ಡಿವೈಎಸ್‌ಪಿ ನಂಜುಂಡಯ್ಯ ಮತ್ತು ಪತ್ನಿ ಲಾವಣ್ಯಾ
ನೆಲಮಂಗಲ: ‘ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ್ದಾರೆ’ ಎಂದು ಆರೋಪಿಸಿ ಮಾಜಿ ಡಿವೈಎಸ್‌ಪಿ ನಂಜುಂಡಯ್ಯ ಅವರ ವಿರುದ್ಧ ದೂರು ನೀಡಲಾಗಿದ್ದು, ನೆಲಮಂಗಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಕನಕಪುರ ಮುಖ್ಯರಸ್ತೆಯ ಒ.ಬಿ.ಚೌಡಹಳ್ಳಿಯ ಉದ್ಯಮಿ ಟಿ.ಮೋಹನ್‌ಕುಮಾರ್ ಅವರು ನೀಡಿದ ದೂರು ಆಧರಿಸಿ ನಂಜುಂಡಯ್ಯ, ಆರ್.ಲಾವಣ್ಯಾ ಹಾಗೂ ಹೇಮಂತ್‌ಕುಮಾರ್ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ನಂಜುಂಡಯ್ಯ ಅವರು ರಾಜಾನುಕುಂಟೆಯಲ್ಲಿ ನೆಲಸಿದ್ದಾರೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 316(2), 318(4), 336(2), 351(2), 352, 61(2), 3(5) ಅಡಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
‘ಪ್ರಕರಣದ ಸಂಬಂಧ ನಂಜುಂಡಯ್ಯ ಅವರನ್ನು ವಿಚಾರಣೆ ನಡೆಸಲಾಗಿದೆ. ಚನ್ನಪಟ್ಟಣ ಪೊಲೀಸ್ ತರಬೇತಿ ಕೇಂದ್ರದಲ್ಲಿ (ಡಿಎಆರ್) ನಂಜುಂಡಯ್ಯ ಅವರು ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಸ್ವಯಂ ನಿವೃತ್ತಿ ತೆಗೆದುಕೊಂಡಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ನಂಜುಂಡಯ್ಯ ಅವರು ನಮ್ಮ 9 ಎಕರೆ ಜಮೀನು ಅಭಿವೃದ್ಧಿ ಪಡಿಸಿ, ನಿವೇಶನ ಮಾರಾಟ ಮಾಡಿ ಹಣ ನೀಡುವುದಾಗಿ ಹೇಳಿ ಜಮೀನು ತೆಗೆದುಕೊಂಡಿದ್ದರು. ಒಪ್ಪಂದದ ಕರಾರು ಮಾಡಿಸಿಕೊಂಡು ವಂಚನೆ ನಡೆಸಿದ್ದಾರೆ’ ಎಂದು ಆರೋಪಿಸಿ ನಂಜುಂಡಯ್ಯ ಅವರ ಸಂಬಂಧಿಯೂ ಆಗಿರುವ ಟಿ.ಮೋಹನ್ ಕುಮಾರ್ ಅವರು ದೂರು ನೀಡಿದ್ದಾರೆ.
‘ತಮ್ಮ ಗಮನಕ್ಕೆ ಬಾರದಂತೆ ನಕಲಿ ಸಹಿ ಮಾಡಿ ಒಂದೇ ನಿವೇಶನವನ್ನು ಹಲವರಿಗೆ ಕರಾರು ಮಾಡಿದ್ದು, ಪ್ರಶ್ನೆ ಮಾಡಿದರೆ ಬೆದರಿಕೆ ಹಾಕಿದ್ದಾರೆ. ಹಣ ನೀಡುವುದಾಗಿ ಕ್ರಯ ಮಾಡಿಸಿಕೊಂಡು ಹಣ ನೀಡದೆ ಬೆದರಿಸಿ ನನ್ನಿಂದ ಕ್ರಯಪತ್ರಗಳನ್ನು ಪಡೆದಿರುತ್ತಾರೆ’ ಎಂದು ಮೋಹನ್ ಕುಮಾರ್ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.