ADVERTISEMENT

ರಸ್ತೆ ಕಾಮಗಾರಿಗಳ ದಿಢೀರ್‌ ವೀಕ್ಷಿಸಿದ ಸಿಎಂ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 14 ಜೂನ್ 2022, 19:33 IST
Last Updated 14 ಜೂನ್ 2022, 19:33 IST
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಸ್ತೆ ಕಾಮಗಾರಿ ತಪಾಸಣೆ ನಡೆಸಿದರು
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಸ್ತೆ ಕಾಮಗಾರಿ ತಪಾಸಣೆ ನಡೆಸಿದರು   

ಬೆಂಗಳೂರು: ನಗರದ ರಸ್ತೆಗಳ ದುರವಸ್ಥೆ ಬಗ್ಗೆ ಉದ್ಯಮಿಗಳಾದ ಕಿರಣ್‌ ಮಜುಂದಾರ್‌ ಷಾ ಮತ್ತು ಟಿ.ವಿ.ಮೋಹನ್‌ದಾಸ್‌ ಪೈ ಅವರು ಇತ್ತೀಚೆಗೆ ಟ್ವೀಟ್ ಮೂಲಕ ಸರ್ಕಾರವನ್ನು ತರಾಟೆ ತೆಗೆದುಕೊಂಡ ಬೆನ್ನಲ್ಲೇ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ದಿಢೀರನೆ ಹಲವು ರಸ್ತೆಗಳ ಕಾಮಗಾರಿಯನ್ನು ಪರಿಶೀಲಿಸಿದರು.

ರಾಷ್ಟ್ರಪತಿ ರಾಮನಾಥ್ ಕೋವಿಂದ್‌ ಅವರನ್ನು ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಬೀಳ್ಕೊಟ್ಟ ಬಳಿಕ ಎಚ್‌ಎಎಲ್‌ ಸುತ್ತಮುತ್ತ, ಹೊರ ವರ್ತುಲ ರಸ್ತೆ ಮತ್ತು ಕೆಲವು ಪ್ರಮುಖ ರಸ್ತೆಗಳಲ್ಲಿ ನಡೆಯುತ್ತಿರುವ ಕಾಮಗಾರಿ
ಗಳನ್ನು ಪರಿಶೀಲಿಸಿ, ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದರು.

ಎಚ್‌ಎಎಲ್‌ ವಿಮಾನ ನಿಲ್ದಾಣದಿಂದ ನೇರವಾಗಿ ಮಾರತ್‌ಹಳ್ಳಿಯ ಸೇತುವೆಗೆ ಭೇಟಿ ನೀಡಿದರು. ಅಲ್ಲಿಂದ ಕುಂದಲಹಳ್ಳಿ
ಯಲ್ಲಿ ನಿರ್ಮಾಣವಾಗುತ್ತಿರುವ ಅಂಡರ್‌ಪಾಸ್‌ ಕಾಮಗಾರಿಯನ್ನೂ ವೀಕ್ಷಿಸಿದರು. ಆ ಬಳಿಕ ಅಧಿಕಾರಿಗಳ ಜತೆ ಮಾತನಾಡಿ, ‘ಬೆಂಗಳೂರು ಹೊರ ವರ್ತುಲ ರಸ್ತೆಯಲ್ಲಿ ವಾಹನ ಸಂಚಾರ ದಟ್ಟಣೆ ದಿನೇ ದಿನೇ ಹೆಚ್ಚಾಗುತ್ತಿದೆ. ಐಟಿ ಕಂಪನಿಗಳು ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿವೆ. ಈಗ ಕೋವಿಡ್‌ ನಿಯಂತ್ರಣಕ್ಕೆ ಬಂದಿರುವುದರಿಂದ ಎಲ್ಲರೂ ಕಚೇರಿಗೆ ಬಂದು ಕೆಲಸ ಮಾಡುತ್ತಿದ್ದಾರೆ. ಇದರಿಂದ ವಾಹನಗಳ ಸಂಚಾರ ಹೆಚ್ಚಾಗಿದೆ. ಆದ್ದರಿಂದ, ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು’ ಎಂದು ಆದೇಶಿಸಿದರು.

ADVERTISEMENT

ಅಲ್ಲಿಂದ ಬಿಬಿಎಂಪಿ ಮುಖ್ಯ ಆಯುಕ್ತರು ಮತ್ತು ಹಿರಿಯ ಅಧಿಕಾರಿಗಳ ಜತೆ ಸರ್ಜಾಪುರ, ಎಚ್‌ಎಸ್‌ಆರ್‌ ಬಡಾವಣೆಗಳಿಗೆ ತೆರಳಿ ಕಾಮಗಾರಿಗಳ ವಸ್ತುಸ್ಥಿತಿಯನ್ನು ಅರಿತು ಅಧಿಕಾರಿಗಳಿಗೆ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

ಪಣತ್ತೂರು ರೈಲ್ವೆ ಕೆಳಸೇತುವೆ ಬಳಿ ರಸ್ತೆ ವಿಸ್ತರಣೆ ಕಾಮಗಾರಿ, ಹೊಸದಾಗಿ ಆಸ್ಫಾಲ್ಟ್‌ ಮಾಡುತ್ತಿರುವ ವಿಎಸ್‌ಎಸ್‌ ರಸ್ತೆ, ಜಕ್ಕಸಂದ್ರ ರಸ್ತೆ ಸೇರಿಸಿಲ್ಕ್‌ ಬೋರ್ಡ್‌ವರೆಗಿನ ಹಲವು ರಸ್ತೆಗಳ ತಪಾಸಣೆ ನಡೆಸಿದರು. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್ ಮತ್ತುಬಿಬಿಎಂಪಿ ಹಿರಿಯ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.