
ಬೆಂಗಳೂರು: ದೇಶದಲ್ಲಿ ಇದೇ ಮೊದಲ ಬಾರಿಗೆ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ ವಾಹನ ನೋಂದಣಿ ಪ್ರಮಾಣ ಪತ್ರ (ಆರ್‌ಸಿ) ಹಾಗೂ ಚಾಲನಾ ಅನುಜ್ಞಾ ಪತ್ರದ (ಡಿಎಲ್) ಸ್ಮಾರ್ಟ್‌ಕಾರ್ಡ್‌ಗಳನ್ನು ಮುದ್ರಿಸುವ ಯಂತ್ರವನ್ನು ಪರಿಚಯಿಸಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಸಾರಿಗೆ ಇಲಾಖೆ ವತಿಯಿಂದ ಸ್ಮಾರ್ಟ್‌ಕಾರ್ಡ್‌ಗೆ ಬುಧವಾರ ಚಾಲನೆ ನೀಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
‘ಒಂದು ದೇಶ, ಒಂದು ಕಾರ್ಡ್ ಇರಬೇಕೆಂದು ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯವು ಎಲ್ಲ ರಾಜ್ಯಗಳಿಗೆ ಸೂಚಿಸಿತ್ತು. ಅದರಂತೆ ಒಂದೇ ಮಾದರಿಯಲ್ಲಿ ಸ್ಮಾರ್ಟ್‌ಕಾರ್ಡ್‌ಗಳನ್ನು ಮುದ್ರಿಸಿ ವಾಹನ ಮಾಲೀಕರಿಗೆ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಮೊದಲು ಪಾಲಿವಿನೈಲ್ ಕ್ಲೋರೈಡ್ ಕಾರ್ಡ್‌ಗಳನ್ನು ವಿತರಿಸಲಾಗುತ್ತಿತ್ತು’ ಎಂದು ಮಾಹಿತಿ ನೀಡಿದರು.
ಬುಧವಾರದಿಂದ ಆರ್‌ಸಿ ಸ್ಮಾರ್ಟ್‌ಕಾರ್ಡ್, ಡಿ.15ರಿಂದ ಡಿಎಲ್ ಸ್ಮಾರ್ಟ್‌ಕಾರ್ಡ್ ವಿತರಿಸಲಾಗುತ್ತದೆ ಎಂದರು.
ಸ್ಮಾರ್ಟ್‌ಕಾರ್ಡ್ ಯಂತ್ರವನ್ನು ಇಟಲಿಯಿಂದ ಸುಮಾರು ₹5.8 ಕೋಟಿ ವೆಚ್ಚದಲ್ಲಿ ಆಮದು ಮಾಡಲಾಗಿದೆ. ಪ್ರಸ್ತುತ ಎರಡು ಯಂತ್ರಗಳಿವೆ. ಶೀಘ್ರವೇ ಇನ್ನೊಂದು ಯಂತ್ರ ಬರಲಿದೆ. ಒಂದು ಯಂತ್ರದಲ್ಲಿ ದಿನಕ್ಕೆ 16 ಸಾವಿರ ಕಾರ್ಡ್‌ಗಳನ್ನು ಮುದ್ರಿಸಲು ಸಾಧ್ಯ ಎಂದು ಹೇಳಿದರು.
ಪ್ರತಿ ಸ್ಮಾರ್ಟ್‌ಕಾರ್ಡ್‌ಗೆ ಶುಲ್ಕ ₹200 ಸಂಗ್ರಹಿಸಲಾಗುತ್ತದೆ. ಆರ್‌ಸಿಯಲ್ಲಿ ನೋಂದಣಿ ಸಂಖ್ಯೆ, ನೋಂದಣಿ ದಿನಾಂಕ, ವಿಳಾಸ, ಸಿಂಧುತ್ವ ಅವಧಿ, ಜನ್ಮ ದಿನಾಂಕ, ರಕ್ತದ ಗುಂಪು, ಮೊಬೈಲ್ ಸಂಖ್ಯೆ, ತುರ್ತು ಸಂಪರ್ಕ, ವಾಹನ ಶೈಲಿ, ಆಸನ ಸಾಮರ್ಥ್ಯ ಸೇರಿದಂತೆ 25ಕ್ಕೂ ಹೆಚ್ಚಿನ ಮಾಹಿತಿ ಇರುತ್ತದೆ. ಜೊತೆಗೆ ಚಿಪ್ ಹಾಗೂ ಕ್ಯೂಆರ್ ಕೋಡ್‌ಗಳಿರಲಿವೆ ಎಂದು ವಿವರಿಸಿದರು.
ಸ್ಮಾರ್ಟ್‌ಕಾರ್ಡ್‌ಗಳನ್ನು ಸಾರಿಗೆ ಆಯುಕ್ತರ ಕಚೇರಿಯಲ್ಲಿನ ಕೇಂದ್ರಿಕೃತ ಮುದ್ರಣ ಸೌಲಭ್ಯ ವ್ಯವಸ್ಥೆಯಡಿಯಲ್ಲಿ ಸೇವಾದಾರರ ಮೂಲಕ ಸ್ಮಾರ್ಟ್‌ಕಾರ್ಡ್‌ಗಳನ್ನು ಮುದ್ರಣ ಮಾಡಿ, ಸಂಬಂಧಪಟ್ಟ ಕಚೇರಿಗೆ ಕಳುಹಿಸಲಾಗುವುದು. ಅಧಿಕಾರಿಗಳು ಪರಿಶೀಲನೆ ನಡೆಸಿದ ಬಳಿಕ ಸ್ಪೀಡ್‌ಪೋಸ್ಟ್ ಮೂಲಕ ಅರ್ಜಿದಾರರಿಗೆ ರವಾನಿಸಲಾಗುವುದು. ಬೆಂಗಳೂರಿನ ಅರ್ಜಿದಾರರಿಗೆ 48 ಗಂಟೆ ಹಾಗೂ ಇತರ ಜಿಲ್ಲೆಗಳ ಅರ್ಜಿದಾರರಿಗೆ ನಾಲ್ಕು ದಿನಗಳಲ್ಲಿ ಸ್ಮಾರ್ಟ್ ಕಾರ್ಡ್ ತಲುಪಿದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.