ADVERTISEMENT

ಆಟೊ ಚಾಲಕರ ಮಕ್ಕಳ ನೆರವಿಗೆ ಸಿದ್ಧ: ನಿರ್ಮಲಾನಂದನಾಥ ಸ್ವಾಮೀಜಿ

ಚಾಲಕರ ದಿನಾಚರಣೆಯಲ್ಲಿ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2025, 16:13 IST
Last Updated 9 ನವೆಂಬರ್ 2025, 16:13 IST
ಸನ್ನಡತೆ ಹೊಂದಿರುವ ಏಳು ಆಟೊ ಚಾಲಕ ಹಾಗೂ ಚಾಲಕಿಯರಿಗೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು.
ಸನ್ನಡತೆ ಹೊಂದಿರುವ ಏಳು ಆಟೊ ಚಾಲಕ ಹಾಗೂ ಚಾಲಕಿಯರಿಗೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು.   

ಬೆಂಗಳೂರು: ಆಟೊ ಚಾಲಕರ ಮಕ್ಕಳು ಶಿಕ್ಷಣ ಪಡೆಯಲು ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದರೆ, ಅಂತಹ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ಆದಿ ಚುಂಚನಗಿರಿ ಮಠ ವಹಿಸಿಕೊಳ್ಳಲು ಸಿದ್ಧವಿದೆ ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ನಟ ‘ಶಂಕರ್‌ನಾಗ್‌’ ಅವರ ಜನ್ಮದಿನದ ಪ್ರಯುಕ್ತ ಪೀಸ್‌ ಆಟೊ ಮತ್ತು ಟ್ಯಾಕ್ಸಿ ಡ್ರೈವರ್‌ ಅಸೋಸಿಯೇಷನ್‌, ಆದರ್ಶ ಆಟೊ ಮತ್ತು ಟ್ಯಾಕ್ಸಿ ಚಾಲಕರ ಸಂಘ ಹಾಗೂ ವಿಷ್ಣು ಸೇನಾ ಸಮಿತಿ ಆಯೋಜಿಸಿದ್ದ 12ನೇ ವರ್ಷದ ಚಾಲಕರ ದಿನಾಚರಣೆ ಹಾಗೂ ಸನ್ನಡತೆಯ ಚಾಲಕರಿಗೆ ಚಿನ್ನದ ಪದಕ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಇಂದು ನಾಲ್ಕನೇ ಕೈಗಾರಿಕಾ ಕ್ರಾಂತಿಯಲ್ಲಿ ನಾವೆಲ್ಲ ಬದುಕುತ್ತಿದ್ದೇವೆ. ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನ ದೊಡ್ಡಮಟ್ಟದಲ್ಲಿ ಬೆಳೆಯುತ್ತಿದ್ದು, ಆಟೊ ಚಾಲಕರು ಸಹ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಕನಿಷ್ಠ ಪಕ್ಷ ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಬೇಕು’ ಎಂದು ಅಭಿಪ್ರಾಯಪಟ್ಟರು.

ADVERTISEMENT

ಶಾಸಕ ಸಿ.ಎನ್‌. ಅಶ್ವತ್ಥ ನಾರಾಯಣ ಮಾತನಾಡಿ, ‘ಆಟೊ ಚಾಲಕರ ಸರ್ವಾಂಗೀಣ ಅಭಿವೃದ್ಧಿಗಾಗಿ ಸರ್ಕಾರವು ಆಟೊ ಅಭಿವೃದ್ಧಿ ನಿಗಮ ರಚಿಸಲು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಶಾಸಕ ಸಿ.ಕೆ. ರಾಮಮೂರ್ತಿ ಮಾತನಾಡಿ, ‘ವೈಟ್‌ ಬೋರ್ಡ್‌ ವಾಹನಗಳಲ್ಲಿ ವಾಣಿಜ್ಯ ಸಂಚಾರವನ್ನು ನಿಷೇಧಿಸಲು ಮುಂದಿನ ಅಧಿವೇಶನದಲ್ಲಿ ನಾವು ಧ್ವನಿ ಎತ್ತುತ್ತೇವೆ. ಸರ್ಕಾರಕ್ಕೆ ತೆರಿಗೆ ಪಾವತಿಸದೇ ಅನಧಿಕೃತವಾಗಿ ವಾಣಿಜ್ಯ ಸಂಚಾರ ನಡೆಸುತ್ತಿದ್ದಾರೆ’ ಎಂದು ತಿಳಿಸಿದರು.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ನಟಿ ರಚಿತಾ ರಾಮ್‌, ನಿರ್ದೇಶಕರಾದ ರಾಜೇಂದ್ರ ಸಿಂಗ್‌ ಬಾಬು, ನಟ ಡಾರ್ಲಿಂಗ್‌ ಕೃಷ್ಣ, ನಿರ್ದೇಶಕ ಶಶಾಂಕ್‌, ನಟ ವಿನೋದ್‌ ಪ್ರಭಾಕರ್‌, ಪೀಸ್‌ ಆಟೊ ಮತ್ತು ಟ್ಯಾಕ್ಸಿ ಡ್ರೈವರ್‌ ಅಸೋಸಿಯೇಷನ್‌ ಅಧ್ಯಕ್ಷ ರಘು ನಾರಾಯಣ ಗೌಡ, ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್‌ ಉಪಸ್ಥಿತರಿದ್ದರು.

ಸನ್ನಡತೆ ಹೊಂದಿರುವ ಏಳು ಆಟೊ ಚಾಲಕ ಹಾಗೂ ಚಾಲಕಿಯರಿಗೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು. 4 ಸಾವಿರ ಆಟೊ ಚಾಲಕರಿಗೆ ಸಮವಸ್ತ್ರ ವಿತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.