ADVERTISEMENT

ವಿದ್ಯಾರ್ಥಿನಿ ಮೇಲೆ ಅತ್ಯಾಚಾರ; ಯುವಕ ಸೆರೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2018, 20:03 IST
Last Updated 17 ಡಿಸೆಂಬರ್ 2018, 20:03 IST

ಬೆಂಗಳೂರು:‌ ಪುಸ್ತಕ ಜೆರಾಕ್ಸ್ ಮಾಡಿಸಲು ಅಂಗಡಿಗೆ ತೆರಳುತ್ತಿದ್ದ 8ನೇ ತರಗತಿ ವಿದ್ಯಾರ್ಥಿನಿಯನ್ನು ಅಪಹರಿಸಿ, ಅತ್ಯಾಚಾರ ಎಸಗಿದ ಆರೋಪದಡಿ ನವೀನ್ ಕುಮಾರ್ (19) ಎಂಬಾತನನ್ನು ಚಂದ್ರಾಲೇಔಟ್ ಪೊಲೀಸರು ಬಂಧಿಸಿದ್ದಾರೆ.

ರಾಯಚೂರಿನ ದೇವದುರ್ಗದವನಾದ ನವೀನ್, ಅಜ್ಜಿ ಜತೆ ಬನಶಂಕರಿಯಲ್ಲಿ ನೆಲೆಸಿದ್ದ. ಸ್ನೇಹಿತರ ಭೇಟಿಗೆ ಆಗಾಗ್ಗೆ ಚಂದ್ರಾಲೇಔಟ್ ಠಾಣೆ ವ್ಯಾಪ್ತಿಗೆ ಬರುತ್ತಿದ್ದ ಆತ, ಮಹಿಳಾ ವ್ಯಾಪಾರಿಗಳನ್ನು ಬೆದರಿಸಿ ಸುಲಿಗೆಯನ್ನೂ ಮಾಡುತ್ತಿದ್ದ. ಸಣ್ಣ ಪುಟ್ಟ ಪುಂಡಾಟ ಮಾಡುತ್ತಿದ್ದರೂ ಈತನ ವಿರುದ್ಧ ಯಾರೂ ದೂರು ಕೊಟ್ಟಿರಲಿಲ್ಲ. ಶನಿವಾರ 13 ವರ್ಷದ ಬಾಲಕಿ ಮೇಲೆ ಪೈಶಾಚಿಕ ಕೃತ್ಯ ಎಸಗಿ ಪರಾರಿಯಾಗಿದ್ದ ನವೀನ್‌ನನ್ನು, ಸೋಮವಾರ ಮಧ್ಯಾಹ್ನ ವಶಕ್ಕೆ ಪಡೆಯಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

ಬಾಯಿ ಮುಚ್ಚಿ ಎಳೆದೊಯ್ದ: ‘ಆ ಹುಡುಗ ಹಲವು ದಿನಗಳಿಂದ ನನಗೆ ತೊಂದರೆ ಕೊಡುತ್ತಿದ್ದ. ಶಾಲೆಗೆ ಹೋಗುವಾಗ ಹಿಂದೆ ಬಂದು ಚುಡಾಯಿಸುತ್ತಿದ್ದ. ತಾಯಿಗೆ ಹೇಳುವುದಾಗಿ ಎಚ್ಚರಿಸಿದ ಬಳಿಕ ಕೆಲ ದಿನಗಳಿಂದ ಕಾಣಿಸಿಕೊಂಡಿರಲಿಲ್ಲ’ ಎಂದು ಸಂತ್ರಸ್ತೆ ಹೇಳಿಕೆ ಕೊಟ್ಟಿರುವುದಾಗಿ ಪೊಲೀಸರು ಮಾಹಿತಿ ನೀಡಿದರು.

ADVERTISEMENT

‘ಶಾಲೆಯಲ್ಲಿ ಆಂತರಿಕ ಪರೀಕ್ಷೆ ಇದ್ದುದರಿಂದ ನೋಟ್ಸ್ ಜೆರಾಕ್ಸ್ ಮಾಡಿಸ ಬೇಕಿತ್ತು. ಮಧ್ಯಾಹ್ನ 2 ಗಂಟೆಗೆ ಒಬ್ಬಳೇ ಅಂಗಡಿಗೆ ನಡೆದು ಹೋಗುತ್ತಿದ್ದಾಗ ಒಮ್ಮೆಲೆ ಎದುರಾದ ಆತ, ‘ನಿನ್ನ ಹತ್ತಿರ ಮಾತನಾಡಬೇಕು. ಏನೋ ಕೆಲಸವಿದೆ ಬಾ’ ಎಂದು ಕೈ ಹಿಡಿದು ಎಳೆದ. ನಾನು ಹೋಗಲು ನಿರಾಕರಿಸಿ ನೆರವಿಗಾಗಿ ಕೂಗಿಕೊಂಡೆ. ಆದರೆ, ರಸ್ತೆಯಲ್ಲಿ ಯಾರೊಬ್ಬರೂ ಇರಲಿಲ್ಲ.’

‘ಈ ವೇಳೆ ಬಾಯಿ ಮುಚ್ಚಿ ನನ್ನನ್ನು ಖಾಲಿ ನಿವೇಶನದ ಶೆಡ್‌ಗೆ ಹೊತ್ತೊಯ್ದ ಆತ, ‘ನಾನು ಹೇಳಿದಂತೆ ನಡೆದುಕೊಳ್ಳ
ದಿದ್ದರೆ ನಿನ್ನ ತಮ್ಮ ಹಾಗೂ ತಾಯಿಯನ್ನು ಮುಗಿಸಿಬಿಡುತ್ತೇನೆ’ ಎಂದು ಬೆದರಿಸಿ ಅತ್ಯಾಚಾರ ಎಸಗಿದ. ನಾನು ನೆರ
ವಿಗಾಗಿ ಕೂಗಿಕೊಳ್ಳುತ್ತಲೇ ಇದ್ದೆ. ಆಗ ಮೂರ್ನಾಲ್ಕು ಜನ ಬಂದು ನನ್ನನ್ನು ರಕ್ಷಿಸಿದರು’ ಎಂದು ಸಂತ್ರಸ್ತೆ ವಿವರಿಸಿದ್ದಾಳೆ.

ಪೆಟ್ಟು ತಿಂದು ಪರಾರಿ: ಸ್ಥಳೀಯರು ನವೀನ್‌ಗೆ ಹಿಗ್ಗಾಮುಗ್ಗಾ ಥಳಿಸಿದ್ದರು. ಈ ಹಂತದಲ್ಲಿ ಆತ ಕೈಲಿ ಕಲ್ಲು ಹಿಡಿದು ಎಲ್ಲರನ್ನೂ ಬೆದರಿಸಿ ಅಲ್ಲಿಂದ ಪರಾರಿಯಾಗಿದ್ದ. ನಂತರ ಸಂತ್ರಸ್ತೆ ಮನೆಗೆ ತೆರಳಿ ಘಟನೆ ಬಗ್ಗೆ ತಾಯಿಗೆ ವಿವರಿಸಿದ್ದಳು. ಸ್ಥಳೀಯರು ಹಾಗೂ ಸಂಬಂಧಿಕರ ಬಳಿ ಚರ್ಚಿಸಿ ರಾತ್ರಿ 9.30ರ ಸುಮಾರಿಗೆ ತಾಯಿ ಚಂದ್ರಾಲೇಔಟ್ ಠಾಣೆಗೆ ದೂರು ಕೊಟ್ಟಿದ್ದರು. ತನಿಖೆ ಕೈಗೆತ್ತಿಕೊಂಡ ಪೊಲೀಸರು, ನವೀನ್‌ನ ಗೆಳೆಯರ ಬಳಗದಿಂದ ಸಿಕ್ಕ ಸುಳಿವು ಆಧರಿಸಿ ಆರೋಪಿಯನ್ನು ಸೆರೆಹಿಡಿದಿದ್ದಾರೆ.

ವೈದ್ಯಕೀಯ ಪರೀಕ್ಷೆಯಲ್ಲಿ ದೃಢ

‘ನವೀನ್ ವಿರುದ್ಧ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ (ಪೋಕ್ಸೊ), ಅತ್ಯಾಚಾರ (ಐಪಿಸಿ 376), ಅಪಹರಣ (366) ಹಾಗೂ ಲೈಂಗಿಕ ಕಿರುಕುಳ (354) ಆರೋಪಗಳಡಿ ಎಫ್‌ಐಆರ್ ದಾಖಲಿಸಿದ್ದೇವೆ. ಸಂತ್ರಸ್ತೆ ಹಾಗೂ ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಲೈಂಗಿಕ ದೌರ್ಜನ್ಯ ನಡೆದಿರುವುದು ದೃಢವಾಗಿದೆ’ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.