ADVERTISEMENT

ಬಸವಣ್ಣನ ಇತಿಹಾಸಕ್ಕೆ ಅಪಚಾರ ಮಾಡಬೇಡಿ: ಇಳಕಲ್ ಗುರುಮಹಾಂತ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 4 ಜೂನ್ 2022, 8:49 IST
Last Updated 4 ಜೂನ್ 2022, 8:49 IST
ಇಳಕಲ್ ಚಿತ್ತರಗಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಗುರುಮಹಾಂತ ಸ್ವಾಮೀಜಿ
ಇಳಕಲ್ ಚಿತ್ತರಗಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಗುರುಮಹಾಂತ ಸ್ವಾಮೀಜಿ   

ಬೆಂಗಳೂರು: 'ಪಠ್ಯಪುಸ್ತಕಗಳಲ್ಲಿ ಬಸವಣ್ಣನ ಇತಿಹಾಸಕ್ಕೆ ಅಪಚಾರ ಮಾಡದೆ ನೈಜ ವಿಚಾರವನ್ನೇ ಮುದ್ರಿಸಬೇಕು. ಮುಂದಿನ‌ ಮಕ್ಕಳಿಗೆ ಅನುಭವ ಮಂಟಪದ ಮೌಲ್ಯಗಳನ್ನು ತಿರುಚದೆ ಸಾರಬೇಕು' ಎಂದು ಇಳಕಲ್ ಚಿತ್ತರಗಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಗುರುಮಹಾಂತ ಸ್ವಾಮೀಜಿ ರಾಜ್ಯ ಸರ್ಕಾರಕ್ಕೆ ವಿನಂತಿಸಿದರು.

ಶನಿವಾರ ಇಲ್ಲಿ ನಡೆದ ಕರ್ನಾಟಕ ವಚನ ಸಾಹಿತ್ಯ ಪರಿಷತ್ತಿನ ಎರಡನೇ ರಾಜ್ಯ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 'ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದ ಬಸವಣ್ಣ ಶೈವ ಗುರುಗಳಿಂದ ಹೇಗೆತಾನೆ ಲಿಂಗ ದೀಕ್ಷೆ ಪಡೆಯಲು ಸಾಧ್ಯ' ಎಂದು ಪ್ರಶ್ನಿಸಿದರು.

'ತನ್ನ‌ ಸಹೋದರಿ ಅಕ್ಕನಾಗಾಯಿಗೂ ಜನಿವಾರ ತೊಡಿಸಿ ದೀಕ್ಷೆ ಕೊಡಿ ಎಂದಾಗ ಪುರೋಹಿತರು ದೀಕ್ಷೆ ಕೊಡಲಿಲ್ಲ. ತನ್ನ ಅಕ್ಕನಿಗೆ ದೀಕ್ಷೆ ನೀಡಲು ನಿರಾಕರಿಸಿದ ಪುರೋಹಿತರ ಧೋರಣೆಯನ್ನು ಅವನು ಧಿಕ್ಕರಿಸಿದ. ಹೆಣ್ಣನ್ನು ಶೂದ್ರ ಎಂದ ಪುರೋಹಿತರನ್ನು ಪ್ರಶ್ನಿಸಿದ' ಎಂದರು.

ADVERTISEMENT

'ಬಸವಣ್ಣನ ಪ್ರಶ್ನಿಸುವ ಮನೋಭಾವದಿಂದ ಸಿಟ್ಟಿಗೆದ್ದ ಪುರೋಹಿತರು ಅವನ‌ ಕುಟುಂಬಕ್ಕೆ ಬಹಿಷ್ಕಾರ ಹಾಕಲು ಮುಂದಾದರು. ದಯಾಮಯಿ ಹಾಗೂ ಕರುಣಾಮಯಿಯಾದ ಬಸವಣ್ಣ ತನ್ನಿಂದ ತಂದೆ-ತಾಯಿ ಬಹಿಷ್ಕಾರಕ್ಕೆ ಒಳಗಾಗುವುದು ಬೇಡ ಎಂಬ ಕಾರಣಕ್ಕಾಗಿಯೇ ಮನೆ ಬಿಟ್ಟು ಹೊರಟ' ಎಂದರು.

'ಮಹಿಳೆಯರಿಗೆ ಸಮಾನತೆ ಕಲ್ಪಿಸುವ ದಿಸೆಯಲ್ಲಿ ಅವನು ಇಟ್ಟ ಮೊದಲ ಹೆಜ್ಜೆ ಅಕ್ಕನಾಗಾಯಿಗೆ ಇಷ್ಟಲಿಂಗ ದೀಕ್ಷೆ ಕೊಟ್ಟದ್ದು. ಮುಂದೆ ತನ್ನ ಹೋರಾಟದ ಹಾದಿಯಲ್ಲಿ ಅವನು ಸ್ಥಾಪಿಸಿದ ಅನುಭವ ಮಂಟಪ ಇವತ್ತು ವಿಶ್ವಸಂಸ್ಥೆಗೇ ಮಾದರಿಯಾಗಿದೆ. ಹೀಗಿರುವಾಗ ಪಠ್ಯಪುಸ್ತಕದಲ್ಲಿ ಇತಿಹಾಸವನ್ನು ತಿರುಚಿ, ಅಪಚಾರ ಎಸಗಿ ಮಕ್ಕಳಿಗೆ ನೈಜತೆಯನ್ನು ಮರೆಮಾಚುವ ಕೆಲಸವನ್ನು ಸರ್ಕಾರ ಮಾಡಬಾರದು' ಎಂದರು.

'ಜನಿವಾರ ಅಸಮಾನತೆಯ ಪ್ರತೀಕ ಎಂಬ ಕಾರಣಕ್ಕಾಗಿ ಇಷ್ಟಲಿಂಗದ ಮೂಲಕ ಜಾತಿ ಸಮಾನತೆ, ಲಿಂಗ ಸಮಾನತೆ, ಅಂತರಜಾತಿ ವಿವಾಹದಂತಹ ಸುಧಾರಣೆಗಳನ್ನು ಜಾರಿಗೆ ತಂದ. ಅವನು ವೀರಶೈವ ಧರ್ಮ ಉದ್ಧರಿಸಲಿಲ್ಲ. ಬದಲಾಗಿ ಲಿಂಗಾಯತ ಧರ್ಮ ಸ್ಥಾಪನೆ ಮಾಡಿದ' ಎಂದು ವಿವರಿಸಿದರು.

'ಸರ್ಕಾರ ಕೂಡಲೇ ತನ್ನ ತಪ್ಪನ್ನು ತಿದ್ದಿಕೊಂಡು ನಡೆಯಬೇಕು' ಎಂದು ಅವರು ಮೂರು ಬಾರಿ ವಿನಂತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.