ಬೆಂಗಳೂರು: ಗೃಹಿಣಿ ಮೇಲೆ ಅತ್ಯಾಚಾರ ಮಾಡಿದ ಆರೋಪದಡಿ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಜಾವಗಲ್ ಹೋಬಳಿಯ ಗೊಲ್ಲರಹಳ್ಳಿ ಗ್ರಾಮದ ಕರಗುಂದ ಗ್ರಾಮ ಪಂಚಾಯಿತಿ ಸದಸ್ಯ ದಯಾನಂದ ಅಲಿಯಾಸ ಡಾಬಾ ದಯಾನಂದ (39) ಎಂಬಾತನನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ.
‘ನಗರದ ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ಸಂತ್ರಸ್ತೆಗೆ ಕೆಲ ತಿಂಗಳ ಹಿಂದೆ ಆರೋಪಿ ಪರಿಚಯವಾಗಿದ್ದಾನೆ. ಠಾಣೆಯ ವ್ಯಾಪ್ತಿಯಲ್ಲಿ ವಾಸವಿರುವ ಮಹಿಳೆಗೆ ಯಾವುದೋ ದೋಷವಿದೆ ಎಂದು ಸುಳ್ಳು ಹೇಳಿ ಆಗಾಗ್ಗೆ ನಿಂಬೆಹಣ್ಣು ಮಂತ್ರಿಸಿ, ತಲೆದಿಂಬಿನ ಕೆಳಗೆ ಇಟ್ಟುಕೊಳ್ಳುವಂತೆ ಕೊಡುತ್ತಿದ್ದ. ಹಲವು ಬಾರಿ ಆರೋಪಿ ಬೆಂಗಳೂರಿಗೆ ಬಂದು ಮಹಿಳೆಯನ್ನು ಭೇಟಿ ಮಾಡಿ ಮಂತ್ರಿಸಿದ ನಿಂಬೆಹಣ್ಣು ಕೊಟ್ಟು ಹೋಗುತ್ತಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ.
‘ಈತ ಅರಸೀಕೆರೆಯ ಪುರದಮ್ಮ ದೇವಸ್ಥಾನದಲ್ಲಿ ಅಮಾವಾಸ್ಯೆ ಹಾಗೂ ಇತರೆ ವಿಶೇಷ ದಿನಗಳಲ್ಲಿ ಪೂಜೆ ಮಾಡುತ್ತಿದ್ದ. ಜೈ ಕರ್ನಾಟಕ ಜನಪರ ವೇದಿಕೆ ಎಂಬ ಸಂಘಟನೆಯ ಅರಸೀಕೆರೆ ಘಟಕದ ಅಧ್ಯಕ್ಷನೂ ಆಗಿದ್ದಾನೆ. ದೋಷ ನಿವಾರಣೆ ಪೂಜೆ ಮಾಡುವುದಾಗಿ ಹೇಳಿ ಮಹಿಳೆಯಿಂದ ₹ 1.20 ಲಕ್ಷ ಹಣವನ್ನು ಫೋನ್ ಪೇ ಮೂಲಕ ಹಾಕಿಸಿಕೊಂಡಿದ್ದಾನೆ. ಅಲ್ಲದೇ ಹಲವು ಬಾರಿ ಅವರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ’ ಎಂದು ಪೊಲೀಸರು ಹೇಳಿದ್ದಾರೆ.
‘ಮೂರು ದಿನಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಆರೋಪಿ, ಮಹಿಳೆಯನ್ನು ಲಾಡ್ಜ್‌ಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ. ಅಲ್ಲದೇ ಅವರ ಬೆತ್ತಲೆ ಚಿತ್ರವನ್ನು ಮೊಬೈಲ್‌ನಲ್ಲಿ ಸೆರೆಹಿಡಿದು, ಯಾರಿಗಾದರೂ ವಿಷಯ ತಿಳಿಸಿದರೆ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾನೆ. ಮಹಿಳೆಗೆ ಈಗಾಗಲೇ ಮದುವೆ ಆಗಿದೆ. ಆದರೂ ಆತ ತನ್ನನ್ನು ಮದುವೆ ಆಗುವಂತೆ ಪೀಡಿಸುತ್ತಿದ್ದ. ಈ ಸಂಬಂಧ ಮಹಿಳೆ ದೂರು ನೀಡಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.