ADVERTISEMENT

ನೀರಿನ ಸಂಪಿನಲ್ಲಿ ರಕ್ತಚಂದನ ಬಚ್ಚಿಟ್ಟು ಮಾರಾಟ

ಆಂಧ್ರಪ್ರದೇಶದಿಂದ ಅಕ್ರಮ ಸಾಗಣೆ: ಹೆಸರಘಟ್ಟದಲ್ಲಿ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 26 ಜುಲೈ 2022, 21:41 IST
Last Updated 26 ಜುಲೈ 2022, 21:41 IST
ಬ್ಯಾಟರಾಯನಪುರ ಪೊಲೀಸರು ಆರೋಪಿಯಿಂದ ಜಪ್ತಿ ಮಾಡಿರುವ ರಕ್ತಚಂದನ ತುಂಡುಗಳು
ಬ್ಯಾಟರಾಯನಪುರ ಪೊಲೀಸರು ಆರೋಪಿಯಿಂದ ಜಪ್ತಿ ಮಾಡಿರುವ ರಕ್ತಚಂದನ ತುಂಡುಗಳು   

ಬೆಂಗಳೂರು: ತೋಟದ ಮನೆಯ ನೀರಿನ ಸಂಪಿನಲ್ಲಿ ರಕ್ತಚಂದನ ಬಚ್ಚಿಟ್ಟು ಮಾರುತ್ತಿದ್ದ ಜಾಲ ಭೇದಿಸಿರುವ ಬ್ಯಾಟರಾಯನಪುರ ಪೊಲೀಸರು, ಆರೋಪಿ ವಿನೋದ್ ಎಂಬುವರನ್ನು ಬಂಧಿಸಿದ್ದಾರೆ.

‘ಮೈಸೂರು ರಸ್ತೆಯ ಸ್ಯಾಟ್‌ಲೈಟ್ ಬಸ್‌ ನಿಲ್ದಾಣ ಬಳಿಯ ನ್ಯೂ ಟಿಂಬರ್ ಬಡಾವಣೆಯಲ್ಲಿ ಆರೋಪಿ ವಿನೋದ್ ಹಾಗೂ ಸಹಚರ ಅಕ್ರಮವಾಗಿ ರಕ್ತಚಂದನ ಮಾರುತ್ತಿದ್ದರು. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ದಾಳಿ ಮಾಡಲಾಗಿತ್ತು. ಅಜಯ್ ಓಡಿಹೋದ. ವಿನೋದ್ ಸಿಕ್ಕಿಬಿದ್ದ’ ಎಂದು ಪೊಲೀಸರು ಹೇಳಿದರು.

‘ತಮಿಳುನಾಡಿನ ವಿನೋದ್, ರಕ್ತಚಂದನ ಮಾರಲೆಂದೇ ನಗರಕ್ಕೆ ಆಗಾಗ ಬಂದು ಹೋಗುತ್ತಿದ್ದ. ಬಂಧಿತ ವಿನೋದ್ ನೀಡಿದ್ದ ಮಾಹಿತಿ ಆಧರಿಸಿ ₹2.68 ಕೋಟಿ ಮೌಲ್ಯದ 1,693 ಕೆ.ಜಿ ರಕ್ತಚಂದನ ತುಂಡುಗಳನ್ನು ಜಪ್ತಿ ಮಾಡಲಾಗಿದೆ. ರಕ್ತಚಂದನ ಅಕ್ರಮ ಸಾಗಣೆ ಹಾಗೂ ಮಾರಾಟದಲ್ಲಿ ಭಾಗಿಯಾಗಿದ್ದ ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದೆ’ ಎಂದೂ ತಿಳಿಸಿದರು.

ADVERTISEMENT

ಹೆಸರಘಟ್ಟದಲ್ಲಿ ಸಂಗ್ರಹ: ‘ಜಾಲದ ಪ್ರಮುಖ ಆರೋಪಿಗಳು ರಕ್ತಚಂದನವನ್ನು ಆಂಧ್ರಪ್ರದೇಶದಿಂದ ಬೆಂಗಳೂರಿಗೆ ತರುತ್ತಿದ್ದರು. ವಿನೋದ್ ಹಾಗೂ ಇತರರು ರಕ್ತ ಚಂದನವನ್ನು ನಗರದಲ್ಲಿ ಮಾರಾಟ ಮಾಡುತ್ತಿದ್ದರು’ ಎಂದು ಪೊಲೀಸರು ಹೇಳಿದರು.

‘ಹೆಸರಘಟ್ಟ ಬಳಿಯ ತೋಟದ ಮನೆಯೊಂದರ ನೀರಿನ ಸಂಪಿನಲ್ಲಿ ರಕ್ತಚಂದನ ತುಂಡುಗಳನ್ನು ವಿನೋದ್ ಬಚ್ಚಿಡುತ್ತಿದ್ದ. ಅಲ್ಲಿಂದಲೇ ಗ್ರಾಹಕರಿಗೆ ರಕ್ತಚಂದನ ತುಂಡುಗಳನ್ನು ಪೂರೈಕೆ ಮಾಡುತ್ತಿದ್ದ. ವಿನೋದ್ ಬಂಧನವಾಗುತ್ತಿದ್ದಂತೆ ತೋಟದ ಮನೆ ಮೇಲೆ ದಾಳಿ ಮಾಡಿ ರಕ್ತಚಂದನ ಜಪ್ತಿ ಮಾಡಲಾಯಿತು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.