್ವರ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ವಿರೋಧ ಪಕ್ಷದ ನಾಯಕ ಆರ್.ಅಶೋಕ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಭೇಟಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.