ಬೆಂಗಳೂರು: ‘ಅತ್ಯಾಚಾರ ಹಾಗೂ ಹನಿಟ್ರ್ಯಾಪ್ ಪ್ರಕರಣದಲ್ಲಿ ಆರೋಪಿಯಾಗಿರುವ ಶಾಸಕ ಮುನಿರತ್ನ ಅವರನ್ನು ಶಾಸನಸಭೆಯಿಂದ ದೂರವಿರಿಸಬೇಕು’ ಎಂದು ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಆಗ್ರಹಿಸಿದರು.
ಕಾಂಗ್ರೆಸ್ ಮುಖಂಡ ಲಗ್ಗೆರೆ ನಾರಾಯಣಸ್ವಾಮಿ, ಬಿಬಿಎಂಪಿ ಮಾಜಿ ಸದಸ್ಯ ವೇಲುನಾಯ್ಕರ್ ಅವರ ಜತೆಗೆ ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂತ್ರಸ್ತೆ, ‘ಮುನಿರತ್ನ ಅವರ ಮೇಲೆ ರಾಮನಗರದಲ್ಲಿ ದೂರು ನೀಡಲಾಗಿತ್ತು. ಪೊಲೀಸ್ ಕಮಿಷನರ್ ಅವರಿಗೂ ಮಾಹಿತಿ ಒದಗಿಸಿದ್ದೆ. ಬಳಿಕ ಮುನಿರತ್ನ ಅವರು ನನಗೆ ದೂರವಾಣಿ ಕರೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಮಕ್ಕಳನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದರು. ಹೆಣ್ಣು ಮಕ್ಕಳನ್ನು ಅವರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ’ ಎಂದು ದೂರಿದರು.
ಲಗ್ಗೆರೆ ನಾರಾಯಣಸ್ವಾಮಿ, ‘ಕೀಳುಮಟ್ಟದ ವ್ಯಕ್ತಿತ್ವದ ಮುನಿರತ್ನ ಅವರು ಪಾಲಿಕೆ ಮಾಜಿ ಸದಸ್ಯರು, ಶಾಸಕರು, ಪೊಲೀಸ್ ಅಧಿಕಾರಿಗಳ ವಿರುದ್ದ ಹನಿಟ್ರ್ಯಾಪ್ ಮಾಡಿದ್ದಾರೆ. ಅವರ ವಿರುದ್ಧ ನೂರಾರು ಪ್ರಕರಣಗಳಿವೆ. ಅವರಿಗೆ ಕಾನೂನು ಅನ್ವಯವಾಗುವುದಿಲ್ಲವೆ? ನಮ್ಮಗೆಲ್ಲ ಮುನಿರತ್ನ ಅವರಿಂದ ಪ್ರಾಣಭಯವಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.