ADVERTISEMENT

Bengaluru Crime: ₹1.75 ಕೋಟಿ ಮೌಲ್ಯದ ರಕ್ತಚಂದನ ಜಪ್ತಿ

ಮೂವರ ಬಂಧನ, ಹುಳಿಮಾವು–ಆರ್.ಟಿ. ನಗರ ಠಾಣೆಯ ಪೊಲೀಸರ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2025, 16:08 IST
Last Updated 4 ಡಿಸೆಂಬರ್ 2025, 16:08 IST
ಆರೋಪಿಗಳಿಂದ ಜಪ್ತಿ ಮಾಡಿಕೊಂಡ ರಕ್ತಚಂದನ ಮರದ ತುಂಡುಗಳನ್ನು ನಗರ ಪೊಲೀಸ್‌ ಕಮಿಷನರ್ ಸೀಮಾಂತ್‌ಕುಮಾರ್ ಸಿಂಗ್‌ ಅವರು ಪರಿಶೀಲಿಸಿದರು   
ಆರೋಪಿಗಳಿಂದ ಜಪ್ತಿ ಮಾಡಿಕೊಂಡ ರಕ್ತಚಂದನ ಮರದ ತುಂಡುಗಳನ್ನು ನಗರ ಪೊಲೀಸ್‌ ಕಮಿಷನರ್ ಸೀಮಾಂತ್‌ಕುಮಾರ್ ಸಿಂಗ್‌ ಅವರು ಪರಿಶೀಲಿಸಿದರು      

ಬೆಂಗಳೂರು: ಹುಳಿಮಾವು ಹಾಗೂ ಆರ್.ಟಿ.ನಗರ ಠಾಣೆಯ ಪೊಲೀಸರು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಕಾರ್ಯಾಚರಣೆ ನಡೆಸಿ, ಅಕ್ರಮವಾಗಿ ರಕ್ತಚಂದನ ಮರದ ತುಂಡುಗಳನ್ನು ಮಾರಾಟ ಮಾಡುತ್ತಿದ್ದ ಮೂವರನ್ನು ಬಂಧಿಸಿದ್ದಾರೆ.

ಆರೋಪಿಗಳಿಂದ ₹1.75 ಕೋಟಿ ಮೌಲ್ಯದ 1,897 ಕೆ.ಜಿ ರಕ್ತಚಂದನ ಮರದ ತುಂಡುಗಳನ್ನು ಜಪ್ತಿ ಮಾಡಿದ್ದಾರೆ.

ಥಣಿಸಂದ್ರದ ಅಹಮದ್‌ ಪಾಷಾ ಎಂಬಾತನನ್ನು ಹುಳಿಮಾವು ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶದ ರಾಜಶೇಖರ್ ಹಾಗೂ ವರಪ್ರಸಾದ್ ಎಂಬುವವರನ್ನು ಆರ್‌.ಟಿ.ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ADVERTISEMENT

ರಾಜಶೇಖರ್ ಹಾಗೂ ವರಪ್ರಸಾದ್ ಪದವೀಧರರು. ಉದ್ಯೋಗ ಹುಡುಕುವ ಬದಲು ಆಂಧ್ರಪ್ರದೇಶದ ಮದನಪಲ್ಲಿಯ ಸುಂಡೆಪಲ್ಲಿ ಬಳಿ ರಕ್ತಚಂದನ ಮರದ ತುಂಡುಗಳನ್ನು ಕಳ್ಳತನ ಮಾಡುತ್ತಿದ್ದರು. ನಂತರ, ರಕ್ತಚಂದನದ ತುಂಡುಗಳನ್ನು ಬೊಲೆರೊ ವಾಹನದಲ್ಲಿ ನಗರಕ್ಕೆ ತಂದು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು. ಇಬ್ಬರಿಂದ ₹75 ಲಕ್ಷ ಮೌಲ್ಯದ 754 ಕೆ.ಜಿ ಮರದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.

ಹುಳಿಮಾವು ಪೊಲೀಸರು ಬಂಧಿಸಿರುವ ಅಹಮದ್‌ ಪಾಷಾ ಎಂಬಾತ ಆಂಧ್ರಪ್ರದೇಶ ಕಡಪದಿಂದ ರಕ್ತಚಂದನ ತರಿಸಿಕೊಂಡು, ತಮಿಳುನಾಡಿಗೆ ಹೋಗಿ ಮಾರಾಟ ಮಾಡುತ್ತಿದ್ದ. ಈತನೊಂದಿಗೆ ಕೃತ್ಯದಲ್ಲಿ ಭಾಗಿಯಾಗಿದ್ದ ಬಾಲಕನನ್ನು ವಶಕ್ಕೆ ಪಡೆದು ಬಾಲಮಂದಿರಕ್ಕೆ ಕಳುಹಿಸಲಾಗಿದೆ. ಅಹಮದ್‌ ಪಾಷಾ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ.

ಆರು ತಿಂಗಳ ಹಿಂದೆ ಪರಿಚಯವಾದ ವ್ಯಕ್ತಿಯಿಂದ ರಕ್ತಚಂದನ ಮಾರಾಟದ ಬಗ್ಗೆ ಅಹಮದ್‌ ಪಾಷಾ ತಿಳಿದುಕೊಂಡಿದ್ದ. ಕಡಿಮೆ ಅವಧಿಯಲ್ಲಿ ಹೆಚ್ಚಿನ ಹಣ ಸಂಪಾದಿಸುವ ಉದ್ದೇಶದಿಂದ ಆರೋಪಿ, ಕಡಿಮೆ ಬೆಲೆಗೆ ರಕ್ತಚಂದನ ಖರೀದಿಸಿ, ನಗರಕ್ಕೆ ತಂದು ನಂತರ ತಮಿಳುನಾಡಿಗೆ ಸಾಗಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ. ಈ ಪ್ರಕರಣದಲ್ಲಿ ಆರೋಪಿಗಳಿಂದ ₹1 ಕೋಟಿ ಮೌಲ್ಯದ 1,143 ಕೆ.ಜಿ ರಕ್ತಚಂದನ, ಕೃತ್ಯಕ್ಕೆ ಬಳಸಿದ್ದ ಮೂರು ಕಾರುಗಳನ್ನು ಜಪ್ತಿ ಮಾಡಲಾಗಿದೆ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.