ADVERTISEMENT

ರ‍್ಯಾಂಡಮ್‌ ಪರೀಕ್ಷೆ: 8 ಮಂದಿಯಲ್ಲಿ ಸೋಂಕು ಪತ್ತೆ

​ಪ್ರಜಾವಾಣಿ ವಾರ್ತೆ
Published 24 ಮೇ 2020, 18:40 IST
Last Updated 24 ಮೇ 2020, 18:40 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್‌ 19 ಸೋಂಕಿತರ ಜೊತೆ ಸಂಪರ್ಕದ ಹಿನ್ನೆಲೆಯನ್ನೇ ಹೊಂದಿರದವರನ್ನು ಪರೀಕ್ಷೆಗೆ ಒಳಪಡಿಸಿದಾಗ ಎಂಟು ಮಂದಿಗೆ ಕೋವಿಡ್‌ 19 ಇರುವುದು ಇದುವರೆಗೆ ಧೃಡಪಟ್ಟಿದೆ.

ಪಾದರಾಯನಪುರ, ಹೊಂಗಸಂದ್ರ ಹಾಗೂ ಮಂಗಮ್ಮನ ಪಾಳ್ಯದಲ್ಲಿ ಕೆಲವು ರೋಗಿಗಳು ಸೋಂಕಿತರ ಜೊತೆ ಸಂಪರ್ಕ ಹೊಂದಿದ ಯಾವುದೇ ಹಿನ್ನೆಲೆ ಹೊಂದಿರಲಿಲ್ಲ. ಹಾಗಾಗಿ ಈ ಮೂರು ವಾರ್ಡ್‌ಗಳಲ್ಲಿ ಸಮುದಾಯಕ್ಕೆ ಸೋಂಕು ಹರಡಿರುವ ಸಂದೇಹವಿದೆ. ಈ ಕಾರಣದಿಂದಾಗಿ ಈ ವಾರ್ಡ್‌ಗಳಲ್ಲಿ ಕೋವಿಡ್‌ 19 ಸೋಂಕಿತರ ಜೊತೆ ನೇರ ಅಥವಾ ಪರೋಕ್ಷ ಸಂಪರ್ಕ ಇಲ್ಲದವರ ಗಂಟಲ ದ್ರವವನ್ನೂ ಸಂಗ್ರಹಿಸಿ (ರ‍್ಯಾಂಡಮ್‌ ಮಾದರಿ ಸಂಗ್ರಹ) ತಪಾಸಣೆಗೆ ಒಳಪಡಿಸಲಾಗುತ್ತಿದೆ.

ಪಾದರಾಯನಪುರ ವಾರ್ಡ್‌ನಲ್ಲಿ ಮೇ 14ರಿಂದ ರ್‍ಯಾಂಡಮ್‌ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸುವ ವ್ಯವಸ್ಥೆಯನ್ನುನ ತೀವ್ರಗೊಳಿಸಲಾಗಿದೆ. ಈ ವೇಳೆ ಸೋಂಕಿತರ ಜೊತೆ ನೇರ ಸಂಪರ್ಕ ಇಲ್ಲದ ಒಬ್ಬ ಮಹಿಳೆಗೆ (30 ವರ್ಷ) ಮಾತ್ರ ಸೋಂಕು ಕಾಣಿಸಿಕೊಂಡಿರುವುದು ಭಾನುವಾರ ದೃಢಪಟ್ಟಿದೆ. ಈ ಹಿಂದೆ ಈ ವಾರ್ಡ್‌ನಲ್ಲಿ ಆರು ಮಂದಿಗೆ ಸೋಂಕು ತಗುಲಿದ ಮೂಲ ಪತ್ತೆಯಾಗಿಲ್ಲ.

ADVERTISEMENT

‘ರಂಜಾನ್‌ ಹಬ್ಬದ ಹಿನ್ನೆಲೆಯಲ್ಲಿ ಈ ವಾಡ್‌ನಲ್ಲಿ ಭಾನುವಾರ ಹಾಗೂ ಸೋಮವಾರ ಯಾರನ್ನೂ ತಪಾಸಣೆಗೆ ಒಳಪಡಿಸುತ್ತಿಲ್ಲ. ಮಂಗಳವಾರದ ಬಳಿಕ ಎಂದಿನಂತೆ ರ‍್ಯಾಂಡಮ್‌ ತಪಾಸಣೆ ಮುಂದುವರಿಯಲಿದೆ’ ಎಂದು ಬಿಬಿಎಂಪಿ ಪಶ್ಚಿಮ ವಲಯದ ಆರೋಗ್ಯಾಧಿಕಾರಿ ಮನೋರಂಜನ್‌ ಹೆಗ್ಡೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.