ADVERTISEMENT

ರುಪ್ಸಾ ಹೆಸರು ದುರ್ಬಳಕೆ: ಲೋಕೇಶ್ ತಾಳಿಕಟ್ಟೆ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2022, 20:11 IST
Last Updated 29 ಆಗಸ್ಟ್ 2022, 20:11 IST

ಬೆಂಗಳೂರು: ‘ಅನುದಾನ ರಹಿತ ಖಾಸಗಿ ಶಾಲೆಗಳ ಸಂಘದಿಂದ (ರುಪ್ಸಾ) ಉಚ್ಚಾಟಿತಗೊಂಡಿರುವ ಲೋಕೇಶ್ ತಾಳಿಕಟ್ಟೆ, ವೈಯಕ್ತಿಕ ಲಾಭಕ್ಕಾಗಿ ಶಿಕ್ಷಣ ಇಲಾಖೆ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ನಮ್ಮ ಸಂಘದ ಹೆಸರನ್ನು ದುರ್ಬಳಕೆ ಮಾಡಿದ ಅವರ ಮೇಲೆ ಕಾನೂನು ಕ್ರಮಕ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗುವುದು’ ಎಂದು ರುಪ್ಸಾ ಪ್ರಧಾನ ಕಾರ್ಯದರ್ಶಿ ಶಶಿಧರ್‌ ದಿಂಡೂರ್‌ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಳೆದ ವರ್ಷವೇ ತಾಳಿಕಟ್ಟೆ ಅವರನ್ನು ಉಚ್ಚಾಟನೆ ಮಾಡಲಾಗಿತ್ತು. ಅವರು ನಮ್ಮ ಸಂಘದ ಹೆಸರಿನಲ್ಲಿಯೇ ಮತ್ತೊಂದು ನಕಲಿ ಸಂಘ ರಚಿಸಿದ್ದರು. ಇವರ ವಂಚನೆ ದೃಢಪಟ್ಟ ಬಳಿಕ ಸಹಕಾರ ಸಂಘಗಳ ಉಪನಿಬಂಧಕರು, ‘ರುಪ್ಸಾ’ ಸಂಘದ ಹೆಸರು ಹಾಗೂ ಲೋಗೊ ಬಳಸದಂತೆ ಆದೇಶ ನೀಡಿದ್ದಾರೆ‘ ಎಂದರು.

‘ಶಿಕ್ಷಣ ಸಂಸ್ಥೆಗಳ ಮಾನ್ಯತೆ ನವೀಕರಣ ಆನ್‌ಲೈನ್ ಮೂಲಕ ಮಾಡಲಾಗುತ್ತಿದೆ. ಆರ್‌ಟಿಇ ಅಡಿ ಹೊಸದಾಗಿ ಪ್ರವೇಶಾತಿ ನೀಡಲಾಗುತ್ತಿಲ್ಲ. ಹೀಗಾಗಿ, ಭ್ರಷ್ಟಾಚಾರದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಕೆಲವರ ಓಲೈಕೆಗಾಗಿ ಅವರು ‘ಆರ್‌ಟಿಇ ಶುಲ್ಕ ಪಾವತಿಸಲು ಶೇ 40ರಷ್ಟು ಲಂಚ ನೀಡಬೇಕಿದೆ’ ಎಂದು ಹೇಳಿದ್ದಾರೆ‘ ಎಂದರು.

ADVERTISEMENT

‘ತಪ್ಪು ಮಾಹಿತಿ: ಮಾನನಷ್ಟ ಮೊಕದ್ದಮೆ’
‘ನನ್ನ ಮತ್ತು ಸಂಘಟನೆ ಅಸ್ತಿತ್ವದ ವಿರುದ್ಧ ಶಶಿಧರ್ ದಿಂಡೂರು ಮತ್ತು ಹಾಲ್ನೂರು ಲೇಪಾಕ್ಷಿ ತಪ್ಪುಮಾಹಿತಿ ನೀಡಿದ್ದಾರೆ. ಕಳೆದ ವರ್ಷ ಕೂಡ ಇದೇ ವ್ಯಕ್ತಿಗಳು ಸುದ್ದಿಗೋಷ್ಠಿ ನಡೆಸಿದ್ದರು. ಅವರ ಕಾನೂನುಬಾಹಿರ ಹೇಳಿಕೆಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಗೂ ನ್ಯಾಯಾಂಗ ನಿಂದನೆ ಪ್ರಕರಣ ದಾಖಲು ಮಾಡುತ್ತೇನೆ’ ಎಂದು ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಸಂಘದ (ರುಪ್ಸಾ) ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಪ್ರತಿಕ್ರಿಯಿಸಿದ್ದಾರೆ.

‘ಅಧಿಕಾರಿಗಳ ಭ್ರಷ್ಟಾಚಾರದ ಕುರಿತು ರಾಜ್ಯದಾದ್ಯಂತ ಇರುವ ಖಾಸಗಿ ಶಾಲೆಗಳು ಧ್ವನಿ ಎತ್ತಿದಾಗಲೆಲ್ಲಾ ಸರ್ಕಾರದ ಪರ ಅವರು ವಕಾಲತ್ತು ವಹಿಸುತ್ತಾರೆ. ಜನರು ಮತ್ತು ಮಾಧ್ಯಮಗಳಗಮನ ಬೇರೆಡೆಗೆ ಸೆಳೆಯುವ ತಂತ್ರ ಮಾಡುತ್ತಾರೆ. ಹಿಂದೆ, ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಹಕಾರ ಇಲಾಖೆಯ ಅಧಿಕಾರಿಗಳ ಸಹಾಯದಿಂದ ಪಡೆದಿದ್ದ ಆದೇಶವನ್ನು ಹೈಕೋರ್ಟ್ ಅಮಾನ್ಯಗೊಳಿಸಿದೆ‌’ ಎಂದೂ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.