ಬೆಂಗಳೂರು: ಹಿಂದುಳಿದ ವರ್ಗಗಳ ಆಯೋಗ ನಡೆಸಿರುವ ‘ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ’ಯ (ಜಾತಿವಾರು ಜನಗಣತಿ) ವರದಿ ಅವೈಜ್ಞಾನಿಕವಾಗಿದ್ದು, ಸರ್ಕಾರ ತಿರಸ್ಕರಿಸಬೇಕು ಎಂದು ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪಗೌಡ ಆಗ್ರಹಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘2014–15ರಲ್ಲಿ ಆಯೋಗ ಸಮೀಕ್ಷೆ ನಡೆಸಿತ್ತು. ಮನೆ ಮನೆಗೆ ಹೋಗಿ ಸರಿಯಾದ ಮಾಹಿತಿ ಪಡೆದಿಲ್ಲ ಎಂಬ ಆರೋಪವಿದೆ. ಹಾಗಾಗಿ ಸರ್ಕಾರ ವರದಿಯನ್ನು ಅನುಷ್ಠಾನಕ್ಕೆ ತರಬಾರದು. ಮುಂದಿನ ಹೋರಾಟದ ರೂಪುರೇಷೆಗಳನ್ನು ನಿರ್ಧರಿಸಲು ಜನವರಿ 12 ರಂದು ಕಿಮ್ಸ್ ಆವರಣದಲ್ಲಿ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿಯವರ ನೇತೃತ್ವದಲ್ಲಿ ಸಭೆ ನಡೆಯಲಿದೆ. ಪಟ್ಟನಾಯಕನಹಳ್ಳಿ ಮಠದ ನಂಜಾವಧೂತ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಠದ ನಿಶ್ಚಲಾನಂದನಾಥ ಸ್ವಾಮೀಜಿ ಹಾಗೂ ಸಮುದಾಯದ ಸಚಿವರು, ಶಾಸಕರ ಭಾಗವಹಿಸುವರು’ ಎಂದು ತಿಳಿಸಿದರು.
ವರದಿ ಪ್ರಕಾರ ರಾಜ್ಯದ ಜನಸಂಖ್ಯೆ 5.98 ಕೋಟಿ. ಆದರೆ, ಈಗ ರಾಜ್ಯದ ಜನಸಂಖ್ಯೆ 7 ಕೋಟಿ. ಇನ್ನೂ ಒಂದು ಕೋಟಿ ಜನರು ಸಮೀಕ್ಷೆಯಿಂದ ಹೊರಗುಳಿದಂತಾಗಿದೆ. ಹತ್ತು ವರ್ಷಗಳಷ್ಟು ಹಳೆಯದಾಗಿರುವ ಸಮೀಕ್ಷಾ ವರದಿ ಅನುಷ್ಠಾನ ಮಾಡಿದರೆ ಒಕ್ಕಲಿಗ ಸೇರಿದಂತೆ ಹಲವು ಸಮುದಾಯಗಳಿಗೆ ಅನ್ಯಾಯವಾಗುತ್ತದೆ ಎಂದು ಹೇಳಿದರು.
ವಿರೋಧದ ಮಧ್ಯೆಯೂ ಸರ್ಕಾರ ವರದಿ ಅನುಷ್ಠಾನ ಮಾಡಿದರೆ ವೀರಶೈವ ಮಹಾಸಭಾ ಹಾಗೂ ಇತರೆ ಸಮುದಾಯಗಳ ಜತೆಗೂಡಿ ಹೋರಾಟ ಮಾಡಲಾಗುವುದು. ಕಾನೂನು ಹೋರಾಟ ಸಹ ನಡೆಸಲಾಗುವುದು ಎಂದು ಎಚ್ಚರಿಸಿದರು.
ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿಯ ಅಧ್ಯಕ್ಷ ಗಾ.ನಂ.ಶ್ರೀಕಂಠಯ್ಯ ಮಾತನಾಡಿ, ‘ಹತ್ತು ವರ್ಷಗಳ ಹಳೆಯದಾದ ವರದಿ ಅನುಷ್ಠಾನ ಮಾಡುವುದರಲ್ಲಿ ಅರ್ಥವಿಲ್ಲ. ಹತ್ತು ವರ್ಷದಲ್ಲಿ ಹಲವು ಬದಲಾವಣೆಗಳಾಗಿವೆ. ಜಾತಿವಾರು ಜನಗಣತಿ ನಡೆಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ. ಕೇಂದ್ರ ಸರ್ಕಾರದ ಮೂಲಕವೇ ನಡೆಸಬೇಕು’ ಎಂದು ಒತ್ತಾಯಿಸಿದರು.
ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಕೋನಪ್ಪರೆಡ್ಡಿ ಮಾತನಾಡಿ, ‘ಸಮೀಕ್ಷೆಯಲ್ಲಿ ಶೇಕಡ 40ರಷ್ಟು ಮನೆಗಳಿಗೆ ಭೇಟಿಯನ್ನೇ ನೀಡಿಲ್ಲ. ಹಾಗಾಗಿ ಇದು ಅವೈಜ್ಞಾನಿಕ ವರದಿಯಾಗಿದೆ’ ಎಂದರು.
ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷರಾದ ರೇಣುಕಪ್ರಸಾದ್, ಎಲ್.ಶ್ರೀನಿವಾಸ್, ಸಹಾಯಕ ಕಾರ್ಯದರ್ಶಿ ಆರ್.ಹನುಮಂತರಾಯಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.