ADVERTISEMENT

ಮಹದೇವಪುರ ವಲಯ ವ್ಯಾಪ್ತಿಯಲ್ಲಿ 436 ಕಿ.ಮೀ ರಸ್ತೆಗೆ ಮರುಡಾಂಬರೀಕರಣ

ಮಹದೇವಪುರ ವಲಯದಲ್ಲಿ ಗುಂಡಿ ಮುಚ್ಚುವ ಕಾರ್ಯಕ್ಕೆ ಚುರುಕು

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2024, 15:23 IST
Last Updated 13 ಸೆಪ್ಟೆಂಬರ್ 2024, 15:23 IST
ಮಹದೇಪುರ ವಲಯ ಆಯುಕ್ತ ರಮೇಶ ಅವರು ದೊಡ್ಡನೆಕ್ಕುಂದಿ ಬಳಿಯ ಐಟಿಪಿಎಲ್ ರಸ್ತೆಯಲ್ಲಿ ಗುಂಡಿಗಳನ್ನು ಮುಚ್ಚುವ ಕಾರ್ಯವನ್ನು ಶುಕ್ರವಾರ ಪರಿಶೀಲಿಸಿದರು
ಮಹದೇಪುರ ವಲಯ ಆಯುಕ್ತ ರಮೇಶ ಅವರು ದೊಡ್ಡನೆಕ್ಕುಂದಿ ಬಳಿಯ ಐಟಿಪಿಎಲ್ ರಸ್ತೆಯಲ್ಲಿ ಗುಂಡಿಗಳನ್ನು ಮುಚ್ಚುವ ಕಾರ್ಯವನ್ನು ಶುಕ್ರವಾರ ಪರಿಶೀಲಿಸಿದರು   

ಬೆಂಗಳೂರು: ಮಹದೇವಪುರ ವಲಯ ವ್ಯಾಪ್ತಿಯಲ್ಲಿ 436.2 ಕಿ.ಮೀ ಉದ್ದ 4,348 ರಸ್ತೆಗಳ ಮೇಲ್ಮೈ ಪದರ ಹಾಳಾಗಿದ್ದು, ಮರು ಡಾಂಬರೀಕರಣ ಕಾರ್ಯ ಆರಂಭಿಸಲಾಗಿದೆ ಎಂದು ವಲಯ ಮುಖ್ಯ ಎಂಜಿನಿಯರ್‌ ಲೋಕೇಶ್‌ ತಿಳಿಸಿದರು.

ರಸ್ತೆ ಗುಂಡಿಗಳನ್ನು ಮುಚ್ಚುವ ಕಾಮಗಾರಿಗಳನ್ನು ಶುಕ್ರವಾರ ಪರಿಶೀಲಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಮಹದೇವಪುರ ವಲಯ ವ್ಯಾಪ್ತಿಯಲ್ಲಿ 2,136.91 ಕಿ.ಮೀ ರಸ್ತೆ ಇದೆ. ಅದರಲ್ಲಿ 436 ಕಿ.ಮೀ ರಸ್ತೆಗೆ ಡಾಂಬರೀಕರಣ ಮಾಡಿ, ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ. ವಲಯ ವ್ಯಾಪ್ತಿಯಲ್ಲಿ 42 ಹಳ್ಳಿಗಳಿದ್ದು, 748.68 ಕಿ.ಮೀ ಉದ್ದದ ರಸ್ತೆಗಳಿವೆ. ಇದರಲ್ಲಿ 598.68 ಕಿ.ಮೀ ಉದ್ದದ ರಸ್ತೆ ಅಭಿವೃದ್ಧಿಯಾಗಿದ್ದು, 150 ಕಿ.ಮೀ ಉದ್ದದ ರಸ್ತೆ ಅಭಿವೃದ್ಧಿಪಡಿಸಬೇಕಾಗಿದೆ ಎಂದು ಮಾಹಿತಿ ನೀಡಿದರು.

ADVERTISEMENT

ಸಕ್ರಿಯ ಕಾರ್ಯ: ಮಹದೇಪುರ ವಲಯ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗಳು ರಸ್ತೆ ಕತ್ತರಿಸಿರುವ ಭಾಗ ಹೊರತುಪಡಿಸಿ ಉಳಿದೆಲ್ಲಾ ಕಡೆ ರಸ್ತೆ ಗುಂಡಿ ಮುಚ್ಚುವ ಕಾರ್ಯ ಸಕ್ರಿಯವಾಗಿದೆ ಎಂದು ವಲಯ ಆಯುಕ್ತ ರಮೇಶ್ ತಿಳಿಸಿದರು.

ದೊಡ್ಡನೆಕ್ಕುಂದಿ ಬಳಿಯ ಐಟಿಪಿಎಲ್ ರಸ್ತೆಯಲ್ಲಿ ಗುಂಡಿಗಳನ್ನು ಮುಚ್ಚುವ ಕಾರ್ಯವನ್ನು ಪರಿಶೀಲಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಜಲಮಂಡಳಿ, ಬೆಸ್ಕಾಂ ಸೇರಿದಂತೆ ವಿವಿಧ ಇಲಾಖೆಗಳು ರಸ್ತೆ ಕತ್ತರಿಸಿರುವ ಭಾಗದಲ್ಲಿ ಕೆಲಸ ಪೂರ್ಣಗೊಂಡ ಬಳಿಕ ಸಂಬಂಧಪಟ್ಟ ಇಲಾಖೆಯಿಂದಲೇ ದುರಸ್ತಿ ಕಾರ್ಯ ಮಾಡಬೇಕು ಎಂದರು.

‘ರಸ್ತೆ ಗುಂಡಿ ಗಮನ’ ಹಾಗೂ ‘ಸಹಾಯ 2.0’ ತಂತ್ರಾಂಶದಲ್ಲಿ ಬಂದ ದೂರುಗಳು ಸೇರಿದಂತೆ, ಎಂಜಿನಿಯರ್‌ಗಳು ಗುರುತಿಸಿರುವ ರಸ್ತೆಗಳನ್ನೂ ಪರಿಶೀಲಿಸಿ, ಗುಂಡಿಗಳನ್ನು ಮುಚ್ಚಲಾಗುತ್ತಿದೆ ಎಂದು ತಿಳಿಸಿದರು.

ವಲಯ ಜಂಟಿ ಆಯುಕ್ತೆ ದಾಕ್ಷಾಯಿಣಿ, ಕಾರ್ಯಪಾಲಕ ಎಂಜಿನಿಯರ್‌ಗಳಾದ ಉದಯ್ ಚೌಗುಲೆ, ರವಿ ಕುಮಾರ್, ಸಹಾಯ ಕಾರ್ಯಪಾಲಕ ಎಂಜಿನಿಯರ್‌ ಪ್ರಕಾಶ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.